ಚೆನ್ನೈ : ಸೂಪರ್ಸ್ಟಾರ್ ಅಭಿನಯದ ಬಹುನಿರೀಕ್ಷಿತ ‘ಜೈಲರ್ 2’ ಚಿತ್ರದ ಬಿಡುಗಡೆಯೊಂದಿಗೆ ಮುಖಾಮುಖಿಯಾಗುವುದನ್ನು ತಪ್ಪಿಸಲು ನಟ ಧನುಷ್ ಮತ್ತು ಮಮ್ಮುಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಓಂ’ ಸಿನಿಮಾದ ಬಿಡುಗಡೆಯನ್ನು ಮುಂದೂಡಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಪತ್ರ ಹಂಚಿಕೊಂಡಿರುವ ನಟ ಧನುಷ್, ಆರ್ಕುಮಾರ್ ಪೆರಿಯಸಾಮಿ ನಿರ್ದೇಶನದ ತಮ್ಮ ‘ಓಂ’ ಸಿನಿಮಾ ಯೋಜಿಸಿದಂತೆ ಅಕ್ಟೋಬರ್ 16 (ಶುಕ್ರವಾರ) ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ರಜಿನಿಕಾಂತ್ ಅಭಿನಯದ ‘ಜೈಲರ್ 2’ ಸಿನಿಮಾ ಅಕ್ಟೋಬರ್ 15ರಂದೇ ತೆರೆಗೆ ಬರಲಿದೆ. ಈ ಕುರಿತು ವಿವರಣೆ ನೀಡಿರುವ ಧನುಷ್, “ನಾವೆಲ್ಲರೂ ವರ್ಷಗಳಿಂದ ಆರಾಧಿಸುವ ನಮ್ಮ ಸೂಪರ್ಸ್ಟಾರ್ ರಜಿನಿಕಾಂತ್ ಸರ್ ಅವರ ಸಿನಿಮಾ ನಮ್ಮ ಚಿತ್ರಕ್ಕಿಂತ ಒಂದು ದಿನ ಮುಂಚಿತವಾಗಿ ಅಂದರೆ ಅಕ್ಟೋಬರ್ 15 ರಂದು ಬಿಡುಗಡೆಯಾಗುತ್ತಿದೆ. ಅವರ ಮೇಲಿನ ಅಪಾರ ಗೌರವದಿಂದಾಗಿ, ನಾವು ನಮ್ಮ ‘ಓಂ’ ಸಿನಿಮಾದ ಬಿಡುಗಡೆಯನ್ನು ಮುಂದಿನ ದಿನಾಂಕಕ್ಕೆ ಮುಂದೂಡಲು ನಿರ್ಧರಿಸಿದ್ದೇವೆ,” ಎಂದು ತಿಳಿಸಿದ್ದಾರೆ.
ತಮ್ಮ ವುಂಡರ್ಬಾರ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾವನ್ನು ನಿರ್ಮಿಸುತ್ತಿರುವ ಧನುಷ್, ಹೊಸ ಬಿಡುಗಡೆ ದಿನಾಂಕವನ್ನು ಇನ್ನೂ ಪ್ರಕಟಿಸಿಲ್ಲ. ಇದೇ ವೇಳೆ, ದೀಪಾವಳಿ ಹಬ್ಬದ ಸಂದರ್ಭದಲ್ಲೂ ಸಿನಿಮಾ ಬಿಡುಗಡೆಯಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ದೀಪಾವಳಿ ಸಮಯಕ್ಕೆ ನಟ ಸೂರ್ಯ ಅಭಿನಯದ ‘ಸೀನ್’ ಸಿನಿಮಾ ಬಿಡುಗಡೆಯಾಗಲು ಸಜ್ಜಾಗಿದೆ. ಜಿತು ಮಾಧವನ್ ನಿರ್ದೇಶನದ ‘ಸೀನ್’ ಚಿತ್ರವು ದೀಪಾವಳಿಗೆ ಎರಡು ದಿನಗಳ ಮುಂಚಿತವಾಗಿ ಅಂದರೆ ನವೆಂಬರ್ 06 ರಂದು ತೆರೆಕಾಣಲಿದೆ.
ಸೂರ್ಯ ಅವರ ಚಿತ್ರದೊಂದಿಗಿನ ಪೈಪೋಟಿಯ ಕುರಿತು ಮಾತನಾಡಿದ ಧನುಷ್, “ಅವರು ತಮ್ಮ ಬಿಡುಗಡೆ ದಿನಾಂಕವನ್ನು ಮೊದಲು ಘೋಷಿಸಿದ್ದರು. ದೊಡ್ಡ ಸಿನಿಮಾಗಳು ಪರಸ್ಪರ ತಿಳುವಳಿಕೆ ಮತ್ತು ಗೌರವವನ್ನು ಹೊಂದಿರಬೇಕು. ಚಿತ್ರರಂಗ ಹಾಗೂ ಚಿತ್ರೋದ್ಯಮದ ಒಳಿತಿಗಾಗಿ ಈ ನಿರ್ಧಾರ ತೆಗೆದು ಕೊಳ್ಳಲಾಗಿದೆ,” ಎಂದಿದ್ದಾರೆ.
‘ಓಂ’ ಸಿನಿಮಾದಲ್ಲಿ ಧನುಷ್ ಅವರೊಂದಿಗೆ ಮಲಯಾಳಂ ಸೂಪರ್ಸ್ಟಾರ್ ಮಮ್ಮುಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 2019ರ ‘ಪೆರನ್ಬು ‘ ಸಿನಿಮಾದ ನಂತರ ಮಮ್ಮುಟ್ಟಿ ಮತ್ತೆ ತಮಿಳು ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಈ ಚಿತ್ರದ ತಾರಾಗಣದಲ್ಲಿ ಸಾಯಿ ಪಲ್ಲವಿ, ಶ್ರೀ ಲೀಲಾ , ನಾಸಿರುದ್ದೀನ್ ಶಾ , ಹಾಗೂ ಇಂದ್ರನ್ಸ್ ಸೇರಿದಂತೆ ಹಲವರು ನಟಿಸಿದ್ದಾರೆ.












