“ರೈತರಿಗೆ ನ್ಯಾಯ ಸಿಗುವವರೆಗೆ ಸಕ್ಕರೆ ಸೇವಿಸುವುದಿಲ್ಲ” | “ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ನಿಲ್ಲಿಸಿ ರೈತರಿಗೆ ನೆರವಾಗಬೇಕು” | ಫಕೀರ ದಿಂಗಾಲೇಶ್ವರ ಸ್ವಾಮೀಜಿ ಮಹತ್ವದ ಸುದ್ದಿಗೋಷ್ಠಿ!!

ರೈತರನ್ನು ದೆಹಲಿಗೆ ಕರೆಸಿಕೊಂಡು ಅವರ ಬೇಡಿಕೆ ಈಡೇರಿಸದೆ ಕೇಂದ್ರ ಸರ್ಕಾರ ಅವಮಾನಮಾಡಿದೆ. ಇದನ್ನು ಖಂಡಿಸಿ ನಾಡಿನ ಎಲ್ಲ ಮಠಾಧೀಶರು, ಧರ್ಮಗುರುಗಳು ಬೀದಿಗಿಳಿದು, ರೈತರ ಹೋರಾಟಕ್ಕೆ ಬೆಂಬಲ ನೀಡಬೇಕು’ ಎಂದು ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ದಾರೆ.

Advertisement

ಸಾಹಿತಿಗಳು ರೈತರ ಪರವಾಗಿ ಬರೆಯಬೇಕು. ಸಿನಿಮಾನಟ, ನಟಿಯರು ಸಹ ರೈತರ ಪರ ನಿಲ್ಲಬೇಕು. ಆಮೂಲಕ ಸರ್ಕಾರದ ಕಿವಿ ಹಿಂಡುವ ಕೆಲಸಮಾಡಬೇಕು ಎಂದು ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.

Advertisement

‘ಮಠಗಳು ಉಳಿದಿರುವುದು ರೈತರ ದಾನ ಧರ್ಮಗಳಿಂದ. ಯಾವುದೇ ರಾಜಕಾರಣಿಗಳ ನೆರವಿನಿಂದಲ್ಲ. ಹೀಗಾಗಿ ರೈತರು ಪ್ರತಿಭಟನೆ ನಡೆಸುತ್ತಿರುವ ಸ್ಥಳಗಳಿಗೆ ಹೋಗಿ ಬೆಂಬಲ ನೀಡುತ್ತೇನೆ. ಅಲ್ಲದೆ, ರೈತರಿಗೆ ನ್ಯಾಯ ಸಿಗುವವರೆಗೆ ಸಕ್ಕರೆ ಸೇವಿಸುವುದಿಲ್ಲ’ ಎಂದರು.
‘ಕಬ್ಬಿಗೆ ಬೆಂಬಲ ಬೆಲೆ ನಿಗದಿಪಡಿಸಲು ಕೇಂದ್ರ ಸರ್ಕಾರ ಒಂದು ತಿಂಗಳು ಕಾಲಾವಕಾಶ ಕೇಳಿದ್ದು, ಇದಕ್ಕಾಗಿ ಸಮಿತಿ ರಚಿಸುವುದಾಗಿ ಹೇಳಿದೆ ಎಂದು ರೈತ ಮುಖಂಡರು ಹೇಳಿದ್ದಾರೆ. ಹಾಗಾದರೆ, ಕೇಂದ್ರ ಸರ್ಕಾರದ ಬಳಿ ಸ್ವಾಮಿನಾಥನ್ ಆಯೋಗದ ವರದಿ ಇಲ್ಲವೇ ’ ಎಂದು ಪ್ರಶ್ನಿಸಿದರು.
‘ಸರಿಯಾದ ಸಮಯಕ್ಕೆ ಕಬ್ಬು ಕಟಾವಾಗದಿದ್ದರೆ ಅದರ ತೂಕದಲ್ಲಿ ವ್ಯತ್ಯಾಸವಾಗುತ್ತದೆ. ಇದರಿಂದ ರೈ ತರಿಗೆ ನಷ್ಟವಾಗುತ್ತದೆ. ಇದು ಹವಾನಿಯಂತ್ರಿತ ವ್ಯವಸ್ಥೆಯ ಕೊಠಡಿಯಲ್ಲಿ ಕುಳಿತು ಆಡಳಿತ ಮಾಡುವವರಿಗೆ ಅರ್ಥ ವಾಗುವುದಿಲ್ಲ. ಸ್ವಾಮಿನಾಥ್ ಆಯೋಗದ ವರದಿ ಜಾರಿಗೆ ತರುವುದು ಬಿಟ್ಟು, ರೈತರಿಗೆ ಮೋಸಮಾಡಲು ಮತ್ತೊಂದು ಸಮಿತಿ ರಚಿಸಲಾಗುವುದು ಎಂದು ಹೇಳಿರುವುದು ಸರ್ಕಾರದ ರೈತ ವಿರೋಧಿ ನೀತಿಯಾಗಿದೆ’ ಎಂದರು.

