ಮಂಗಳೂರು : ಡಾ. ಎಂ. ಮೋಹನ ಆಳ್ವ ಅಭಿನಂದನಾ ಸಮಿತಿ – 2027 ಅವರ ಆಶ್ರಯದಲ್ಲಿ ಡಾ. ಎಂ. ಮೋಹನ ಆಳ್ವರ 75ನೇ ಹುಟ್ಟು ಹಬ್ಬದ ಅಮೃತ ಮಹೋತ್ಸವ ಕಾರ್ಯಕ್ರಮದ ಸಮಾಲೋಚನಾ ಪೂರ್ವಭಾವಿ ಸಭೆಯು ನ. 14 ಶನಿವಾರ ಸಂಜೆ 3 ಗಂಟೆಗೆ ಮಂಗಳೂರಿನ ವಾಮಂಜೂರು ಬಳಿಯ ಪಿಲಿಕುಳದ ಸ್ಕೌಟ್ಸ್ & ಗೈಡ್ಸ್ ಸಭಾಭವನದಲ್ಲಿ ನಡೆಯಿತು.
ಸಭೆಯಲ್ಲಿ ಹಲವು ಮಹತ್ವ ತೀರ್ಮಾನಗಳನ್ನು ಕೈಗೊಳ್ಳಲಾಯಿತು. ಡಾ. ಎಂ. ಮೋಹನ ಆಳ್ವರ 75ನೇ ಹುಟ್ಟು ಹಬ್ಬದ ಅಮೃತ ಮಹೋತ್ಸವವು 2027ರ ಫೆಬ್ರವರಿ 13ರಂದು ಮೂಡುಬಿದಿರೆಯಲ್ಲಿ ನಡೆಸಲಾಗುವುದು ಎಂದು ತೀರ್ಮಾನಿಸಲಾಗಿದೆ.
ಈ ಸಂದರ್ಭದಲ್ಲಿ ನೂತನ ಸಮಿತಿಯನ್ನು ರಚಿಸಲಾಗಿದ್ದು, ಗೌರವಾಧ್ಯಕ್ಷರಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರನ್ನು ಆಯ್ಕೆ ಮಾಡಲಾಗಿದೆ. ಅಧ್ಯಕ್ಷರಾಗಿ ಉದ್ಯಮಿ ಡಾ. ಪ್ರಕಾಶ್ ಶೆಟ್ಟಿ ಆಯ್ಕೆಯಾಗಿದ್ದು, ಕಾರ್ಯದರ್ಶಿಯಾಗಿ ಶಶಿಧರ ಶೆಟ್ಟಿ ಬರೋಡ ಹಾಗೂ ಬಿ.ಸಿ. ರೋಡಿನ ಹೊಟೇಲ್ ರಂಗೋಲಿಯ ಮಾಲಕ ಚಂದ್ರಹಾಸ ಶೆಟ್ಟಿ, ಕೋಶಾಧಿಕಾರಿಯಾಗಿ ನಮ್ಮ ಕುಡ್ಲ ವಾಹಿನಿಯ ನಿರ್ದೇಶಕ ಲೀಲಾಕ್ಷ ಕರ್ಕೇರ ಅವರು ಆಯ್ಕೆಯಾಗಿದ್ದಾರೆ.
ಇನ್ನು ಸಭೆಯು ಹಲವಾರು ತೀರ್ಮಾನಗಳನ್ನು ಕೈಗೊಂಡಿದ್ದು, ಕಾರ್ಯಕ್ರಮಕ್ಕೆ ಯಾವುದೇ ರೀತಿಯ ಬ್ಯಾನರ್, ಫ್ಲೆಕ್ಸ್ ಹಾಕುವಂತಿಲ್ಲ ಜೊತೆಗೆ ಕಾರ್ಯಕ್ರಮದಲ್ಲಿ ಬೊಕ್ಕೆ, ಶಾಲು ಹಾಕಲು ಅನುಮತಿ ಇಲ್ಲವೆಂದು ತಿಳಿಸಿದೆ.
