ಮಂಗಳೂರು : ಕ್ಯಾಂಪ್ಕೊದ ನೂತನ ಚಾಕೊಲೇಟ್ಗಳಾದ ‘ಡೈರಿ ಡ್ರೀಮ್ ಬಾದಾಮ್ ಬೈಟ್ಸ್’ ಮತ್ತು ‘ಡೈರಿ ಡ್ರೀಮ್ ಕ್ರೀಮ್ ಬ್ರೌನಿ’ ಮಂಗಳೂರಿನ ಫೋರಂ ಫಿಜಾ ಬೈ ನೆಕ್ಸಸ್ ಮಾಲ್ನ ಸೆಂಟ್ರಲ್ ಏಟ್ರಿಯಂನಲ್ಲಿ ನವೆಂಬರ್ 15ರಂದು ಅನಾವರಣಗೊಳ್ಳಲಿವೆ. ಕ್ಯಾಂಪ್ಕೊ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಮಾಲ್ನ ಮಕ್ಕಳ ದಿನಾಚರಣೆಯ ಅಂಗವಾಗಿ ಸಂಜೆ 4ರಿಂದ 5.30ರವರೆಗೆ ಈ ಕಾರ್ಯಕ್ರಮ ನಡೆಯಲಿದೆ.
ತನ್ನ ಚಾಕೊಲೇಟ್ ಶ್ರೇಣಿಯನ್ನು ವಿಸ್ತರಿಸಿ, ಭಾರತದಾದ್ಯಂತ ಗ್ರಾಹಕರನ್ನು ತಲುಪುವ ಕ್ಯಾಂಪ್ಕೊದ ಪ್ರಯತ್ನದಲ್ಲಿ ಈ ಉತ್ಪನ್ನಗಳ ಬಿಡುಗಡೆ ಮತ್ತೊಂದು ಹೆಜ್ಜೆಯಾಗಿದೆ. ನೂತನ ಉತ್ಪನ್ನಗಳೊಂದಿಗೆ, ಹೊಸ ವಿನ್ಯಾಸದ ಪ್ಯಾಕೇಜಿಂಗ್ನಲ್ಲಿ ಅಸ್ತಿತ್ವದಲ್ಲಿರುವ ಚಾಕೊಲೇಟ್ ಶ್ರೇಣಿಯನ್ನೂ ಪರಿಚಯಿಸಲಾಗುವುದು. ಭಾರತದ ರೈತ ಸಮುದಾಯದೊಂದಿಗೆ ಬೆಸೆದುಕೊಂಡಿರುವ ಬ್ರ್ಯಾಂಡ್ಗೆ ಈ ಬದಲಾವಣೆ ಹೊಸ ರೂಪ ನೀಡಲಿದೆ.
ಕ್ರೀಡಾಪಟು ಎಂ. ಆರ್. ಪೂವಮ್ಮ, ನಟ ಹಾಗೂ ನಿರ್ದೇಶಕ ಅರ್ಜುನ್ ದೇವ್ (ಅರ್ಜುನ್ ಕಾಪಿಕಾಡ್) ಮತ್ತು ಬಾಲಗಾಯಕ ಅಶ್ಮಿತ್ ಎಜೆ ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕ್ಯಾಂಪ್ಕೊದ ಪ್ರಮುಖರು ಹಾಗೂ ಮಕ್ಕಳೊಂದಿಗೆ ನೂತನ ಉತ್ಪನ್ನಗಳನ್ನು ಅನಾವರಣಗೊಳಿಸಲಿದ್ದಾರೆ.
ಕ್ಯಾಂಪ್ಕೊ ವ್ಯವಸ್ಥಾಪಕ ನಿರ್ದೇಶಕ ಡಾ. ಬಿ. ವಿ. ಸತ್ಯನಾರಾಯಣ ಸ್ವಾಗತಿಸಲಿದ್ದಾರೆ. ಬಳಿಕ ನೂತನ ಉತ್ಪನ್ನಗಳ ಅನಾವರಣ ಹಾಗೂ ವಿಶೇಷ ಅತಿಥಿಗಳ ಸನ್ಮಾನ ನಡೆಯಲಿದೆ. ಪೂವಮ್ಮ ಅವರೊಂದಿಗೆ ಸಂವಾದ, ಅರ್ಜುನ್ ದೇವ್ ಅವರ ಮಾತುಗಳು, ಅಶ್ಮಿತ್ ಎಜೆ ಅವರ ಸಂಗೀತ ಕಾರ್ಯಕ್ರಮ ಹಾಗೂ ‘ಕಲ್ಪ ಕಿಚನ್ ಸ್ಟಾರ್’ ಸ್ಪರ್ಧೆಯ ವಿಜೇತರಿಗೆ ಸನ್ಮಾನ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮದ ಭಾಗವಾಗಿರಲಿವೆ. ಕ್ಯಾಂಪ್ಕೊ ಅಧ್ಯಕ್ಷ ಎಸ್. ಆರ್. ಸತೀಶ್ಚಂದ್ರ ಅಧ್ಯಕ್ಷೀಯ ಭಾಷಣ ಮಾಡಲಿದ್ದಾರೆ.
ನ. 15ರಂದು ಮಾಲ್ನಲ್ಲಿ ಕ್ಯಾಂಪ್ಕೊ ಮಳಿಗೆಯೂ ಇರಲಿದ್ದು, ಚಾಕೊಲೇಟ್ಗಳ ಪ್ರದರ್ಶನ, ಮಾರಾಟ ಹಾಗೂ ಸಾರ್ವಜನಿಕರಿಗಾಗಿ ವಿವಿಧ ಚಟುವಟಿಕೆಗಳು ನಡೆಯಲಿವೆ.
1986ರಲ್ಲಿ ಪುತ್ತೂರಿನಲ್ಲಿ ಚಾಕೊಲೇಟ್ ಉತ್ಪಾದನೆ ಆರಂಭಿಸಿದ ಕ್ಯಾಂಪ್ಕೊ, ರೈತ ಸಹಕಾರದ ಬಲದೊಂದಿಗೆ ಬದಲಾಗುತ್ತಿರುವ ಗ್ರಾಹಕರ ಅಭಿರುಚಿಗೆ ಸ್ಪಂದಿಸುತ್ತಾ ಬಂದಿದೆ. ವಿಸ್ತರಿಸುತ್ತಿರುವ ಉತ್ಪನ್ನ ಶ್ರೇಣಿಯ ಮೂಲಕ ಭಾರತದಲ್ಲಿ ತಯಾರಾದ ಚಾಕೊಲೇಟ್ಗಳನ್ನು ದೇಶದ ಇನ್ನಷ್ಟು ಮನೆಗಳಿಗೆ ತಲುಪಿಸುವುದರ ಜೊತೆಗೆ, ಕೋಕೋ ಬೆಳೆಗಾರರು ಮತ್ತು ಗ್ರಾಹಕರ ನಡುವಿನ ಬಾಂಧವ್ಯವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಮಕ್ಕಳು, ಕುಟುಂಬಗಳು ಹಾಗೂ ಚಾಕೊಲೇಟ್ ಪ್ರಿಯರು ಈ ಸಂಭ್ರಮದಲ್ಲಿ ಭಾಗವಹಿಸುವಂತೆ ಕ್ಯಾಂಪ್ಕೊ ಆಹ್ವಾನಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.












