ಬೆಂಗಳೂರು : ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣದಲ್ಲಿ ಕಾರು ಚಾಲಕನನ್ನು ಕರೆಸಿ ಡಿ.ಕೆ. ಶಿವಕುಮಾರ್ ಷಡ್ಯಂತ್ರ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಪ್ರಮುಖ ದಾಖಲೆ ಹಾಗೂ ಕರೆಗಳ ವಿವರಗಳನ್ನು ಬಿಡುಗಡೆ ಮಾಡಿ ಕಾಂಗ್ರೆಸ್ ವಿರುದ್ಧ ಸಮರ ತೀವ್ರಗೊಳಿಸಿದ್ದಾರೆ.
ಸಿದ್ದರಾಮಯ್ಯ ವಿರುದ್ದದ ಸ್ಟಿಂಗ್ ಪ್ರಕರಣ ಸಂಬಂಧ ಬೆಂಗಳೂರು ಪೊಲೀಸ್ ಕಮಿಷನರ್ ಆರೋಪ ಮಾಡಿದ ಮರು ದಿನ ಸೋಮವಾರ ಮಹತ್ವದ ಸುದ್ದಿಗೋಷ್ಠಿ ನಡೆಸಿ ಕಿಡಿಕಾರಿದ ಮಾಜಿ ಸಿಎಂ ಎಚ್ ಡಿಕೆ ”ಸ್ಟಿಂಗ್ ವಿಚಾರ ನನಗೆ ತಿರುಗಬಾಣವಾಗುತ್ತದೆ ಎಂದು ಚರ್ಚೆಯಾಗುತ್ತಿದೆ. ಆದರೆ ದೆಹಲಿಯ ರಿತೇಶ್ ಪಾಂಡೆಯನ್ನು ಅರೆಸ್ಟ್ ಮಾಡಿದ್ದು ಎಲ್ಲಿ? ಎಂದು ಪ್ರಶ್ನಿಸಿದ್ದಾರೆ.
2023 ಆಗಸ್ಟ್ 5,6 ರಂದು ಕಾರ್ತಿಕ್ ಡಿ.ಕೆ.ಶಿವಕುಮಾರ್ ಮನೆಗೆ ಹೋಗಿದ್ದು, ಆ ಕ್ಯಾಸೆಟ್ ಆಗಿದ್ದು ಅವರ ಮನೆಯಲ್ಲೇ? ಈ ಬಗ್ಗೆ ತನಿಖೆ ಆಗಿದೆಯೇ ಎಂದು ಕೇಂದ್ರ ಸಚಿವ ಎಚ್ ಡಿಕೆ ಪ್ರಶ್ನಿಸಿದರು.
ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು ರಾಹುಲ್ ಪ್ರಧಾನಿಯಾಗುವುದನ್ನು ತಪ್ಪಿಸದರೆಂದು ನನ್ನ ಕುಟುಂಬವನ್ನು ನಿರ್ನಾಮ ಮಾಡಲು ಕಾಂಗ್ರೆಸ್ ನಾಯಕರು ಮುಂದಾಗಿದ್ದು, ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್ ಕಟ್ಟು ಕಥೆಯ ಭಾಗವಾಗಿದ್ದು, ಉದ್ದೇಶಪೂರ್ವಕವಾಗಿ ಷಡ್ಯಂತ್ರ ಎಂದು ಪೊಲೀಸರು ತನಿಖಾ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಸಿದ್ದರಾಮಯ್ಯ ಅವರಿಗೆ ಕ್ಲೀನ್ಚಿಟ್ ನೀಡಿದ್ದಾರೆ. ಸ್ಟಿಂಗ್ ಮಾಡಿಸಿದವರನ್ನು ರಕ್ಷಿಸುವುದೇ ನಿಮ್ಮ ಉದ್ದೇಶವಾಗಿದ್ದು, ಪ್ರಕರಣದಲ್ಲಿ ನಮ್ಮ ಪಕ್ಷದವರದ್ದೇ (ಕಾಂಗ್ರೆಸ್) ಪಾತ್ರವಿದೆ ಎಂದು ಸಚಿವ ಯತೀಂದ್ರ ಖುದ್ದು ಆರೋಪ ಮಾಡಿದ್ದಾರೆ. ಹೀಗಿದ್ದರೂ ಸಿದ್ದರಾಮಯ್ಯಗೆ ಕ್ಲೀನ್ಚಿಟ್ ನೀಡಿ ಸರಕಾರ ಉಳಿಸಿಕೊಳ್ಳಲು ಮುಂದಾಗಿದ್ದಾರೆ” ಎಂದು ಕುಮಾರಸ್ವಾಮಿ ಕಿಡಿಕಾರಿದರು.