ಶಶಿಧರ ಶೆಟ್ಟಿ ಬರೋಡಾ ಮಾತನಾಡಿ, ಡಾ. ಮೋಹನ್ ಆಳ್ವರು ವಿವಿಧ ಸಮಾಜಮುಖಿ ಕೆಲಸಗಳ ಮೂಲಕ ಸಾರ್ವಜನಿಕರ ಅಪಾರ ಪ್ರೀತಿ ಗಳಿಸಿ ಈ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಆಸ್ಪತ್ರೆಯ ನಿರ್ಮಾಣದೊಂದಿಗೆ ಹಲವಾರು ಕುಟುಂಬಗಳಿಗೆ ಬೆನ್ನೆಲುಬಾಗಿದ್ದಾರೆ. ಕ್ಯಾನ್ಸರ್‌ಗೆ ಚಿಕಿತ್ಸೆಗೆ ಬೇಕಾದ ಬೃಹತ್ ವ್ಯವಸ್ಥಯೊಂದನ್ನು ಹಮ್ಮಿಕೊಳ್ಳಲಿದ್ದೇವೆ. ಈ ನಿಟ್ಟಿನಲ್ಲಿ ಸಮಿತಿಯು ಹಲವಾರು ವಿನೂತನ ಯೋಜನೆಗಳನ್ನು ಕೈಗೊಂಡಿದ್ದು, 15 ಕೋಟಿ ರೂ.ಗಳ ಕೊಡುಗೆ ನೀಡುವ ಬೃಹತ್ ಯೋಜನೆಯೊಂದನ್ನು ಹಮ್ಮಿಕೊಂಡಿದ್ದೇವೆ. ಜೊತೆಗೆ ಮೋಹನ ಆಳ್ವರ ವಿದ್ಯಾರ್ಥಿಗಳಿಂದ ಗುರು ದಕ್ಷಿಣೆ ನೀಡುವ ಯೋಜನೆಯನ್ನೂ ಕೂಡ ಹಮ್ಮಿಕೊಂಡಿದ್ದೇವೆ. ಈ ಗುರುದಕ್ಷಿಣೆಯನ್ನು ಕ್ಯಾನ್ಸರ್ ಆಸ್ಪತ್ರೆ ಹಾಗೂ 10 ಸಾವಿರ ಜನರಿಗೆ ಉಚಿತ ಡಯಾಲಿಸಿಸ್ ನೀಡುವ ಯೋಜನೆಗೆ ಬಳಸಿಕೊಳ್ಳುವ ಜೊತೆಗೆ ವೃದ್ಧರಿಗೆ ಕೊನೆಯ ದಿನಗಳನ್ನು ಸಂತೋಷವಾಗಿ ಕಳೆಯುವ ಹ್ಯಾಪಿ ಡೆತ್ ಎಂಬ ವಿನೂತನ ಯೋಜನೆಯನ್ನೂ ಹಮ್ಮಿಕೊಡಿದ್ದೇವೆ. ಇನ್ನು ಒಟ್ಟು 75 ಸಮಿತಿಗಳು ರಚನೆಯಾಗಲಿದ್ದು, ಸಮಾಜಮುಖಿ ಕೆಲಸಗಳಿಗೆ ಒತ್ತು ನೀಡಿ ಮೋಹನ ಆಳ್ವರ ಸಾಮಾಜಿಕ ಕಾರ್ಯಕ್ಕೆ ಸಹಕರಿಸಲಿದ್ದೇವೆ. ಒಟ್ಟಿನಲ್ಲಿ ಮೋಹನ ಆಳ್ವರ ಹೆಸರಿನಲ್ಲಿ ಸಮಾಜಮುಖಿ ಕಾರ್ಯಗಳು ಸದಾ ನಡೆಯುತ್ತಿರಬೇಕು ಎಂದರು.
ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಮಾತನಾಡಿ ಸದಾ ಸಮಾಜದೊಂದಿಗೆ ಬದುಕುವ ಮೋಹನ ಆಳ್ವರ ಕನಸುಗಳು ಬಹಳ ದೊಡ್ಡದು. ಆ ಕನಸುಗಳಿಗೆ ಜೀವ ತುಂಬಲು ನಾವೆಲ್ಲರೂ ಕೆಲಸ ಮಾಡೋಣವೆಂದು ಹೇಳಿದರು. ಈ ಸಂದರ್ಭದಲ್ಲಿ ಒಂದು ಲಕ್ಷ ರೂ.ಗಳನ್ನು ಶ್ರೀ ರಾಮನ ಪ್ರಸಾದವಾಗಿ ಘೋಷಿಸಿದರು.
