ಅಫ್ಘಾನಿಸ್ಥಾನದಲ್ಲಿ ಹೆಣ್ಣುಮಕ್ಕಳ ಶಿಕ್ಷಣದ ಮೇಲೆ ತಾಲಿಬಾನ್ ವಿಧಿಸಿರುವ ನಿರ್ಬಂಧಗಳನ್ನು ಸಮರ್ಥಿಸಿಕೊಂಡಿರುವ ವಿವಾದಿತ ಇಸ್ಲಾಮಿಕ್ ಧರ್ಮ ಪ್ರಚಾರಕ ಝಾಕಿರ್ ನಾಯ್ಕ್ ವಿರುದ್ಧ ಭಾರತ, ಪಾಕಿಸ್ಥಾನ ಮತ್ತು ಅಫ್ಘಾನಿಸ್ಥಾನದ ಪತ್ರಕರ್ತರು, ಶಿಕ್ಷಣ ತಜ್ಞರು ಹಾಗೂ ಸಾಮಾಜಿಕ ಕಾರ್ಯಕರ್ತ ರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ತಾಲಿಬಾನ್ ಹೆಣ್ಣುಮಕ್ಕಳ ಪ್ರೌಢ ಮತ್ತು ಉನ್ನತ ಶಿಕ್ಷಣವನ್ನು ಸಂಪೂರ್ಣ ನಿಷೇಧಿಸಿಲ್ಲ. ಭದ್ರತಾ ಸಮಸ್ಯೆ ಹಾಗೂ ಮಹಿಳಾ ಶಿಕ್ಷಕರ ಕೊರತೆಯಿಂದಾಗಿ ತಾತ್ಕಾಲಿಕವಾಗಿ ಮುಂದೂಡಿದೆ ಎಂದು ಮಲೇಷ್ಯಾದಲ್ಲಿ ಆಶ್ರಯ ಪಡೆದಿರುವ ಝಾಕಿರ್ ನಾಯ್ಕ್ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಅಫ್ಘಾನಿಸ್ಥಾನದ ಮಹಿಳೆಯರು ಇಸ್ಲಾಮಿಕ್ ಅಧ್ಯಯನದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪಿಎಚ್ಡಿ ಪಡೆಯುತ್ತಿದ್ದಾರೆ ಎಂದೂ ನಾಯ್ಕ್ ಪ್ರತಿಪಾದಿಸಿದ್ದಾರೆ. ಆದರೆ, ಅವರ ಈ ಹೇಳಿಕೆ ವಿಶ್ವಸಂಸ್ಥೆಯ ವಿವಿಧ ಸಂಸ್ಥೆಗಳು ಪ್ರಕಟಿಸಿರುವ ವರದಿಗಳಿಗೆ ವಿರುದ್ಧವಾಗಿದೆ.
ತಾಲಿಬಾನ್ ಪ್ರತಿನಿಧಿಗಳೊಂದಿಗೆ ತಾನು ವೈಯಕ್ತಿಕವಾಗಿ ಮಾತುಕತೆ ನಡೆಸಿರುವುದಾಗಿ ಹೇಳಿಕೊಂಡಿರುವ ನಾಯ್ಕ್, ಮಾಧ್ಯಮಗಳಲ್ಲಿ ಪ್ರಕಟವಾಗುವ ಎಲ್ಲ ಸುದ್ದಿಗಳೂ ಸತ್ಯವಾಗಿರುವುದಿಲ್ಲ ಎಂದಿದ್ದಾನೆ. ಅಫ್ಘಾನಿಸ್ಥಾನದಲ್ಲಿ ಹೆಣ್ಣು ಮಕ್ಕಳಿಗೆ 6ನೇ ತರಗತಿಯವರೆಗೆ ಶಿಕ್ಷಣ ಪಡೆಯಲು ಅವಕಾಶವಿದೆ. ಆದರೆ, ಸುರಕ್ಷಿತ ವಾತಾವರಣ ಇಲ್ಲದ ಕಾರಣ ಮುಂದಿನ ಶಿಕ್ಷಣವನ್ನು ಮುಂದೂಡಲಾಗಿದೆ. ಸೂಕ್ತ ಶಿಕ್ಷಕರು ಲಭ್ಯವಾಗುವವರೆಗೆ ಶಿಕ್ಷಣವನ್ನು ಮುಂದೂಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಅವರು ವಾದಿಸಿದ್ದಾನೆ.