‘ಪ್ರಧಾನಿ ನರೇಂದ್ರ ಮೋದಿ ಅವರು ರೈತರ ವಿಷಯದಲ್ಲಿ ಬಾಯಿ ಮುಚ್ಚಿಕೊಂಡಿರುವುದು ಸರಿಯಲ್ಲ. ರೈತರ ಬೇಡಿಕೆ ಈಡೇರಿಸುವ ವಿಷಯದಲ್ಲಿ ಅವರು ದೃತರಾಷ್ಟ್ರನ ನೀತಿ ಅನುಸರಿಸದೆ, ಧರ್ಮರಾಯನ ನೀತಿ ಅನುಸರಿಸಬೇಕು. ರೈತರ ಪರವಾಗಿ ಇರದ ಯಾವ ಸರ್ಕಾರಗಳೂ ದೇಶದಲ್ಲಿ ಉಳಿದಿಲ್ಲ’ ಎಂದರು.
‘ಇಲ್ಲಿನ ಕೇಂದ್ರ ಸಚಿವರು ಪ್ರಧಾನಿಯವರ ಹತ್ತಿರದಲ್ಲೇ ಇರುತ್ತಾರೆ. ಅವರು ರೈತರ ಬೇಡಿಕೆ ಈಡೇರಿಸಲು ಪ್ರಯತ್ನಿಸಬೇಕು. ಇಲ್ಲದಿದ್ದರೆ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇದನ್ನು ಮಾಡದಿದ್ದರೆ ಅವರು ಹುಬ್ಬಳ್ಳಿಗೆ ಕಾಲಿಡಲು ಆಗ ಸ್ಥಿತಿ ಬರಲಿದೆ’ ಎಂದು ಪ್ರಲ್ಹಾದ ಜೋಶಿ ಅವರ ಹೆಸರು ಹೇಳದೆ ಎಚ್ಚರಿಸಿದರು.
‘ನಮ್ಮದು ಕೃಷಿ ಪ್ರದಾನ ದೇಶ, ರೈತ ದೇಶದ ಬೆನ್ನೆಲುಬು ಎಂದು ಎಲ್ಲ ಪಕ್ಷಗಳ ನಾಯಕರು ಹೇಳುತ್ತಾರೆ. ಆದರೆ, ರೈತರಿಗೆ ಇಂತಹ ಪರಿಸ್ಥಿತಿ ಬರಲು ಯಾರು ಕಾರಣ ಎಂದು ವಿಚಾರ ಮಾಡಬೇಕು’ ಎಂದು ಹೇಳಿದರು.

‘ಕಚ್ಚಾ ತೈಲದ ಬೆಲೆ ಏರಿಕೆ ನೆಪವೊಡ್ಡಿ ಪೆಟ್ರೋಲ್ ಬೆಲೆಯನ್ನು ರಾತ್ರೋ ರಾತ್ರಿ ಹೆಚ್ಚಿಸಲಾಗುತ್ತದೆ. ಆಗ ಯಾವ ಸಮಿತಿಯನ್ನೂ ರಚಿಸುವುದಿಲ್ಲ. ರಸಗೊಬ್ಬರ, ಕೂಲಿ ಕಾರ್ಮಿಕರ ಕೂಲಿ, ವಿದ್ಯುತ್ ದರ ಹೆಚ್ಚಾಗಿರುವುದು ರೈತರಿಗೆ ಹೊರೆಯಾಗಿದೆ. ಆದರೂ ಆವರು ಬೆಳೆದ ಬೆಳೆಗೆ ಅವರು ಕೇಳಿದ ಬೆಲೆ ಕೊಡುತ್ತಿಲ್ಲ’ ಎಂದರು.
“ಎಲ್ಲ ಕಂಪನಿಗಳು ತಾವು ತಯಾರಿಸುವ ವಸ್ತುಗಳ ಬೆಲೆಯನ್ನು ಅವೇ ನಿರ್ಧರಿಸುತ್ತವೆ. ಆದರೆ, ರೈತರಿಗೆ ಮಾತ್ರ ಅವರು ಬೆಳೆದ ಬೆಳೆಯ ಬೆಲೆ ನಿಗದಿಪಡಿಸುವ ಅಧಿಕಾರ ಇಲ್ಲ. ಇದು ಅನ್ಯಾಯದ ಪರಮಾವಧಿ’ ಎಂದು ಹೇಳಿದರು. ರೈತರ ಕಷ್ಟ ನಿವಾರಣೆಯಾದಾಗ ಮಾತ್ರ ನಾಡು ಸುಭಿಕ್ಷವಾಗುತ್ತದೆ. ಹೀಗಾಗಿ ರಾಜ್ಯ ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು ಒಂದು ವರ್ಷ ನಿಲ್ಲಿಸಿ, ಆ ಹಣವನ್ನು ರೈತರಿಗೆ ನೀಡಬೇಕು. ಕೇಂದ್ರ ಸರ್ಕಾರವೂ ರೈತರ ಬೇಡಿಕೆ ಈಡೇರಿಸಬೇಕು ಎಂದು ದಿಂಗಾಲೇಶ್ವರ ಸ್ವಾಮೀಜಿ ಆಗ್ರಹಿಸಿದರು.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page