ವಿಧಾನಸೌಧದಲ್ಲಿ ಉರ್ದು ಹಬ್ಬ!! ಸರ್ಕಾರದ ಚಳಿ ಬಿಡಿಸಬೇಕಾಗುತ್ತದೆ!! ಸಿ.ಟಿ. ರವಿ ಸಹಿತ ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಖಂಡನೆ!!!

ಬೆಂಗಳೂರು : ಕರ್ನಾಟಕ ಸರ್ಕಾರ ಉರ್ದು ದಿನಾಚರಣೆಯ ಅಂಗವಾಗಿ ನವೆಂಬರ್ 9ರಂದು ವಿಧಾನ ಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಇದೇ ಮೊದಲ ಬಾರಿಗೆ ಅಧಿಕೃತ ‘ಉರ್ದು ಹಬ್ಬ’ವನ್ನು ಆಯೋಜಿಸಲು ಸಿದ್ಧತೆ ನಡೆಸಿರುವ ಬಗ್ಗೆ ವರದಿಯಾಗುತ್ತಿದ್ದಂತೆ ಬಿಜೆಪಿ ಮತ್ತು ಕೆಲ ಕನ್ನಡ ಪರ ಸಂಘಟನೆಗಳು ತೀವ್ರ ಆಕ್ರೋಶ ಹೊರಹಾಕಿವೆ.
ಸಚಿವ ಯು.ಟಿ. ಖಾದರ್ ಅವರು ‘ಉರ್ದು ಹಬ್ಬ’ವನ್ನು ಆಯೋಜಿಸುವ ಕುರಿತು ಹೇಳಿಕೆ ನೀಡಿದ ಬೆನ್ನಲ್ಲೇ ಬಿಜೆಪಿ ನಾಯಕರು, ಶಾಸಕರು, ಕನ್ನಡ ಪರ ಸಂಘಟನೆಗಳ ಪ್ರಮುಖರು ತೀವ್ರ ಪ್ರತಿರೋಧ ತೋರಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸರಕಾರದ ವಿರುದ್ಧ ಕಿಡಿಕಾರಿದ್ದು, ”ಕಾಂಗ್ರೆಸ್ ಅಲ್ಪಸಂಖ್ಯಾಕರ ಓಲೈಕೆಗೆ ಕಸರತ್ತು ಮಾಡುತ್ತಿದ್ದು, ಹಿಂದಿ ಹೇರಿಕೆ ಎಂದು ಹೋರಾಟ ಮಾಡಿದವರು ಈ ಬಗ್ಗೆ ಮಾತನಾಡಬೇಕು. ನಾವು ಕನ್ನಡ ವಿರೋಧಿ ಚಟುವಟಿಕೆಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ” ಎಂದು ಕಿಡಿ ಕಾರಿದ್ದಾರೆ. ತುಳುವಿಗೆ ಮಾನ್ಯತೆ ನೀಡಿದ ನೆಪದಲ್ಲಿ ಕಾಂಗ್ರೆಸ್ ಸರಕಾರ ಈಗ ಉರ್ದುವನ್ನು ಮೆರೆಸಲು ಮುಂದಾಗಿದೆ. ಕೆಂಗಲ್ ಹನುಮಂತಯ್ಯ ಅವರು ಕಟ್ಟಿದ ವಿಧಾನ ಸೌಧದ ಮೆಟ್ಟಿಲುಗಳ ಮೇಲೆ ಉರ್ದು ಹಬ್ಬ ನಡೆಸಲು ಕನ್ನಡಪರ ಸಂಘಟನೆಗಳು ಆವಕಾಶ ನೀಡುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಬಿಜೆಪಿ ನಾಯಕ, ಎಂಎಲ್‌ ಸಿ ಸಿ.ಟಿ.ರವಿ ಕಿಡಿಕಾರಿದ್ದಾರೆ.

