ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಅವರು ತಮ್ಮ ಮುಂಬರುವ ‘ರಣಬಾಲಿ’ ಸಿನಿಮಾದ ಚಿತ್ರೀಕರಣದ ಅನುಭವದಿಂದ ಪ್ರಭಾವಿತರಾಗಿ, ಬಡ ಹಾಗೂ ನಿರ್ಗತಿಕ 400 ಕುಟುಂಬಗಳನ್ನು ದತ್ತು ಪಡೆದಿದ್ದಾರೆ.
ಭಾರತೀಯ ಇತಿಹಾಸದ ಅತ್ಯಂತ ಕರಾಳ ಅಧ್ಯಾಯಗಳಲ್ಲಿ ಒಂದಾದ 1876-78ರ ಭೀಕರ ಬರಗಾಲದ ಹಿನ್ನೆಲೆಯಲ್ಲಿ ‘ರಣಬಾಲಿ’ ಸಿನಿಮಾ ಮೂಡಿಬರುತ್ತಿದೆ. ಈ ಚಿತ್ರದಲ್ಲಿ ರಶ್ಮಿಕಾ ‘ಜಯಮ್ಮ’ ಎಂಬ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಪಾತ್ರದ ಹಿನ್ನೆಲೆ ಮತ್ತು ರೈತರು ಹಾಗೂ ಬಡವರು ಅನುಭವಿಸಿದ ಕಷ್ಟಗಳು ನಟಿಯ ಮನಸ್ಸನ್ನು ತೀವ್ರವಾಗಿ ಕಾಡಿದೆ. ಸಿನಿಮಾದಲ್ಲಿನ ಪಾತ್ರಕ್ಕೂ, ತಮ್ಮ ನಿಜ ಜೀವನಕ್ಕೂ ಸಾಮ್ಯತೆಯಿದೆ ಎಂದು ಅವರು ಇನ್ಸ್ಟಾಗ್ರಾಮ್ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ದತ್ತು ಪಡೆದ ಈ 400 ಕುಟುಂಬಗಳಿಗೆ ರಶ್ಮಿಕಾ ಅವರ ತಂಡವು ಅಗತ್ಯವಿರುವ ದಿನಸಿ ಕಿಟ್ಗಳನ್ನು ಮನೆಗಳಿಗೆ ತಲುಪಿಸುತ್ತಿದೆ. ಮುಂದಿನ ಒಂದು ವರ್ಷದವರೆಗೆ ಹಂತ ಹಂತವಾಗಿ ಈ ಸಹಾಯ ಮುಂದುವರಿಯಲಿದೆ. ಪ್ರತೀ ಕುಟುಂಬಕ್ಕೆ ಮೂರು ತಿಂಗಳವರೆಗೆ ದಿನಸಿ ಖರ್ಚನ್ನು ತಪ್ಪಿಸಿ, ಆ ಹಣವನ್ನು ಉಳಿತಾಯ ಮಾಡಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ನೆರವಾಗುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಈವರೆಗೆ ಈ ಸಮಾಜಮುಖಿ ಕೆಲಸಗಳನ್ನು ರಶ್ಮಿಕಾ ಗೌಪ್ಯವಾಗಿ ಇಟ್ಟುಕೊಂಡಿದ್ದರು. ಆದರೆ, ತಮ್ಮ ಅಭಿಮಾನಿಗಳಲ್ಲಿಯೂ ಸಮಾಜ ಸೇವೆ ಮಾಡುವ ಮನೋಭಾವ ಬೆಳೆಯಲಿ ಎಂಬ ಆಶಯದಿಂದ ಈಗ ಇದನ್ನು ಬಹಿರಂಗಪಡಿಸಿದ್ದಾರೆ. “ನನ್ನ ಜೀವನದ ಕಷ್ಟಗಳು, ನಿದ್ರೆ ಇಲ್ಲದ ರಾತ್ರಿಗಳು ಮತ್ತು ನೋವುಗಳೆಲ್ಲವೂ ಈ ಜನರ ಮುಖದ ಮೇಲಿನ ನಗುವನ್ನು ನೋಡಿದಾಗ ಸಾರ್ಥಕ ಎನಿಸುತ್ತವೆ” ಎಂದು ಅವರು ಭಾವನಾತ್ಮಕವಾಗಿ ನುಡಿದಿದ್ದಾರೆ.









