10ನೇ ತರಗತಿಯ ಬಾಲಕಿಯ ಮೇಲೆ ಗರಗಸದಿಂದ ಭೀಕರ ದಾಳಿ! ಶಾಲೆಯೊಳಗೇ ನುಗ್ಗಿ ಹತ್ಯೆ ಮಾಡಿದ ದುಷ್ಕರ್ಮಿ!!

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರಾಪ್ತಾಡುವಿನ ಜಿಲ್ಲಾ ಪರಿಷತ್ ಪ್ರೌಢಶಾಲೆಯಲ್ಲಿ ಭಯಾನಕ ಘಟನೆಯೊಂದು ನಡೆದಿದ್ದು, ಶಾಲೆಯ ತರಗತಿಯೊಳಗೆ ನುಗ್ಗಿದ ದುಷ್ಕರ್ಮಿಯೊಬ್ಬ 10ನೇ ತರಗತಿಯ ವಿದ್ಯಾರ್ಥಿನಿಯ ಮೇಲೆ ಯಂತ್ರಚಾಲಿತ ಗರಗಸ ಬಳಸಿ ಭೀಕರವಾಗಿ ದಾಳಿ ನಡೆಸಿದ್ದಾನೆ. ವಿದ್ಯಾರ್ಥಿನಿಯ ಕತ್ತು, ಮುಖ ಹಾಗೂ ತಲೆಯ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ.

Advertisement

ಶಾಲಾ ಅವಧಿಯಲ್ಲೇ ಈ ಘಟನೆ ನಡೆದಿದ್ದು, ದಾಳಿಯ ವೇಳೆ ಮತ್ತೊಬ್ಬ ವಿದ್ಯಾರ್ಥಿನಿಗೂ ಗಾಯಗಳಾಗಿವೆ. ಘಟನೆ ಬೆನ್ನಲ್ಲೇ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ಸಿಬ್ಬಂದಿಯಲ್ಲಿ ತೀವ್ರ ಆತಂಕ ಉಂಟಾಗಿದೆ. ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿನಿಯನ್ನು ತಕ್ಷಣ ಅನಂತಪುರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದು ವರಿದಿದೆ. ಘಟನೆಯ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ಗಾಯಗೊಂಡ ವಿದ್ಯಾರ್ಥಿನಿಯ ಆರೋಗ್ಯ ಸ್ಥಿತಿಯನ್ನು ಖುದ್ದಾಗಿ ಗಮನಿಸುತ್ತಿರುವುದಾಗಿ ತಿಳಿಸಿದ್ದಾರೆ. ವೈದ್ಯಾಧಿಕಾರಿಗಳೊಂದಿಗೆ ಮಾತನಾಡಿ ವಿದ್ಯಾರ್ಥಿನಿಗೆ ನೀಡಲಾಗುತ್ತಿರುವ ಚಿಕಿತ್ಸೆಯ ಕುರಿತು ಮಾಹಿತಿ ಪಡೆದಿರುವ ಅವರು, ಆಕೆಯ ಚಿಕಿತ್ಸೆಗೆ ಮೊದಲ ಆದ್ಯತೆ ನೀಡಿ, ಅತ್ಯುತ್ತಮ ವೈದ್ಯಕೀಯ ಸೌಲಭ್ಯ ಒದಗಿಸುವಂತೆ ಸೂಚಿಸಿದ್ದಾರೆ. ಬಳಿಕ ವಿದ್ಯಾರ್ಥಿನಿಯ ತಾಯಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ ನಾಯ್ಡು, ಕುಟುಂಬಕ್ಕೆ ದೈರ್ಯ ತುಂಬಿದ್ದಾರೆ. ವಿದ್ಯಾರ್ಥಿನಿಯ ಜೀವ ಉಳಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು. ಸರಕಾರ ಕುಟುಂಬದ ಬೆಂಬಲಕ್ಕೆ ನಿಲ್ಲಲಿದೆ ಎಂದು ಭರವಸೆ ನೀಡಿದ್ದಾರೆ.

Advertisement
Advertisement

ಘಟನೆಯನ್ನು ಖಂಡಿಸಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಚಂದ್ರಬಾಬು ನಾಯ್ಡು, ಶಾಲೆಯೊಳಗೆ ಬಾಲಕಿಯ ಮೇಲೆ ನಡೆದ ಅಮಾನುಷ ದಾಳಿಯಿಂದ ತೀವ್ರ ಆಘಾತ ಹಾಗೂ ಆಕ್ರೋಶ ಉಂಟಾಗಿದೆ ಎಂದು ಹೇಳಿದ್ದಾರೆ. ಶಿಕ್ಷಣ ಪಡೆಯಬೇಕಾದ ಸ್ಥಳದಲ್ಲೇ ಬಾಲಕಿಯರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವವರಿಗೆ ಸಮಾಜದಲ್ಲಿ ಯಾವುದೇ ಸ್ಥಾನವಿಲ್ಲ. ವಿದ್ಯಾರ್ಥಿನಿಯ ಆರೋಗ್ಯ ಚೇತರಿಕೆಯನ್ನು ನಾನು ವೈಯಕ್ತಿಕವಾಗಿ ಗಮನಿಸುತ್ತಿದ್ದೇನೆ. ಆಕೆಗೆ ಅತ್ಯುನ್ನತ ಆದ್ಯತೆಯೊಂದಿಗೆ ಚಿಕಿತ್ಸೆ ನೀಡುವಂತೆ ವೈದ್ಯಕೀಯ ತಂಡಕ್ಕೆ ಸೂಚಿಸಿದ್ದೇನೆ. ಈ ಕೃತ್ಯ ಎಸಗಿದ ಆರೋಪಿಯನ್ನು ಪತ್ತೆಹಚ್ಚಿ ಕಾನೂನಿನ ಅಡಿಯಲ್ಲಿ ಅತ್ಯಂತ ಕಠಿನ ಶಿಕ್ಷೆಗೆ ಗುರಿಪಡಿಸುವಂತೆ ಪೊಲೀಸರಿಗೆ ಆದೇಶಿಸಿದ್ದೇನೆ ಎಂದು ತಿಳಿಸಿದ್ದಾರೆ. ದಾಳಿ ನಡೆಸಿದ ಆರೋಪಿಯನ್ನು ಕೆಲವೇ ಗಂಟೆಗಳಲ್ಲಿ ಪತ್ತೆಹಚ್ಚಿ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page