ನನ್ನೊಳಗಿನ ಸ್ಫೂರ್ತಿ ನನ್ನೆಜಮಾನ್ರು!ವಿಷ್ಣುವರ್ಧನ್‌ ಜನ್ಮದಿನದಂದು ವೀರಕಪುತ್ರ ಶ್ರೀನಿವಾಸ್‌ ಮಾತುಗಳು..

ಇಂದು ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಜನ್ಮದಿನ. ಪ್ರೀತಿ, ಒಂಚೂರು ಸಿಟ್ಟು, ಅಪಾರ ವಿನಯ, ಕಿಂಚಿತ್ ಸಂಕೋಚ, ಮುಚ್ಚುಮರೆಯಿಲ್ಲದ ಮಾತು, ಮನಗೆಲ್ಲುವ ಮಂದಹಾಸ- ಇವೆಲ್ಲದರ ಕುಂಚ ವಿಷ್ಣುವರ್ಧನ್.
ಸಂಪತ್ ಕುಮಾರ್ ಆಗಿ ಚಿತ್ರರಂಗಕ್ಕೆ ಬಂದು “ವಂಶವೃಕ್ಷ’ದಲ್ಲಿ ಪುಟ್ಟ ಪಾತ್ರ ಮಾಡಿ, ರಾಮಾಚಾರಿಯಾಗಿ ಎದ್ದು ನಿಂತ ವಿಷ್ಣುವರ್ಧನ್ ಮತ್ತೆ ತಿರುಗಿ ನೋಡಲಿಲ್ಲ. ಇನ್ನೂರು ಚಿತ್ರಗಳ ಗಡಿ ದಾಟಿದ ವಿಷ್ಣುವರ್ಧನ್ ಚಾರಿತ್ರಿಕ, ಪೌರಾಣಿಕ, ಸಾಮಾಜಿಕ ಪಾತ್ರಗಳಲ್ಲಿ ನಟಿಸಿ ಗೆದ್ದವರು.
ಅಭಿಮಾನಿಗಳ ಪಾಲಿಗೆ “ಸಾಹಸ ಸಿಂಹ”, ಹೆಣ್ಮಕ್ಕಳ ಪಾಲಿಗೆ “ಬಂಧನ’ದ ಭಗ್ನಪ್ರೇಮಿ, “ಬಿಳಿಗಿರಿಯ ಬನ’ದ ಬಂಡಾಯಗಾರ, “ಹೊಂಬಿಸಿಲು’ ಚಿತ್ರದ ನಿಷ್ಪಾಪಿ, “ಸಿಡಿದೆದ್ದ ಸಹೋದರ, “ಬಂಗಾರದ ಜಿಂಕೆ’ಯ ಬೆನ್ನಟ್ಟಿದ ಪ್ರೇಮಿ, “ಇಂದಿನ ರಾಮಾಯಣ’ದ ನ್ಯಾಯವಂತ, ದೆವ್ವಕ್ಕೆ ಸಡ್ಡು ಹೊಡೆದ “ಆಪ್ತಮಿತ್ರ’- ಹೀಗೆ ವಿಷ್ಣು ಎಲ್ಲ ಪಾತ್ರಗಳಲ್ಲೂ ನಟಿಸಿ ಗೆದ್ದವರು. ಅಪಾರ ಹಾಸ್ಯಪ್ರಜ್ಞೆ, ತುಂಬು ಮಾನವೀಯತೆ, ಸರಳ ಸಜ್ಜನಿಕೆಯ ವಿಷ್ಣು 76ನೇ ಹುಟ್ಟುಹಬ್ಬ ಈ ಬಾರಿ ಹಲವು ವಿಶೇಷತೆಗಳಿಂದ ಕೂಡಿದೆ.

