ಮುಂಬೈ : ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳ ನಿರಂತರ ಏರಿಕೆ ಮತ್ತು ಇರಾನ್-ಅಮೆರಿಕ ಸಂಘರ್ಷ ತೀವ್ರಗೊಳ್ಳುತ್ತಿರುವುದರ ಪರಿಣಾಮ ದೇಶದ ಷೇರುಪೇಟೆಗಳು ಭಾರಿ ಪತನ ಕಾಣುವಂತೆ ಮಾಡಿದೆ.
ಇರಾನ್-ಅಮೆರಿಕ ಸಂಘರ್ಷ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ಸೋಮವಾರ ಆರಂಭಿಕ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಮತ್ತು ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ ಸೂಚ್ಯಂಕಗಳು ಶೇಕಡ 2ರಿಂದ 3ರಷ್ಟು ಕುಸಿತ ಕಂಡಿವೆ. ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 1,124 ಅಂಶ ಇಳಿಕೆಯಾಗಿ 72,771ಕ್ಕೆ ಕುಸಿದಿದೆ. ಇತ್ತ ನಿಫ್ಟಿ 360 ಅಂಶ ಇಳಿಕೆಯಾಗಿ 22,780ಕ್ಕೆ ತಲುಪಿದೆ. ಇದರಿಂದಾಗಿ ಹೂಡಿಕೆದಾರರ ಸಂಪತ್ತು ₹8.92 ಲಕ್ಷ ಕೋಟಿಯಷ್ಟು ಕಡಿಮೆ ಆಗಿದೆ ಎಂದು ವರದಿಯಾಗಿದೆ. ಬಜಾಜ್ ಫೈನಾನ್ಸ್, ಕೋಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಎಚ್ಡಿಎಫ್ಸಿ ಬ್ಯಾಂಕ್ ಷೇರುಗಳು ಹೆಚ್ಚು ನಷ್ಟ ಅನುಭವಿಸಿವೆ.
ದಕ್ಷಿಣ ಕೊರಿಯಾದ ಕೋಸ್ಪಿ ಶೇ 2ಕ್ಕಿಂತ ಹೆಚ್ಚು ಕುಸಿತ ಕಂಡರೆ, ಚೀನಾದ ಶಾಂಘೈ ಕಾಂಪೋಸಿಟ್ ಶೇ 1.7ಕ್ಕಿಂತ ಹೆಚ್ಚು ಕುಸಿದಿದೆ. ಆದರೆ, ಜಪಾನ್ನ ನಿಕೈ ಅಲ್ಪ ಪ್ರಮಾಣದ ಲಾಭ ಗಳಿಸಿದೆ.
ಹೊರ್ಮುಜ್ ಜಲಸಂಧಿಯನ್ನು ಹಡಗುಗಳ ಸಂಚಾರಕ್ಕೆ ಮುಕ್ತಗೊಳಿಸುವ ಮತ್ತು ಏಳು ದಿನಗಳ ಕದನ ವಿರಾಮಕ್ಕಾಗಿ ಇರಾನ್ ಇಟ್ಟಿದ್ದ ಪ್ರಸ್ತಾಪವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿರಸ್ಕರಿಸಿದ್ದಾರೆ. ಇದರ ಬೆನ್ನಲ್ಲೇ ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ತೀವ್ರಗೊಂಡಿದೆ.
ಪಶ್ಚಿಮ ಏಷ್ಯಾದಲ್ಲಿನ ಇತ್ತೀಚಿನ ಬೆಳವಣಿಗೆಗಳು ಕಚ್ಚಾ ತೈಲ ಬೆಲೆಗಳಲ್ಲಿ ತೀವ್ರ ಏರಿಕೆಗೆ ಕಾರಣವಾದವು. ತೈಲ ಸಾಗಣೆಯಲ್ಲಿ ಮತ್ತಷ್ಟು ಅಡಚಣೆ ಉಂಟಾಗಬಹುದು ಎಂಬ ಭೀತಿಯಿಂದಾಗಿ ತೈಲ ಬೆಲೆ ಶೇ 3ರಷ್ಟು ಏರಿಕೆ ಮಾಡಲಾಗಿದೆ. ಪ್ರತಿ ಬ್ಯಾರಲ್ ಬ್ರೆಂಟ್ ಕಚ್ಚಾ ತೈಲ ಬೆಲೆ 108 ಡಾಲರ್ಗೆ ತಲುಪಿದೆ.
ಅಮೆರಿಕದ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ 28 ಪೈಸೆ ಕುಸಿದು 96.03 ಮಟ್ಟಕ್ಕೆ ತಲುಪಿದೆ. ಕಚ್ಚಾ ತೈಲ ಬೆಲೆ ಏರಿಕೆ, ಅಮೆರಿಕದ ಬಾಂಡ್ ಇಳುವರಿಯಲ್ಲಿನ ತೀವ್ರ ಏರಿಕೆಯು ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾಗಿದೆ.













