ಪುತ್ತೂರು : ಜನತೆಗೆ ಪಂಚ ಗ್ಯಾರಂಟಿಯ ಆಸೆ ತೋರಿಸಿ ಅಧಿಕಾರಕ್ಕೆ ಬಂದ ಆರಂಭದಿಂದಲೇ ಭ್ರಷ್ಟಾಚಾರ, ಹಗರಣಗಳನ್ನು ನಡೆಸಿದ ಕಾಂಗ್ರೆಸ್ ಸರಕಾರಕ್ಕೆ ಜನಪರ ಅಭಿವೃದ್ಧಿಯ ಇಚ್ಛಾಶಕ್ತಿ ಇಲ್ಲ. ಈಗ ಕೇಂದ್ರ ಸರಕಾರದ ಯೋಜನೆಗಳಿಗೂ ಅಡ್ಡಗಾಲು ಹಾಕುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಪುತ್ತೂರು ಆರೋಪಿಸಿದರು.
ರಾಜ್ಯ ಕಾಂಗ್ರೆಸ್ ಸರಕಾರದ ಜನ ವಿರೋಧಿ ನೀತಿಗಳ ವಿರುದ್ಧ ಬಿಜೆಪಿ ನಗರ ಮಂಡಲದ ವತಿಯಿಂದ ಸೋಮವಾರ ನಗರದ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಆಯೋಜಿಸಲಾದ ಜನಾಂದೋಲನ `ನಮ್ಮ ಹಕ್ಕು ನಮಗೆ ನೀಡಿ – ಬೃಹತ್ ಹಕ್ಕೊತ್ತಾಯ ಸಭೆ’ಯಲ್ಲಿ ಅವರು ಮಾತನಾಡಿದರು.
ಜನರು ಕಟ್ಟಿದ ತೆರಿಗೆ ಹಣ, ಜನರ ಉಪಯೋಗಕ್ಕೇ ಸಿಗದಂತಹ ಸ್ಥಿತಿಯನ್ನು ಕಾಂಗ್ರೆಸ್ ಆಡಳಿತ ಮಾಡಿದೆ. ಪರಿಶಿಷ್ಟ ಜಾತಿ, ಪಂಗಡದವರಿಗೆ ಮೀಸಲಾದ 36 ಸಾವಿರ ಕೋಟಿ ಹಣವನ್ನು ನುಂಗಿ ನೀರು ಕುಡಿದಿದ್ದಾರೆ. ವೃದ್ಧರು, ವಿಧವೆಯ ಪಿಂಚಣಿಯನ್ನು ತಡೆ ಹಿಡಿದ, ಅಂಗವಿಕಲರ ಪಿಂಚಣಿಯನ್ನು ನಿಲ್ಲಿಸಿದ ಸರಕಾರಕ್ಕೆ ದೇವರ ಶಾಪವಿದೆ. ಈ ಸರಕಾರ ಯಾವುದೇ ವಸತಿ ಯೋಜನೆಯನ್ನೂ ನೀಡಿಲ್ಲ. ಒಂದೇ ಒಂದು ಬಿಪಿಎಲ್ ಕಾರ್ಡ್ ಈ ಕೊಟ್ಟಿಲ್ಲ. ಅಭಿವೃದ್ಧಿ ಕಾರ್ಯಗಳಿಗೆ ತಡೆ ನೀಡಿದೆ. ಹೈಕೋರ್ಟ್ ಛೀಮಾರಿ ಹಾಕಿದರೂ ಇವರಿಗೆ ನಾಚಿಕೆ ಇಲ್ಲ ಎಂದು ವ್ಯಂಗ್ಯವಾಡಿದರು.
ಬಿಜೆಪಿ ನಾಯಕರ ಬಗ್ಗೆ ಕೆಟ್ಟದಾಗಿ ಮಾತನಾಡುವ ಶಾಸಕರಿಗೆ ಎಚ್ಚರಿಕೆ ನೀಡುತ್ತೇವೆ. `ನೀನೇ ಸಾಕಿದ ಗಿಣಿ ಹದ್ದಾಗಿ ಕುಕ್ಕಿತಲ್ಲೋ’ ಎನ್ನುವುದನ್ನು ಶಾಸಕರು ಸಾಭೀತು ಮಾಡಿದ್ದಾರೆ. ಇದೇ ರೀತಿಯ ವರ್ತನೆ ಮುಂದುವರಿಸಿದರೆ, ಶಾಸಕರ ಮನೆ ಮುಂದೆ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದ ಕಿಶೋರ್ ಕುಮಾರ್, ನಾವು ಅಧಿಕಾರಕ್ಕಾಗಿ ಬಿಜೆಪಿಯಲ್ಲಿಲ್ಲ. ತ್ಯಾಗದ ಪಕ್ಷ ನಮ್ಮದು. ನೀವು ಮೊದಲು ಅಭಿವೃದ್ಧಿ ಮಾಡಿ ತೋರಿಸಿ ಎಂದು ಸವಾಲು ಹಾಕಿದರು.
ಬಂಡಾಲ್ ಬಡಾಯಿ ಅಶೋಕಣ್ಣ ನಿಮ್ಮ ರೀಲ್ಸ್ ಬಿಟ್ಟು ದಯವಿಟ್ಟು ಅಭಿವೃದ್ಧಿ ಮಾಡಿ. ಅಧಿಕಾರದ ಮದದಿಂದ ಮಾತನಾಡುವುದನ್ನು ಬಿಡಿ. ನಾವು ಯಾರಿಗೂ ಅಡ್ಡಿ ಮಾಡುವುದಿಲ್ಲ, ಆದರೆ 100 ಬಾರಿ ಅದೇ ಪುನರಾವರ್ತನೆಯಾಗಿ ಶಾಸಕರು ತಮ್ಮ ಹದ್ದುಬಸ್ತನ್ನು ಮೀರಿದ ಕಾರಣ ನಾವು ಮಾತನಾಡುತ್ತಿದ್ದೇವೆ ಎಂದು ಕಿಶೋರ್ ಹೇಳಿದರು.
