ಪುತ್ತೂರು: ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ, ಜಾನಪದ ವಿದ್ವಾಂಸ ಡಾ. ಪುರುಷೋತ್ತಮ ಬಿಳಿಮಲೆ ಅವರು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕಚೇರಿಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಡಾ. ಬಿಳಿಮಲೆ ಅವರನ್ನು ಗೌರವಪೂರ್ವಕವಾಗಿ ಸ್ವಾಗತಿಸಿ, ಕನ್ನಡದ ಸಾಂಪ್ರದಾಯಿಕ ಪೇಟ ತೊಡಿಸಿ, ಕನ್ನಡ ಶಾಲು ಹೊದಿಸಿ ಗೌರವಿಸಿದರು. ನಂತರ ನಡೆದ ಸೌಹಾರ್ದಯುತ ಸಂವಾದದಲ್ಲಿ, ತಾಲ್ಲೂಕಿನಲ್ಲಿ ಕನ್ನಡ ಸಾಹಿತ್ಯ, ಭಾಷೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಮತ್ತಷ್ಟು ಸಕ್ರಿಯಗೊಳಿಸುವ ಕುರಿತು ಮತ್ತು ಗಡಿನಾಡು ಹಾಗೂ ಗ್ರಾಮೀಣ ಭಾಗಗಳಲ್ಲಿ ಸಾಹಿತ್ಯ ಪ್ರಸಾರ ಮಾಡುವ ಯೋಜನೆಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಯಿತು.
ಡಾ. ಪುರುಷೋತ್ತಮ ಬಿಳಿಮಲೆ ಅವರು ಗಡಿನಾಡು ಮತ್ತು ಹೊರನಾಡು ಕನ್ನಡಿಗರಿಗೆ ಶಿಕ್ಷಣದಲ್ಲಿ ಶೇ.5 ರಷ್ಟು ಮೀಸಲಾತಿ ಅನುಷ್ಠಾನಗೊಳಿಸಲು ಹಾಗೂ ಗಡಿಭಾಗದ ಕನ್ನಡ ಶಾಲೆಗಳಿಗೆ ಬೆಂಬಲ ನೀಡಲು ಶ್ರಮಿಸಿದ್ದಾರೆ. ನೂರು ವರ್ಷ ಪೂರೈಸಿದ ಸರ್ಕಾರಿ ಕನ್ನಡ ಶಾಲೆಗಳ ಪುನಶ್ಚೇತನ, ಖಾಲಿ ಇರುವ ಶಿಕ್ಷಕರ ಹುದ್ದೆಗಳ ಭರ್ತಿ ಹಾಗೂ ಖಾಸಗಿ-ಸಾರ್ವಜನಿಕ ವಲಯದ ಉದ್ಯೋಗಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ಆದ್ಯತೆ ಸಿಗುವಂತೆ ನಿರಂತರವಾಗಿ ಪ್ರತಿಪಾದಿಸುತ್ತಿದ್ದಾರೆ. ರಾಜ್ಯದ ಸುಮಾರು ೬೫,೦೦೦ ಹಳ್ಳಿಗಳ ಮೂಲ ಕನ್ನಡ ಸ್ಥಳನಾಮಗಳನ್ನು ಗುರುತಿಸಿ ದಾಖಲಿಸುವ ಬೃಹತ್ ಯೋಜನೆ, ಮದರಸಾಗಳಲ್ಲಿ ಕನ್ನಡ ಕಲಿಸುವ ಕಾರ್ಯಕ್ರಮ ಮತ್ತು ಆಡಳಿತ ಹಾಗೂ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಂಪೂರ್ಣ ಕನ್ನಡ ಬಳಕೆಯಾಗುವಂತೆ ಅವರು ಕೈಗೊಂಡಿರುವ ಕ್ರಮಗಳ ಕುರಿತು ಈ ವೇಳೆ ಸ್ಮರಿಸಲಾಯಿತು.