Advertisement

ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಅವರು ಎಕ್ಸ್ ಪೋಸ್ಟ್ ಮಾಡಿದ್ದು ”ವಿಧಾನ ಸೌಧದ ಮೆಟ್ಟಿಲುಗಳ ಮೇಲೆ ರಾಜ್ಯ ಸರ್ಕಾರ ಉರ್ದು ಹಬ್ಬ ಆಯೋಜಿಸುವ ನಿರ್ಧಾರ ಮಾಡಿದೆ ಎಂಬ ಮಾಧ್ಯಮ ವರದಿಗಳನ್ನು ಗಮನಿಸಿದೆ. ಇದೊಂದು ಅವಿವೇಕದ, ಅಪ್ರಬುದ್ಧ, ದುರಹಂಕಾರದ ನಡೆ. ಏನು ಮಾಡಿದರೂ ನಡೆಯುತ್ತದೆ ಎಂಬ ಅಧಿಕ ಪ್ರಸಂಗದ ನಿಲುವು. ಸರ್ಕಾರವೇ ಮುಂದೆ ನಿಂತು ಸಮಾಜದ ಸ್ವಾಸ್ತ್ಯವನ್ನು ಹಾಳು ಮಾಡಲು ನಿಂತ ಹಾಗೆ ಕಾಣುತ್ತಿದೆ. ಇದನ್ನು ಕರ್ನಾಟಕ ರಕ್ಷಣಾ ವೇದಿಕೆ ತೀವ್ರವಾಗಿ ಖಂಡಿಸುವುದು ಮಾತ್ರವಲ್ಲ, ಈ ಕಾರ್ಯಕ್ರಮ ನಡೆಯಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ” ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಸರ್ಕಾರಕ್ಕೆ ಮಾಡಲು ಬೇಕಾದಷ್ಟು ಕೆಲಸಗಳಿವೆ. ಅವುಗಳನ್ನು ಅದು ಮಾಡಲಿ. ವಿಧಾನ ಸೌಧದ ಮೆಟ್ಟಿಲುಗಳ ಮೇಲೆ ಉರ್ದು ಹಬ್ಬದ ತಲೆಹರಟೆ ನಿರ್ಧಾರ ಎಲ್ಲಿಂದ ಬಂತು? ಯಾರು ಕೇಳಿದ್ದರು? ಸ್ಪಷ್ಟವಾಗಿ ಹೇಳುವುದಾದರೆ ಕನ್ನಡಿಗರ ಮೇಲೆ ಉರ್ದು ಭಾಷಿಕರನ್ನು, ಉರ್ದು ಭಾಷಿಕರ ಮೇಲೆ ಕನ್ನಡಿಗರನ್ನು ಎತ್ತಿಕಟ್ಟುವ ಹುನ್ನಾರ ಇದು. ಹಿಂದೆ ಉರ್ದು ವಾರ್ತೆ ಸಂಬಂಧ ನಡೆದ ಕೋಮುಗಲಭೆ ಸರ್ಕಾರ ಮರೆತಿದೆಯೇ? ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಳ್ಳುವುದು ಎಂದರೆ ಇದೇ ಅಲ್ಲವೇ? ಎಂದು ನಾರಾಯಣ ಗೌಡ ಪ್ರಶ್ನಿಸಿದ್ದಾರೆ. ವಿಧಾನ ಸೌಧದ ಮುಂದೆ ಉರ್ದು ಹಬ್ಬ ಮಾಡಿದ ನಂತರ ಉರ್ದು ನುಡಿಯ ಮಗಳ ಸ್ಥಾನದಲ್ಲಿರುವ ಹಿಂದಿ ಹಬ್ಬ ಮಾಡುತ್ತಾರೆ, ನಂತರ ತಮಿಳು ಹಬ್ಬ, ತೆಲುಗು ಹಬ್ಬ, ಮರಾಠಿ ಹಬ್ಬ ಎಲ್ಲ ಮಾಡಿ ಕೊನೆಗೆ ಕರ್ನಾಟಕವನ್ನು ಕನ್ನಡೇತರರಿಗೆ ಮಾರಾಟ ಮಾಡಿಬಿಡುತ್ತಾರೆ. ಮಾನ್ಯ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಕೂಡಲೇ ಈ ಉರ್ದು ಹಬ್ಬದ ಹುಚ್ಚಾಟವನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ನಾವೇ ಈ ಸರ್ಕಾರಕ್ಕೆ ಚಳಿ ಬಿಡಿಸಬೇಕಾಗುತ್ತದೆ. ಇಂಥ ವಿವಾದ ಸೃಷ್ಟಿಸುವ ಮೂಲಕ ರಾಜ್ಯದಲ್ಲಿ ಕೋಮು ಗಲಭೆಗೆ ಸಂಚು ರೂಪಿಸಿರುವವರನ್ನು ಸರ್ಕಾರ ದೂರ ಇಡಬೇಕು” ಎಂದು ಒತ್ತಾಯಿಸಿದ್ದಾರೆ.