Advertisement

ಬಲಗೈಲಿ ಕೊಟ್ಟದ್ದು ಎಡಗೈಗೆ ತಿಳಿಯಬಾರದು ಎಂಬಂತಿದ್ದವರು ವಿಷ್ಣು. ಯಾವತ್ತೂ ಅವರು ತಾವು ಮಾಡಿದ ಸಹಾಯದ ಕುರಿತು ಹೇಳಿಕೊಂಡವರೇ ಅಲ್ಲ. ವಿವಾದಗಳು ಅವರನ್ನು ಬೆನ್ನಟ್ಟಿ ಬಂದಾಗಲೂ ವಿಷ್ಣು ಮೌನಿಯಾಗಿದ್ದರು. ಅಂಬರೀಷ್ ಮತ್ತು ಅವರ ಸ್ನೇಹ ಚಿತ್ರರಂಗಕ್ಕೊಂದು ಮಾದರಿ ಎಂಬಂತಿತ್ತು. ವಿಷ್ಣುವರ್ಧನ್ ನಟಿಸಿದ ಚಿತ್ರಗಳ ಪೈಕಿ ನೆನಪಲ್ಲಿ ಉಳಿಯುವಂಥ ಚಿತ್ರಗಳ ಪಟ್ಟಿ ಸಾಕಷ್ಟು ದೊಡ್ಡದಿದೆ.
“ಮುತ್ತಿನಹಾರ’ ಕನ್ನಡ ಚಿತ್ರರಂಗದಲ್ಲೇ ಒಂದು ಮೈಲಿಗಲ್ಲು. “ಬಂಧನ”, “ಆಪ್ತಮಿತ್ರ”, “ಆಪ್ತರಕ್ಷಕ’ಗಳ ನಡುವೆಯೇ ಅವರು “ಗಂಧರ್ವಗಿರಿ’ಯಂಥ ಸಿನಿಮಾ ಮಾಡಿದವರು. “ಹರಕೆಯ ಕುರಿ’ಯಂಥ ಅರ್ಥಪೂರ್ಣ ಚಿತ್ರದಲ್ಲಿ ನಟಿಸಿದವರು.
“ಯಜಮಾನ’ ಚಿತ್ರದ ಗಳಿಕೆ ಇವತ್ತಿಗೂ ದಾಖಲೆಯಾಗಿಯೇ ಉಳಿದಿದೆ. ಕನ್ನಡದಲ್ಲಷ್ಟೇ ಅಲ್ಲದೇ, ಹಿಂದಿ, ತೆಲುಗು, ತಮಿಳು ಚಿತ್ರಗಳಲ್ಲೂ ನಟಿಸಿದ್ದ ವಿಷ್ಣು, ಯಾವತ್ತೂ ಚಿತ್ರರಂಗದ ನಾಯಕನೆಂದು ತಮ್ಮನ್ನು ಕರೆದುಕೊಂಡವರೇ ಅಲ್ಲ. ನಾನು ತುಂಬ ಚಿಕ್ಕವನು, ನಾನು ಹಿಂದೆಯೇ ಇರಬೇಕು ಅನ್ನುತ್ತಿದ್ದವರು ಅವರು. ಎಲ್ಲರನ್ನೂ ಮುಂದೆ ಬಿಟ್ಟುಕೊಂಡು, “ಸ್ನೇಹಲೋಕ” ಎಂಬ ತಂಡ ಕಟ್ಟಿ, ಸಮಾನಮನಸ್ಕರನ್ನು ಒಂದಾಗಿಸಿದ ಖ್ಯಾತಿಯೂ ಅವರದ್ದೇ.

Advertisement
Advertisement

ಇವರ ಜನ್ಮದಿನದ ಪ್ರಯುಕ್ತ ಕರ್ನಾಟಕದ ಡಾ. ವಿಷ್ಣು ಸೇನಾ ಸಮಿತಿಯ ರಾಜ್ಯಾಧ್ಯಕ್ಷ ಮತ್ತು ವೀರಲೋಕ ಬುಕ್ಸ್‌ನ ಸಂಸ್ಥಾಪಕ ವೀರಕಪುತ್ರ ಎಂ. ಶ್ರೀನಿವಾಸ್‌ ಹಂಚಿಕೋಂಡ ಮಾತುಗಳು ಇಲ್ಲಿದೆ..

ನನ್ನನ್ನು ತುಂಬಾ ಜನ ಕೇಳ್ತಾರೆ, ನೀವು ವಿಷ್ಣುವರ್ಧನ್ ಅವರಿಗ್ಯಾಕೆ ಇಷ್ಟು ಒತ್ತುಕೊಡ್ತೀರಿ ಅಂತ? ಈ ಸಿನಿಮಾದವರೆಲ್ಲರೂ ಜಸ್ಟ್ ತೆರೆಯ ಹೀರೋಗಳಷ್ಟೇ. ಅವರನ್ನು ಮೆರೆಸಿ, ಕೆಟ್ಟಪಂಕ್ತಿ ಹುಟ್ಟುಹಾಕಬೇಡಿ ಅಂತ! ಅಂತಹ ಮಾತುಗಳು ಕೇಳಿದಾಗಲೆಲ್ಲಾ ನಾನು ನಗುತ್ತೇನೆ. ಏಕೆಂದರೆ ಈ ಸಮಾಜದ ಪ್ರತಿಯೊಬ್ಬರಿಗೂ ಒಬ್ಬ ಹೀರೋ ಇದ್ದೇ ಇರುತ್ತಾನೆ. ಅದು ಅವರ ಕುಲದವನಾಗಿರಬಹುದು, ಅವರ ಮೆಚ್ಚಿನ ಸಾಹಿತಿಯಾಗಿರಬಹುದು, ಅವರು ಇಷ್ಟಪಡುವ ಸಂತನಾಗಿರಬಹುದು, ಅವರ ನೆಚ್ಚಿನ ರಾಜಕಾರಣಿಯಾಗಿರಬಹುದು, ಅಥವಾ ಅವರು ನಂಬಿಕೊಂಡಿರುವ ಒಂದು ಸಿದ್ಧಾಂತವೇ ಆಗಿರಬಹುದು.
ಎಲ್ಲರೂ ಯಾರನ್ನಾದರೂ ಆರಾಧಿಸುವವರೇ. ಇದನ್ನು ಓದುತ್ತಿರುವ ನಿಮಗೂ ಅಂತಹ ಒಬ್ಬ ಹೀರೋ ಇದ್ದೇ ಇರ್ತಾನೆ! ಹಾಗೇ ನನಗೂ ಒಬ್ಬರಿದ್ದಾರೆ…
ಅವರೇ ಯಜಮಾನ್ರು..

