ಮಂಗಳೂರು: ಧರ್ಮಸ್ಥಳದ ಸೌಜನ್ಯ ಪ್ರಕರಣದ ಮರುತನಿಖೆ ಮುಂದುವರಿದಿದ್ದು, ಪ್ರಕರಣದ ಪ್ರಾಥಮಿಕ ತನಿಖೆ ನಡೆಸಿದ್ದ ಅಂದಿನ ಪೊಲೀಸ್ ಅಧಿಕಾರಿಗಳನ್ನು ವಿಶೇಷ ತನಿಖಾದಳ ವಿಚಾರಣೆಗೆ ಒಳಪಡಿಸಿದೆ ಎಂದು ತಿಳಿದು ಬಂದಿದೆ.
ಬೆಳ್ತಂಗಡಿ ಪೊಲೀಸ್ ಠಾಣೆಯ ಅಂದಿನ ಪೊಲೀಸ್ ಇನ್ಸ್ಪೆಕ್ಟರ್ ಭಾಸ್ಕರ್ ರೈ, ಸಿಐಡಿಯ ಅಂದಿನ ಡಿವೈಎಸ್ಪಿ ರುದ್ರಮುನಿ ಹಾಗೂ ಪ್ರಕರಣದ ಪ್ರಾಥಮಿಕ ತನಿಖೆ ನಡೆಸಿದ್ದ ಪಿಎಸ್ಐ ಯೋಗೀಶ್ ಅವರನ್ನು ವಿಚಾರಣೆಗೆ ಕರೆಯಲಾಗಿದೆ ಎಂದು ತಿಳಿದುಬಂದಿದೆ. ಮಂಗಳೂರಿನಲ್ಲಿರುವ ಎಸ್ಐಟಿ ಕಚೇರಿಗೆ ಅಂದಿನ ಅಧಿಕಾರಿಗಳು ಆಗಮಿಸಿದ್ದು, ಪಿಎಸ್ಐ ಯೋಗೀಶ್ ಅವರು ತಮ್ಮೊಂದಿಗೆ ನೋಟ್ಬುಕ್ ತಂದಿರುವುದು ಗಮನ ಸೆಳೆದಿದೆ ಎಂದು ವರದಿಯಾಗಿದೆ.
ಇನ್ನು, ಕೆಲವು ಮಾಜಿ ಪೊಲೀಸ್ ಅಧಿಕಾರಿಗಳು ಹಲವು ಕಡತಗಳೊಂದಿಗೆ ಎಸ್ಐಟಿ ಕಚೇರಿಗೆ ಆಗಮಿಸಿದ್ದಾರೆ. ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಅವರು ತಂದಿರಬಹುದು ಎಂದು ಹೇಳಲಾಗುತ್ತಿದ್ದರೂ, ಕಡತಗಳಲ್ಲಿರುವ ಮಾಹಿತಿ ಕುರಿತು ಅಧಿಕೃತ ದೃಡೀಕರಣ ಲಭ್ಯವಾಗಿಲ್ಲ ಎಂದು ಜಾಲತಾಣ ಮೂಲಗಳು ತಿಳಿಸಿದ್ದು, ಪ್ರಕರಣದ ಆರಂಭಿಕ ತನಿಖೆಯಲ್ಲಿ ನಡೆದಿದ್ದ ಬೆಳವಣಿಗೆಗಳು ಹಾಗೂ ಸಂಗ್ರಹಿಸಲಾಗಿದ್ದ ದಾಖಲೆಗಳ ಕುರಿತು ಎಸ್ಐಟಿ ಮಾಹಿತಿ ಪಡೆಯುತ್ತಿದೆ ಎನ್ನಲಾಗಿದೆ. ಮರುತನಿಖೆಯ ಭಾಗವಾಗಿ ಹಿಂದಿನ ತನಿಖಾಧಿಕಾರಿಗಳ ವಿಚಾರಣೆ ಮಹತ್ವ ಪಡೆದುಕೊಂಡಿದೆ ಎಂದು ಮೂಲಗಳು ಹೇಳಿವೆ.