ಇನ್ನು ಅಧ್ಯಕ್ಷತೆ ವಹಿಸಿ ಮಾತನಾಡಿದ ಉದ್ಯಮಿ ಡಾ. ಪ್ರಕಾಶ್ ಶೆಟ್ಟಿ, ನಮ್ಮ ನಾಡಿನ ಹೆಮ್ಮೆಯ ಸಾಧಕನಿಗೆ ಅಮೃತ ಮಹೋತ್ಸವ ನಡೆಸುತ್ತಿರುವುದು ಹೆಮ್ಮೆಯ ಸಂಗತಿ. ಇದೊಂದು ಅದ್ವಿತೀಯ ಮೈಲುಗಲ್ಲು ಎಂದರೆ ತಪ್ಪಾಗಲಾರದು. ಆಳ್ವರ ಸಾಧನೆಗಳಿಗೆ ಎಲ್ಲಿಂದ ಆರಂಭ ಎಲ್ಲಿಗೆ ಅಂತ್ಯ ಎಂಬುದು ಗೊತ್ತಾಗಲಾರದು. ಅಂತಹ ಮಹಾನ್ ಸಾಧಕ ಇಡೀ ಕರಾವಳಿಗೆ ಹಮ್ಮೆ ತಂದು ಕೊಟ್ಟವರು. ಮೋಹನ ಆಳ್ವರ ಅಭಿನಂದನಾ ಸಮಾರಂಭಕ್ಕೆ ಅಧ್ಯಕ್ಷನಾಗಿರುವುದು ನನ್ನ ಸೌಭಾಗ್ಯ. ಪ್ರಕಾಶಭಿನಂದನೆ ಕಾರ್ಯಕ್ರಮದಲ್ಲಿ 50 ಸಾವಿರ ಜನರನ್ನು ಸೇರಿಸಿದ ಕೀರ್ತಿ ಆಳ್ವರಿಗೆ ಸಲ್ಲುತ್ತದೆ ಎಂದು ಭಾವುಕರಾದರು.
ನಮ್ಮ ಬದುಕಿನಲ್ಲಿ ಎಷ್ಟು ಸಂಪಾದಿಸಿದ್ದೇವೆ ಎಂಬುದು ಮುಖ್ಯವಲ್ಲ. ನಮ್ಮ ಬದುಕಿನ ಹಾದಿಯನ್ನು ಹಿಂತಿರುಗಿ ನೋಡಿದಾಗ ನಮ್ಮಲ್ಲಿ ಸಮಾಜಮುಖಿ ಕಾರ್ಯಗಳಿಗೆ ಮನಸ್ಸು ತುಡಿಯುತ್ತದೆ. ಇದಕ್ಕೆ ಸಾಕ್ಷಿ ಮೋಹನ ಆಳ್ವರು. ಅದೆಷ್ಟೇ ಆಸ್ತಿ ಸಂಪಾದಿಸಿದರೂ ಎಲ್ಲರ ಮಧ್ಯದಲ್ಲಿ ಸಾಮಾನ್ಯನಾಗಿ ಜೀವಿಸಿದವರು ಆಳ್ವರು ಎಂದು ಹೇಳಿದರು.
ಇನ್ನು ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ವಿದ್ಯಾರ್ಥಿ ದೆಸೆಯಿಂದಲೇ ಪರಿಚಯವಿದ್ದ ವ್ಯಕ್ತಿತ್ವ ಮೋಹನ ಆಳ್ವ ಅವರದ್ದು. ಅವರು ಸದಾ ಸಮಾಜದ ಜೊತೆಗೇ ನಿಂತವರು. ಮೂಡುಬಿದಿರೆಯನ್ನು ಕೇಂದ್ರವನ್ನಾಗಿಟ್ಟುಕೊಂಡು ರಾಜ್ಯಕ್ಕೇ ಮಾದರಿಯನ್ನಾಗಿ ಮಾಡಿದ ವ್ಯಕ್ತಿತ್ವ ಆಳ್ವರದ್ದು. ಅವರು ಸದಾ ಕ್ರಿಯಾಶೀಲ ವ್ಯಕ್ತಿ. ಎಂದಿಗೂ ಸುಮ್ಮನೇ ಕೂರುವವರಲ್ಲ. ಅವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಮಾಡುವುದು ಬಹಳ ಅರ್ಥಪೂರ್ಣ ನಿರ್ಣಯ ಎಂದು ಅಭಿಪ್ರಾಯಪಟ್ಟರು.