ಕಾರ್ಯಕ್ರಮದ ಉಸ್ತುವಾರಿ ನಗರಸಭಾ ಮಾಜಿ ಅಧ್ಯಕ್ಷ ಕೆ. ಜೀವಂಧರ್ ಜೈನ್ ಮಾತನಾಡಿ, ನಗರಸಭೆಗೆ ಆಡಳಿತಾಧಿಕಾರಿ ನೇಮಕವಾಗಿ ಒಂದು ವರ್ಷವಾಗಿದೆ. ಬಿಜೆಪಿ ಆಡಳಿತದಲ್ಲಿ ಅಮೃತ ನಗರೋತ್ಥಾನ ಯೋಜನೆಯಲ್ಲಿ ವಿಶೇಷ ಅನುದಾನ 25 ಕೋಟಿ ಕೊಟ್ಟಿದ್ದನ್ನು ಪ್ರತಿ ವಾರ್ಡ್‍ಗಳ ಅಭಿವೃದ್ಧಿಗೆ ಹಂಚಿದ್ದೇವೆ. ಕೇಂದ್ರ ಸರಕಾರ 15 ನೇ ಹಣಕಾಸು ಆಯೋಗದ ಮೂಲಕ 2 ಕೋಟಿ ರೂ. ನೀಡಿದರೆ, ಕಾಂಗ್ರೆಸ್ ಸರಕಾರ ಕಳೆದ ಮೂರುವರೆ ವರ್ಷದಲ್ಲಿ ಒಂದೂವರೆ ಕೋಟಿ ಮಾತ್ರ ನೀಡಿದೆ. ಇದು ಅಭಿವೃದ್ಧಿ ಪಥವೇ ? ಹಾಗಾಗಿ ನಮ್ಮ ಹಕ್ಕನ್ನು ನಮಗೆ ನೀಡಿ ಎಂಬ ಹೋರಾಟ ಹಮ್ಮಿಕೊಂಡಿದ್ದೇವೆ ಎಂದರು. ಮುಂದಿನ ನಗರಸಭೆ ಚುನಾವಣೆಯಲ್ಲಿ 31 ಸೀಟುಗಳನ್ನೂ ನಾವೇ ಗೆಲ್ಲುತ್ತೇವೆ ಎಂದು ಹೇಳಿದರು.
ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ್ ಶೆಟ್ಟಿ ಉಜಿರೆಮಾರು ಪ್ರಾಸ್ತಾವಿಕವಾಗಿ ಮಾತನಾಡಿ, ಬಡವರ ಜೀವನದಲ್ಲಿ ಚೆಲ್ಲಾಟವಾಡುತ್ತಿರುವ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಹಕ್ಕೊತ್ತಾಯ ಪ್ರತಿಭಟನೆ ಆರಂಭಿಸಲಾಗಿದ್ದು, ದಿನಕ್ಕೆ 3 ರಂತೆ ಗ್ರಾ.ಪಂ. ವ್ಯಾಪ್ತಿಗಳಲ್ಲಿ 1 ಕಿ.ಮೀ. ಪಾದಯಾತ್ರೆ ಹಾಗೂ ಹಕ್ಕೊತ್ತಾಯ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಆರಂಭದಲ್ಲಿ `ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಪಾದಯಾತ್ರೆಗೆ ಬೊಳುವಾರು ಶ್ರೀ ಆಂಜನೇಯ ಮಂತ್ರಾಲಯದ ಬಳಿ ಸಂಘ ಪರಿವಾರದ ಹಿರಿಯ ನಾಯಕ ಯು. ಪೂವಪ್ಪ ಅವರು ಪಕ್ಷದ ಧ್ವಜ ಹಸ್ತಾಂತರದ ಮೂಲಕ ಚಾಲನೆ ನೀಡಿದರು. ನೂರಾರು ಮಂದಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ರಾಜ್ಯದ ಸರಕಾರದ ವಿರುದ್ಧ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿ, ಘೋಷಣೆಗಳನ್ನು ಕೂಗುತ್ತಾ ಪಾದಯಾತ್ರೆಯ ಮೂಲಕ ಸಾಗಿಬಂದರು.
ಹಕ್ಕೊತ್ತಾಯ ಸಭೆಯ ಬಳಿಕ ನಗರಸಭಾ ಪೌರಾಯುಕ್ತರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಯುವರಾಜ್ ಪೆರಿಯತ್ತೋಡಿ, ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ್ ಶೆಟ್ಟಿ ಉಜಿರೆಮಾರು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷಪ್ರಸನ್ನ ಮಾರ್ತಾ, ವಿದ್ಯಾ ಆರ್. ಗೌರಿ, ಓಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಆರ್.ಸಿ. ನಾರಾಯಣ್, ಬಿಜೆಪಿ ಮಾಜಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ನಗರಸಭೆ ನಿಕಟಪೂರ್ವ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ್, ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಶಶಿಧರ್ ನಾಯಕ್, ಲೊಕೇಶ್ ಚಾಕೋಟೆ, ಬಿಜೆಪಿ ವಕ್ತಾರ ರಾಜೇಶ್ ಬನ್ನೂರು ಮತ್ತಿತ್ತರರು ಉಪಸ್ಥಿತರಿದ್ದರು.