ಪ್ರೌಢ ಶಿಕ್ಷಣಕ್ಕೆ ಅಗತ್ಯವಿರುವಷ್ಟು ಮಹಿಳಾ ಶಿಕ್ಷಕರು ಅಫ್ಘಾನಿಸ್ಥಾನದಲ್ಲಿ ಇಲ್ಲ. ಆದರೆ, ಮಹಿಳೆಯರಿಗೆ ಷರಿಯಾ, ಅರೇಬಿಕ್ ಮತ್ತು ಕುರಾನ್ ಅಧ್ಯಯನದಲ್ಲಿ ಸ್ನಾತಕೋತ್ತರ ಹಾಗೂ ಪಿಎಚ್ಡಿ ಪದವಿ ಪಡೆಯಲು ಅವಕಾಶವಿದೆ. ಹೀಗಿರುವಾಗ ಅಲ್ಲಿ ಮಹಿಳೆಯರಿಗೆ ಉನ್ನತ ಶಿಕ್ಷಣವೇ ಇಲ್ಲ ಎಂದು ಹೇಳುವುದು ತಪ್ಪು ಮಾಹಿತಿ ಎಂದು ನಾಯ್ಕ್ ಪ್ರತಿಪಾದಿಸಿದ್ದಾನೆ. ಝಾಕಿರ್ ನಾಯ್ಕ್ ಅವರ ಹೇಳಿಕೆಗೆ ವಿಶ್ವಸಂಸ್ಥೆಯ ಮಕ್ಕಳ ನಿಧಿ (UNICEF) ಪ್ರಕಟಿಸಿರುವ ಅಂಕಿಅಂಶಗಳು ವ್ಯತಿರಿಕ್ತವಾಗಿವೆ. ಯುನಿಸೆಫ್ನ ಆಗಸ್ಟ್ ತಿಂಗಳ ವರದಿಯ ಪ್ರಕಾರ, 2021ರ ಆಗಸ್ಟ್ 15ರಂದು ತಾಲಿಬಾನ್ ಮತ್ತೆ ಅಧಿಕಾರಕ್ಕೆ ಬಂದ ಬಳಿಕ ಅಫ್ಘಾನಿಸ್ಥಾನದ 26 ಲಕ್ಷಕ್ಕೂ ಅಧಿಕ ಹೆಣ್ಣುಮಕ್ಕಳು ಪ್ರೌಢ ಶಿಕ್ಷಣದಿಂದ ವಂಚಿತರಾಗಿದ್ದಾರೆ.
2021ರ ಸೆಪ್ಟಂಬರ್ನಿಂದ 6ನೇ ತರಗತಿಯ ಅನಂತರ ಹೆಣ್ಣುಮಕ್ಕಳ ಔಪಚಾರಿಕ ಶಿಕ್ಷಣಕ್ಕೆ ನಿರ್ಬಂಧ ವಿಧಿಸಲಾಗಿದೆ. 2022ರ ಡಿಸೆಂಬರ್ನಲ್ಲಿ ಮಹಿಳೆಯರಿಗೆ ವಿಶ್ವವಿದ್ಯಾನಿಲಯ ಶಿಕ್ಷಣವನ್ನೂ ನಿಷೇಧಿಸಲಾಯಿತು. ಹೆಣ್ಣುಮಕ್ಕಳು ಮತ್ತು ಮಹಿಳೆಯರಿಗೆ ಪ್ರೌಢ ಹಾಗೂ ಉನ್ನತ ಶಿಕ್ಷಣದ ಅವಕಾಶ ಪರಿಣಾಮಕಾರಿಯಾಗಿ ಮುಚ್ಚಲ್ಪಟ್ಟಿರುವ ವಿಶ್ವದ ಏಕೈಕ ದೇಶ ಅಫ್ಘಾನಿಸ್ಥಾನವಾಗಿದೆ ಎಂದು ಯುನಿಸೆಫ್ ತಿಳಿಸಿದೆ. 2021ರಲ್ಲಿ ಅಧಿಕಾರಕ್ಕೆ ಮರಳಿದ ತಾಲಿಬಾನ್, ತರಗತಿಗಳಲ್ಲಿ ಲಿಂಗಾಧಾರಿತ ಪ್ರತ್ಯೇಕ ವ್ಯವಸ್ಥೆಯನ್ನು ಜಾರಿಗೊಳಿಸಿತ್ತು. ಹೆಣ್ಣುಮಕ್ಕಳಿಗೆ ಮಹಿಳಾ ಶಿಕ್ಷಕರೇ ಪಾಠ ಮಾಡಬೇಕೆಂಬ ನಿಯಮವನ್ನೂ ವಿಧಿಸಿತ್ತು. 2022ರ ಮಾರ್ಚ್ನಲ್ಲಿ ಹೆಣ್ಣುಮಕ್ಕಳ ಪ್ರೌಢಶಾಲೆಗಳನ್ನು ಪುನರಾರಂಭಿಸುವ ನಿರ್ಧಾರದಿಂದ ಹಿಂದೆ ಸರಿದಿತ್ತು. ಅದೇ ವರ್ಷದ ಡಿಸೆಂಬರ್ನಲ್ಲಿ ಸರಕಾರಿ ಮತ್ತು ಖಾಸಗಿ ವಿಶ್ವವಿದ್ಯಾನಿಲಯಗಳಲ್ಲಿ ಮಹಿಳೆಯರ ಪ್ರವೇಶವನ್ನು ನಿಷೇಧಿಸಿತು.
2024ರ ಡಿಸೆಂಬರ್ನಲ್ಲಿ ನರ್ಸಿಂಗ್ ಮತ್ತು ಶುಶ್ರೂಷಕಿ (ಮಿಡ್ವೈಫರಿ) ತರಬೇತಿ ಸೇರಿದಂತೆ ವೈದ್ಯಕೀಯ ತರಬೇತಿ ಸಂಸ್ಥೆಗಳಲ್ಲಿಯೂ ಮಹಿಳೆಯರಿಗೆ ಪ್ರವೇಶ ನಿರಾಕರಿಸಲಾಯಿತು ಎಂದು ಅಫ್ಘಾನಿಸ್ಥಾನ ಪುನರ್ನಿರ್ಮಾಣದ ಅಮೆರಿಕದ ವಿಶೇಷ ಮಹಾನಿರೀಕ್ಷಕರ ಕಚೇರಿ (SIGAR) ಹಾಗೂ ಅಫ್ಘಾನಿಸ್ಥಾನದಲ್ಲಿನ ವಿಶ್ವಸಂಸ್ಥೆಯ ನೆರವು ಮಿಷನ್ (UNAMA) ವರದಿಗಳು ತಿಳಿಸಿವೆ.













