ಚಳ್ಳಕೆರೆ : ಹೂವು ಮಾರಲು ಚಿತ್ರದುರ್ಗಕ್ಕೆ ಬರುತ್ತಿದ್ದ ಯುವಕನನ್ನು ಮಂಗಳಮುಖಿಯರು ಪರಿಚಯ ಮಾಡಿಕೊಂಡು ಬಳಿಕ ಆತನನ್ನೇ ಅಪಹರಿಸಿ, ಗುಪ್ತಾಂಗ ಕತ್ತರಿಸಿ, ಬಿಸಿನೀರು ಸುರಿದು, ಬರೆ ಎಳೆದು ಕ್ರೌರ್ಯ ಮೆರೆದಿರುವ ಘಟನೆಯು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ನಡೆದಿದ್ದು ವರದಿಯಾಗಿದೆ.
ಚಳ್ಳಕೆರೆ ತಾಲೂಕಿನ ಪರಶುರಾಮಪುರ ಹೋಬಳಿಯ ಗ್ರಾಮವೊಂದರ ಯುವಕ ಚಿತ್ರದುರ್ಗಕ್ಕೆ ಹೂವಿನ ವ್ಯಾಪಾರಕ್ಕೆ ಹೋಗುತ್ತಿದ್ದ. ಈ ಸಂದರ್ಭದಲ್ಲಿ ಮಂಗಳಮುಖಿಯರ ಪರಿಚಯವಾಗಿದೆ. ಈ ಪರಿಚಯವನ್ನೇ ಲಾಭವಾಗಿಸಿಕೊಂಡು ಸೆ.1ರಂದು ಓಮ್ನಿ ಕಾರಿನಲ್ಲಿ ಯುವಕನನ್ನು ಅಪಹರಿಸಿ ದಾವಣಗೆರೆಗೆ ಕರೆದೊಯ್ದು ಅಮಲುಪದಾರ್ಥ ಕೊಟ್ಟು ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ. ಜೊತೆಗೆ ತೊಡೆಗೆ ಬಿಸಿನೀರು ಹಾಕಿ, ಬರೆ ಎಳೆದಿದ್ದಾರೆ ಎನ್ನಲಾಗಿದೆ.
ಈ ಚಿತ್ರಹಿಂಸೆಯಿಂದ ಯುವಕ ಹೇಗೋ ತಪ್ಪಿಸಿಕೊಂಡು ಸ್ವಗ್ರಾಮಕ್ಕೆ ಮರಳಿ, ಪೋಷಕರೆದುರು ನೋವು ತೋಡಿಕೊಂಡಿದ್ದಾನೆ. ಆದರೆ ಮರ್ಯಾದೆಗೆ ಅಂಜಿ ಕುಟುಂಬಸ್ಥರು ವಿಷಯ ಬಹಿರಂಗಪಡಿಸಿರಲಿಲ್ಲ. ಆದರೆ ಗುರುವಾರ ಯುವಕನ ಮನೆಗೆ ಬಂದ ಮಂಗಳಮುಖಿಯರು, ಆಪರೇಷನ್ಗಾಗಿ 3 ಲಕ್ಷ ರು. ಖರ್ಚಾಗಿದೆ. ಈ ವೆಚ್ಚ ಭರಿಸುವಂತೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ದಾಂಧಲೆ ಎಬ್ಬಿಸಿದ್ದಾರೆ ಎಂದು ಮೂಲಗಳು ವರದಿಯಲ್ಲಿ ಹೇಳಿವೆ.











