ಪ್ರವಾಸಿಗರಿಗೆ ಮುಳ್ಳಾಗಲಿದೆ ಮುಳ್ಳಾಯನಗಿರಿ ಪ್ರವೇಶ ; ಸೆ.14 ರಂದು ಈ ಗಿರಿಧಾಮಗಳಿಗೆ ತೆರಳುವಂತಿಲ್ಲ!

ಚಿಕ್ಕಮಗಳೂರು: ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ ಚಿಕ್ಕಮಗಳೂರಿನ ಪ್ರಸಿದ್ಧ ಗಿರಿಧಾಮಗಳಿಗೆ ತೆರಳಲು ಯೋಚಿಸುತ್ತಿರುವ ಪ್ರವಾಸಿಗರಿಗೆ ಜಿಲ್ಲಾಡಳಿತ ಮಹತ್ವದ ಸೂಚನೆ ನೀಡಿದೆ. ಸೆಪ್ಟೆಂಬರ್ 14ರಂದು ಸೋಮವಾರದಂದು ಮುಳ್ಳಯ್ಯನಗಿರಿ ಸೇರಿದಂತೆ ಚಂದ್ರದ್ರೋಣ ಪರ್ವತ ಸಾಲಿನ ಪ್ರಮುಖ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.

ಗಣೇಶ ಚತುರ್ಥಿಯ ಅಂಗವಾಗಿ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಹಾಗೂ ಗುರು ನಾರುಕಂತೆ ಮಠಗಳಿಗೆ ಹಣ್ಣು-ಕಾಯಿ ಸಮರ್ಪಿಸಲು ಮತ್ತು ಚೌತಿ ಕಾಯಿ ಹೊಡೆಯಲು ಸುತ್ತಮುತ್ತಲಿನ ಅನೇಕ ಗ್ರಾಮಗಳಿಂದ ಸಹಸ್ರಾರು ಭಕ್ತರು ಆಗಮಿಸಲಿದ್ದಾರೆ. ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಈ ಸಾಂಪ್ರದಾಯಿಕ ಆಚರಣೆಗೆ ಯಾವುದೇ ರೀತಿಯ ತೊಂದರೆ ಬರಬಾರದೆಂಬ ನಿಟ್ಟಿನಲ್ಲಿ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ.

Advertisement

ಟ್ರಾಫಿಕ್ ದಟ್ಟಣೆ ತಪ್ಪಿಸಲು ಕ್ರಮ

ಹಬ್ಬದಂದು ಪ್ರವಾಸಿಗರ ವಾಹನಗಳ ಸಂಖ್ಯೆಯೂ ಹೆಚ್ಚಾದರೆ ಗಿರಿಧಾಮಗಳಲ್ಲಿ ತೀವ್ರ ಸಂಚಾರ ದಟ್ಟಣೆ ಹಾಗೂ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಭಕ್ತರು ಹಾಗೂ ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗುವಂತೆ ಪ್ರವಾಸಿಗರ ಪ್ರವೇಶಕ್ಕೆ ಒಂದು ದಿನದ ನಿರ್ಬಂಧ ವಿಧಿಸಲಾಗಿದೆ.

ಈ ಭಾಗಗಳಿಗೆ ಸೆಪ್ಟೆಂಬರ್ 14ರಂದು ತೆರಳುವ ಪ್ರವಾಸಿಗರು ತಮ್ಮ ಪ್ರವಾಸವನ್ನು ಮುಂದೂಡುವಂತೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಮನವಿ ಮಾಡಿದ್ದಾರೆ. ಜೊತೆಗೆ ಹಬ್ಬದ ಸಾಂಪ್ರದಾಯಿಕ ಆಚರಣೆಗಳು ಸುಸೂತ್ರವಾಗಿ ನಡೆಯಲು ಹಾಗೂ ಭಕ್ತರು ಯಾವುದೇ ತೊಂದರೆಯಿಲ್ಲದೆ ತಮ್ಮ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಜಿಲ್ಲಾಡಳಿತದೊಂದಿಗೆ ಸಾರ್ವಜನಿಕರು ಹಾಗೂ ಪ್ರವಾಸಿಗರು ಸಹಕರಿಸುವಂತೆ ಕೋರಲಾಗಿದೆ.

Share this article

You cannot copy content of this page