Advertisement
Advertisement

‘ನಾವು ಉರ್ದು ಸೇರಿದಂತೆ ಯಾವುದೇ ಭಾಷೆಯ ವಿರೋಧಿಗಳಲ್ಲ. ಉರ್ದು ಹಬ್ಬ ಮಾಡಲು ಬೆಂಗಳೂರಿನಲ್ಲಿ ಬೇಕಾದಷ್ಟು ಜಾಗಗಳಿವೆ. ನಾಡಿನ ಶಕ್ತಿಸೌಧ ವಿಧಾನಸೌಧವೇ ಬೇಕಾಗಿಲ್ಲ. ರಾಜ್ಯ ಸರ್ಕಾರವೇ ಮುಂದೆ ನಿಂತು ನಾಡಿನ ನೆಮ್ಮದಿಯನ್ನು, ಸೌಹಾರ್ದವನ್ನು ಹಾಳು ಗೆಡಹಲು ನಿಂತರೆ ನಾವು ಸುಮ್ಮನಿರುವುದಿಲ್ಲ. ಸರ್ಕಾರ ಏನಾದರೂ ತಾನು ಮಾಡಿದ್ದೆ ಸರಿ ಎಂದುದು ಸ್ಸಾಹಸಕ್ಕೆ ಇಳಿದರೆ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ” ಎಂದು ನಾರಾಯಣ ಗೌಡ ಕಿಡಿಕಾರಿದ್ದಾರೆ.

”ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಅವರು ರಾಜ್ಯ ಸರಕಾರದ ವಿರುದ್ಧ ಕಿಡಿಕಾರಿದ್ದು, ಕೆಂಗಲ್ ಹನುಮಂತಯ್ಯ ಅವರು ಕಟ್ಟಿರುವ ವಿಧಾನಸೌಧದಲ್ಲಿ ಉರ್ದು ಹಬ್ಬ ಮಾಡಿದರೆ ನಾವು ಕೈ ಕಟ್ಟಿ ಕೂರುವುದಿಲ್ಲ. ಈ ಹಿಂದೆ ಟಿಪ್ಪು ಜಯಂತಿ ಮಾಡಿ ಪಾಕಿಸ್ಥಾನಕ್ಕೆ ಜೈಕಾರ ಹಾಕಲಾಗಿತ್ತು. ವಿಧಾನಸೌಧದಲ್ಲಿ ಅನ್ಯ ರಾಜ್ಯದ ಭಾಷೆಗಳನ್ನು ಮೆರೆಸಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ” ಎಂದು ಕಿಡಿಕಾರಿದ್ದಾರೆ.
‘ಕರ್ನಾಟಕ ಪರ್ವ 2026’ರ ನಾಲ್ಕನೇ ದಿನ ಉರ್ದು ಪತ್ರಿಕಾ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಖಾದರ್ ”ಉರ್ದು ಭಾಷೆ ಮತ್ತು ಸಾಹಿತ್ಯದ ಜತೆಗೆ ಬೆಸೆದು ಕೊಂಡಿರುವ ಸಂಸ್ಕೃತಿ, ಪರಂಪರೆ ಹಾಗೂ ಕಲಾ ಪ್ರಕಾರಗಳನ್ನು ರಾಜ್ಯದ ವಿವಿಧ ಸಮುದಾಯಗಳಿಗೆ ಪರಿಚಯಿಸುವ ಉದ್ದೇಶ ‘ಉರ್ದು ಹಬ್ಬ’ದ್ದಾಗಿದೆ. ವಿಧಾನ ಸೌಧದ ಆವರಣದಲ್ಲಿ ವಿವಿಧ ಇಲಾಖೆಗಳು ಮತ್ತು ಕ್ಷೇತ್ರಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸಲು ಅವಕಾಶವಿದೆ” ಎಂದು ಹೇಳಿದ್ದರು.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page