ದಕ್ಷಿಣ ಕನ್ನಡ : ದ.ಕ ಜಿಲ್ಲೆಯ ಮುಲ್ಕಿ ಆದಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನದಲ್ಲಿ ನಡೆದಿದ್ದ ಕಳ್ಳತನ ಪ್ರಕರಣದಲ್ಲಿ ನಾಲ್ವರು ಅಂತರ್ ಜಿಲ್ಲಾ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇದೇ ಆರೋಪಿಗಳು ಕಲ್ಲಾಪುವಿನ ಎಸಿಪಿ ಕಚೇರಿಯ ಕಣ್ಣಳತೆಯ ಮಹಾಲಕ್ಷ್ಮಿ-ಗಣಪತಿ ಕ್ಷೇತ್ರಕ್ಕೂ ಕನ್ನ ಹಾಕಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ, ಬೆಳ್ಳಿ ದೋಚಿದ್ದರೆಂಬ ವಿಚಾರ ಇದೀಗ ಬೆಳಕಿಗೆ ಬೆಳಕಿಗೆ ಬಂದಿದೆ.
ಯಾವುದೇ ಸುಳಿವು ಬಿಡದೆ ಕೃತ್ಯ ಎಸಗಿದ್ದ ಕಳ್ಳರ ಶೀಘ್ರ ಪತ್ತೆಗಾಗಿ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಹಿರಿಯ ಅರ್ಚಕರು ಕ್ಷೇತ್ರ ಪಾಲ ಗುಳಿಗನಿಗೆ ಈಡುಗಾಯಿ ಪ್ರಾರ್ಥನೆಯನ್ನು ಸಲ್ಲಿಸಿದ್ದರು. ಗುಳಿಗನ ಪವಾಡವೋ ಎಂಬಂತೆ ತಿಂಗಳ ಅಂತರದಲ್ಲೇ ಖದೀಮರು ಪೊಲೀಸರ ಕೈಗೆ ಸಿಕ್ಕಿ ಬೀಳುವಂತಾಗಿದೆ.
ಸೆ.1ರ ಮಧ್ಯರಾತ್ರಿ, ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಆದಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನದಲ್ಲಿ ನಡೆದಿದ್ದ ಕಳ್ಳತನ ಪ್ರಕರಣದಲ್ಲಿ ಪೊಲೀಸರು ಆರೋಪಿಗಳಾದ ಹೆಜಮಾಡಿಯ ಜಾಹೀದ್ ಸಿನಾನ್ (36) ಕಾರ್ಕಳದ ಯಾಸೀನ್ (36), ದಾವಣಗೆರೆ ನಿವಾಸಿಗಳಾದ ಮಹಮ್ಮದ್ ಅಫ್ರಿದಿ (26) ಮತ್ತು ಎಸ್.ಕೆ. ಅಬ್ದುಲ್ ಜುಮ್ಯಾನ್(26) ಅವರುಗಳನ್ನ ಬಂಧಿಸಿ, ಕಳವು ಮಾಡಲಾಗಿದ್ದ ಸುಮಾರು 11,20,000 ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದರು. ಹೆಚ್ಚಿನ ವಿಚಾರಣೆ ವೇಳೆ ಇದೇ ಆರೋಪಿಗಳು ಇಲ್ಲೂ ಕೃತ್ಯ ನಡೆಸಿರುವುದು ಬಹಿರಂಗವಾಗಿದೆ.
ಮಂಗಳೂರು ದಕ್ಷಿಣ ಉಪ ವಿಭಾಗ ಸಹಾಯಕ ಪೊಲೀಸ್ ಆಯುಕ್ತರ(ಎಸಿಪಿ) ಕಲ್ಲಾಪುವಿನ ಕಚೇರಿಯ ಕಣ್ಣಳತೆಯಲ್ಲಿರುವ ಶ್ರೀ ಮಹಾಲಕ್ಷ್ಮಿ-ಗಣಪತಿ ದೇವಸ್ಥಾನಕ್ಕೆ ಕಳೆದ ಆ. 19ರ ಬುಧವಾರ ತಡರಾತ್ರಿ ನುಗ್ಗಿದ ಕಳ್ಳರು ದೇವಿಯ ವಿಗ್ರಹದ ಲಕ್ಷಾಂತರ ರೂಪಾಯಿ ಬೆಳೆ ಬಾಳುವ ಚಿನ್ನಾಭರಣ, ಬೆಳ್ಳಿ ಕವಚ ದೋಚಿರುವ ಘಟನೆ ನಡೆದಿತ್ತು. ಇಲ್ಲಿನ ಮಹಾಲಕ್ಷ್ಮಿ ಕ್ಷೇತ್ರವಾಗಲಿ, ಪಕ್ಕದ ಎಸಿಪಿ ಕಚೇರಿಯಲ್ಲಾಗಲಿ ಸಿಸಿ ಕ್ಯಾಮೆರಗಳು ಇರಲಿಲ್ಲ.
ಘಟನೆಯಿಂದ ತೀವ್ರ ಬೇಸತ್ತ ಕ್ಷೇತ್ರದ ಹಿರಿಯ ಅರ್ಚಕರಾದ ಬಾಲಕೃಷ್ಣ ಭಟ್ ಅವರು ಕಳ್ಳತನ ಕೃತ್ಯ ನಡೆಸಿದ ಕಿಡಿಗೇಡಿಗಳ ಶೀಘ್ರ ಪತ್ತೆಗಾಗಿ ಪ್ರಾರ್ಥಿಸಿ ಕ್ಷೇತ್ರಪಾಲ ಗುಳಿಗನ ಸನ್ನಿಧಿಯಲ್ಲಿ ಈಡುಗಾಯಿಯನ್ನು ಒಡೆದಿದ್ದರು. ಗುಳಿಗನ ಪವಾಡವೆಂಬಂತೆ ಇದೀಗ ನಾಲ್ಕು ಜನ ಅಂತರ್ ಜಿಲ್ಲಾ ಕಳವು ಆರೋಪಿಗಳು ಆದಿ ಕಿಲ್ಪಾಡಿಯ ಕೋರ್ದಬ್ಬು ದೈವಸ್ಥಾನದ ಕಳ್ಳತನ ಪ್ರಕರಣದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.