ಸ್ಟಿಂಗ್ ಆಪರೇಷನ್ ಮೂಲ ಪುರುಷ ಏಕೆ ಕೋರ್ಟ್ ಮೊರೆ ಹೋಗಿದ್ದಾನೆ? ನಾನೇನಾದರೂ ಮಾಡಬೇಕಾದರೆ ಕದ್ದು ಮುಚ್ಚಿ ಮಾಡುವುದಿಲ್ಲ. ರಾಜ್ಯದ ಪೊಲೀಸ್ ಅಧಿಕಾರಿಗಳ ಬಗ್ಗೆ ಒಳ್ಳೆಯ ಅಭಿಪ್ರಾಯವಿದ್ದು, ಕೆಲ ಪೊಲೀಸ್ ಅಧಿಕಾರಿಗಳ ವಿರುದ್ಧ ಆರೋಪವೂ ಇದೆ. ನಮಗೂ ಸಮಯ ಬರುತ್ತದೆ, ಪೊಲೀಸರು ಪ್ರಾಮಾಣಿಕವಾಗಿ ಕೆಲಸ ಮಾಡಿ. ನಮ್ಮ ಕುಟುಂಬ ಪ್ರಧಾನಿ ಹುದ್ದೆಯನ್ನು ನೋಡಿದ್ದರೂ ಪೊಲೀಸರನ್ನು ಹೆದರಿಸಿಲ್ಲ. ನಾನು ಎರಡು ಸಲ ಸಿಎಂ ಆದರೂ ದ್ವೇಷದ ರಾಜಕಾರಣ ಮಾಡಲಿಲ್ಲ. ನಮ್ಮ ಮನೆ ಮೇಲೆ ದಾಳಿ ನಡೆಸಲು ಬನ್ನಿ ತಯಾರಿದ್ದೇನೆ ಎಂದು ಕುಮಾರಸ್ವಾಮಿ ಸವಾಲು ಹಾಕಿದರು.
”ನಾನು ಏನು ಮಾಡಿದ್ದೇನೆಂದು ನನ್ನನ್ನು ವಿಚಾರಣೆಗೆ ಕರೆಯುತ್ತಾರೆ? ಕೇಂದ್ರ ಸಚಿವರನ್ನು ಬಂಧಿಸುತ್ತಾರೆಂದು ರಾಜ್ಯದಲ್ಲಿ ಚರ್ಚೆ ನಡೆಯುತ್ತಿದೆ. ಅದು ಯಾವ ಕೇಂದ್ರ ಸಚಿವರನ್ನು ಬಂಧಿಸುತ್ತಾರೋ ನೋಡೋಣ. ಈ ಕುಮಾರಸ್ವಾಮಿಯನ್ನು ಟಚ್ ಮಾಡಲು ಕೂಡ ಆಗುವುದಿಲ್ಲ” ಎಂದು ಗುಡಿಗಿದರು.
”ರಾಜ್ಯೋತ್ಸವ ಆಚರಣೆ ಬಳಿಕ ಎಲ್ಲಿ ಸಭೆ ನಡೆಸಿದ್ದಾರೆ ಎಂದು ಗೊತ್ತಿದೆ. ಸ್ಟಿಂಗ್ ಆಪರೇಷನ್ ಕೇಸ್ನ್ನು ನನ್ನ ಮನೆಗೂ ಲಿಂಕ್ ಮಾಡಿದ್ದು, ಇಡಿ ದಾಳಿಗೆ ಒತ್ತಡ ಎಂದು ನನ್ನ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆರೋಪ ಮಾಡಿದ್ದಾರೆ. ಆದರೆ ಕೆಪಿಎಸ್ಸಿಯ ನಿಮ್ಮ ಕರ್ಮಕಾಂಡಗಳನ್ನು ಮರೆಮಾಚುತ್ತಿರುವುದು ಯಾರು? ನನ್ನ ಸಹೋದರನ ಪುತ್ರನಿಗೆ ಜೀವಾವಧಿ ಶಿಕ್ಷೆ ಕೊಡಿಸಿದ್ದೀರಿ. ಆದರೂ ನಾನು ಯಾರ ಬಳಿಯೂ ಹೋಗಿ ಭಿಕ್ಷೆ ಬೇಡಿಲ್ಲ. ನಾನು ಎಲ್ಲೂ ಪ್ರಕರಣಗಳನ್ನು ಏಕಾಂಗಿಯಾಗಿಯೇ ಎದುರಿಸುತ್ತೇನೆ. ಈ ಬಗ್ಗೆ ಸದನದಲ್ಲೇ ಹೇಳಿದ್ದೇನೆ, ಬೇಕಾದರೆ ದಾಖಲೆ ತೆಗೆದು ನೋಡಿ. ನಿಮ್ಮ ರೀತಿ ನಾನು ರಕ್ಷಣೆ ಪಡೆದು ಕೊಂಡಿಲ್ಲ” ಎಂದು ಎಚ್ ಡಿಕೆ ಕೆಂಡಾಮಂಡಲರಾದರು.
ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದ ಸ್ಟಿಂಗ್ ಆಪರೇಷನ್ ವಿಡಿಯೋ ಅಪ್ಲೋಡ್ ಮಾಡಲು ಬಳಸಲಾಗಿದೆ ಎನ್ನಲಾದ ಮೊಬೈಲ್ ಫೋನ್ ಅನ್ನು ದೆಹಲಿಯಲ್ಲಿರುವ ತಮ್ಮ ಅಧಿಕೃತ ನಿವಾಸಕ್ಕೆ ತಂದು ಕೊಡಲಾಗಿತ್ತು ಎಂಬ ಆರೋಪವನ್ನು ಕುಮಾರಸ್ವಾಮಿ ನಿರಾಕರಿಸಿದ್ದಾರೆ. ಈ ಪ್ರಕರಣದಲ್ಲಿ ರಾಜ್ಯ ಸರ್ಕಾರ ತನಿಖೆಯ ಹೆಸರಿನಲ್ಲಿ ಸತ್ಯ ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ರಿತೇಶ್ ಪಾಂಡೆ ನೀಡಿರುವ ಹೇಳಿಕೆಯ ಪ್ರಕಾರ, ಪ್ರಜ್ವಲ್ ಪ್ರಸಾದ್ ಅವರ ಸೂಚನೆಯ ಮೇರೆಗೆ ಮೊಬೈಲ್ ಹಸ್ತಾಂತರಿಸಲಾಗಿದೆ ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ.














