ಮಂಗಳೂರು: ಅಡಿಕೆ ಹಾಳೆ ತಟ್ಟೆಯಲ್ಲಿ ಹೆಚ್ಚು ರಾಸಾಯಣಿಕ ಅಂಶವಿದೆ ಎಂದು ಅಮೆರಿಕದ ಎಫ್‌ಡಿಎ ಈ ಹಿಂದೆ ನಿಷೇಧಿಸಿದೆ. ಈ ಬಗ್ಗೆ ನಮ್ಮ ಮೂಲಕ ಸಂಶೋಧನೆ ನಡೆಸಿದ್ದು, ಅದು ಉಲ್ಲೇಖೀಸಿರುವುದಕ್ಕಿಂತ ಕಡಿಮೆ ಇರುವುದು ಪತ್ತೆಯಾಗಿದೆ. ಹಾಗಾಗಿ ಈ ವರದಿಗಳನ್ನು ಸಲ್ಲಿಸಿ ನಿಷೇಧ ಮರು ಪರಿಶೀಲನೆಗೆ ಅಗ್ರಿಲೀಫ್ ಸಂಸ್ಥೆ ಕೋರಿದೆ. ಹಾಳೆಯ ಉತ್ಪನ್ನಗಳಿಂದ ಅರೆಕೋಲಿನ್, ಅರೆಕೈಡಿನ್ ಗುವಾಕೋಲಿನ್ ಮತ್ತು ಗುವಾಸಿನ್‌ನಂತಹ ರಾಸಾಯನಿಕಗಳು ಆಹಾರಕ್ಕೆ ವರ್ಗಾವಣೆ ಆಗಬಹುದು ಎಂದು ಎಫ್ ಡಿಎ 2025 ರಲ್ಲಿ ನಿಷೇಧಿಸಿ, “ಆಮದು ಎಚ್ಚರಿಕೆ 23-15ರ ವ್ಯಾಪ್ತಿಗೆ ಸೇರಿಸಿತ್ತು. ಇದರಿಂದ ಹಾಳೆ ತಟ್ಟೆ ತಯಾರಿಸುವ 5,000 -7,000 ಸಣ್ಣ ಮತ್ತು ಅತೀ ಸಣ್ಣ ಉತ್ಪಾದನ ಘಟಕಗಳಲ್ಲಿ ತೊಂದರೆ ಉಂಟಾಗಿದೆ. ಈ ಮಧ್ಯೆ 16 ತಿಂಗಳುಗಳ ವೈಜ್ಞಾನಿಕ ಅಧ್ಯಯನ ನಡೆಸಲಾಗಿದ್ದು, ಪರೀಕ್ಷಿತ ಮಾದರಿಗಳಲ್ಲಿ ಕಂಡು ಬಂದ ರಾಸಾಯನಿಕದ ಮಟ್ಟವು ಎಫ್‌ಡಿಎ ಉಲ್ಲೇಖೀಸಿದ್ದಕ್ಕಿಂತ ಸಾವಿರ ಪಾಲು ಕಡಿಮೆ ಇದೆ. ಹಾನಿಕಾರಕ ಅಲ್ಕಲಾಯ್ ಗಳ ಪ್ರಮಾಣ ಕಡಿಮೆ ಇದೆ ಎಂದು ಸಂಸ್ಥೆಯ ಸಂಸ್ಥಾಪಕ ಅವಿನಾಶ ರಾವ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮೈಸೂರು ವಿವಿಯ ಜೈವಿಕ ರಸಾಯನಶಾಸ್ತ್ರ ವಿಭಾಗದ ಮಾಜಿ ಮುಖ್ಯಸ್ಥ, ಅಮೆರಿಕದಲ್ಲಿ ಕ್ಯಾನ್ಸರ್ ಜೀವಶಾಸ್ತ್ರಕ್ಕೆ ಸಂಬಂಧಿಸಿ ಸಂಶೋಧನೆ ಕೈಗೊಂಡಿದ್ದ ಡಾ| ಗೋಪಾಲ್ ಮರಾಠ ಅವರ ಮಾರ್ಗದರ್ಶನದಲ್ಲಿ ಐಐಎಸ್ಸಿ, ಮಾಹೆ ಲೈಫ್ ಸೈನ್ಸಸ್ ಮತ್ತಿತರ ಸಂಸ್ಥೆಗಳ ಸಹಯೋಗದಲ್ಲಿ ಅಧ್ಯಯನ ಕೈಗೊಳ್ಳಲಾಗಿತ್ತು ಎಂದ ಅವರು, ಮುಂದಕ್ಕೆ ಮಾನ್ಯತೆ ಪಡೆದ ಪ್ರಯೋಗಾಲಯಗಳ ಮೂಲಕ ಪ್ರತಿ ಹಾಳೆ ಉತ್ಪಾದನ ಬ್ಯಾಚ್‌ಗಳ ಮೌಲ್ಯಮಾಪನ, ಪಾರದರ್ಶಕ ವೈಜ್ಞಾನಿಕ ಪರಿಶೀಲನೆ, ಪ್ರಮಾಣೀಕೃತ ಪರೀಕ್ಷಾ ವಿಧಾನ, ಮಾನದಂಡ ಗಳ ನಿಗದಿ ಪಡಿಸಿ, ಹೆಚ್ಚುವರಿ ಅಂತಾರಾಷ್ಟ್ರೀಯ ವೈಜ್ಞಾನಿಕ ಸಂಸ್ಥೆಗಳ ಸಹಯೋಗ ಪಡೆಯಲಾಗುವುದು ಎಂದರು.