ಇವರ ಬಗ್ಗೆ ನನಗೆ ಮೊದಲ ಆಕರ್ಷಣೆ ಹುಟ್ಟಿದ್ದು ಅವರ ರೂಪದಿಂದಲೇ ಹೌದು… ಆದರೆ ಅವರ ಬಗ್ಗೆ ನನ್ನೊಳಗೆ ಉತ್ಕಟ ಭಾವ ಮೂಡಿದ್ದು ಅವರ ಬದುಕಿನಿಂದ. ಅಂತಹ ಕಷ್ಟದ ಬದುಕು ಯಾರಿಗೂ ಬೇಡ ಅನ್ನಿಸುವಂತಹ ಬದುಕದು. ಅವರ ಬದುಕಿನ ಒಂದೊಂದು ನೈಜ ಘಟನೆಯನ್ನು ಕೇಳುವಾಗಲೂ ನಾನು ದಿಗ್ಬ್ರಾಂತನಾಗಿದ್ದೇನೆ. ಹಾಗೂ ಬದುಕಬಹುದಾ ಅಂತ ಕನಲಿದ್ದೇನೆ. ಅಂತಹುದ್ದೇನಿದೆ ಅವರ ಬದುಕಿನಲ್ಲಿ? ಎಂದು ನಿಮಗನ್ನಿಸಿದರೆ ಅವರ ಬಗ್ಗೆ ನಿಮಗೆ ಜಾಸ್ತಿ ಗೊತ್ತಿಲ್ಲ ಅಂತಷ್ಟೇ ಹೊರತು ಅವರಿಗೆ ಕಷ್ಟಗಳಿರಲಿಲ್ಲವೆಂದಲ್ಲ! ಮತ್ತು ಅಂತಹ ಪ್ರಶ್ನೆಗಳಿಗೆ ನನ್ನ ಉತ್ತರ ಒಂದೇ, ನಾವ್ಯಾರೂ ಇನ್ನೊಬ್ಬರ ಬದುಕನ್ನು ಬದುಕುವುದಿಲ್ಲವಾದ್ದರಿಂದ ಅವರ ಬದುಕು ನಮಗೆ ತಾಕುವುದೇ ಇಲ್ಲ. ನಾನು ಅವರನ್ನು ಕೇವಲ ಒಬ್ಬ ನಟನಾಗಿ ಇಷ್ಟಪಡುವುದಕ್ಕಿಂತ, ಒಬ್ಬ ವ್ಯಕ್ತಿಯಾಗಿ, ಮೌನವಾಗಿ, ನಗುವಾಗಿ, ಉದಾಹರಣೆಗಾಗಿ, ಸ್ಫೂರ್ತಿಯಾಗಿ ಇಷ್ಟಪಡುತ್ತೇನೆ. ಮತ್ತು ನಾನು ಇಷ್ಟಪಡುವ ವ್ಯಕ್ತಿಗಳನ್ನೆಲ್ಲಾ ಹೀಗೆಯೇ ಸಂಭ್ರಮಿಸುತ್ತೇನೆ ಎಂಬುದು ನಿಮಗೆ ಗೊತ್ತೇ ಇದೆ.
ನನ್ನೊಳಗಿನ ಸ್ಫೂರ್ತಿ ನನ್ನೆಜಮಾನ್ರು.
ಅವರನ್ನು ಅವರ ಈ ಜನ್ಮದಿನದಂದು ಪ್ರೀತಿಯಿಂದ ನೆನೆಯುವೆ!

ಎಂದು ಅವರು ತಮ್ಮ ನೆಚ್ಚಿನ ನಟನ ಕುರಿತು ಹೇಳಿದ್ದಾರೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page