ನಾಟಕಕಾರ ಅಡ್ಡಂದ ಕಾರ್ಯಪ್ಪಗೆ ಮಸಿ ಬಳಿದು ಆಕ್ರೋಶ! ಮಹಾತ್ಮ ಗಾಂಧಿ ವಿರುದ್ಧ ಅವಹೇಳನಕಾರಿ ಸಂಭಾಷಣೆ!!

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಬಗ್ಗೆ ಅವಹೇಳನಕಾರಿ ಸಂಭಾಷಣೆ ಬರೆದು ದ್ವೇಷ ಬಿತ್ತಿದ್ದನ್ನು ಖಂಡಿಸಿ ನಾಟಕಕಾರ ಅಡ್ಡಂಡ ಕಾರ್ಯಪ್ಪಗೆ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಬನಶಂಕರಿಯ ಸುಚಿತ್ರಾ ಫಿಲ್ಮ್ ಸೊಸೈಟಿಯಲ್ಲಿ ಅಡ್ಡಂಡ ಕಾರ್ಯಪ್ಪ ಬರೆದ ‘ಗಾಂಧಿ ಹತ್ಯೆಯ ಸತ್ಯ’ ನಾಟಕ ಪ್ರದರ್ಶನದ ವೇಳೆ ಗದ್ದಲ ಉಂಟಾಗಿದ್ದು, ಈ ನಾಟಕದಲ್ಲಿ ಮಹಾತ್ಮ ಗಾಂಧೀಜಿ ವಿರುದ್ಧ ಆಕ್ಷೇಪಾರ್ಹ ಸಂಭಾಷಣೆ ಬಳಸಲಾಗಿದೆ ಎಂದು ಆಕ್ರೋಶಗೊಂಡ ಸಂಘಟನೆಗಳ ಮುಖಂಡರು ಅಡ್ಡಂಡ ಕಾರ್ಯಪ್ಪಗೆ ಮಸಿ ಬಳಿದು ನಾಟಕಕ್ಕೆ ಪ್ರದರ್ಶನಕ್ಕೆ ಅಡ್ಡಿಪಡಿಸಿದ್ದಾರೆ.

Advertisement

ಬನಶಂಕರಿ ಎರಡನೇ ಹಂತದಲ್ಲಿರುವ ಸುಚಿತ್ರಾ ಅಕಾಡೆಮಿಯಲ್ಲಿ ‘ಕೊಡಗು ರಂಗಭೂಮಿ ಟ್ರಸ್ಟ್‌’ನಿಂದ ‘ಗಾಂಧಿ ಹತ್ಯೆಯ ಸತ್ಯ’ ಎಂಬ ನಾಟಕ ಪ್ರದರ್ಶನ ಆಯೋಜಿಸಲಾಗಿತ್ತು. ಈ ನಾಟಕವನ್ನು ಸ್ವತಃ ಅಡ್ಡಂಡ ಕಾರ್ಯಪ್ಪ ನಿರ್ದೇಶನ ಮಾಡಿದ್ದಾರೆ.

Advertisement
Advertisement

ಸ್ವಾತಂತ್ರ್ಯ ಹೋರಾಟಗಾರ ಮಹಾತ್ಮ ಗಾಂಧಿಯವರನ್ನು ದೇಶ ವಿರೋಧಿ ಹಾಗೂ ಮುಸ್ಲಿಮರ ಪರ ಎಂದು ಬಿಂಬಿಸಿ ಸುಳ್ಳು ಪ್ರಚಾರ ಮಾಡಿದ್ದಾರೆ. ನಾಟಕದ ಮೂಲಕ ಅಡ್ಡಂಡ ಕಾರ್ಯಪ್ಪ ದ್ವೇಷ ಸಂದೇಶ ರವಾನೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಮಹಾತ್ಮ ಗಾಂಧಿಜೀಯವರು ದೇಶ ವಿಭಜಿಸಿದರು ಎಂದು ನಾಟಕದ ಮೂಲಕ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆಪಾದಿಸಿ ಬನಶಂಕರಿ ಠಾಣೆಗೆ ಸಂಘಟನೆಗಳ ಮುಖಂಡರು ದೂರು ನೀಡಿದ್ದಾರೆ.
ಘಟನೆ ಸಂಬಂಧ ಬನಶಂಕರಿ ಪೊಲೀಸ್ ಠಾಣೆಗೆ ಎರಡೂ ಕಡೆಯಿಂದ ದೂರು ಪ್ರತಿದೂರು ದಾಖಲಾಗಿದ್ದು, ಅಡ್ಡಂಡ ಕಾರ್ಯಪ್ಪ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಕಮಿಷನರ್ ಕಚೇರಿ ಮುಂದೆ ಕಾಂಗ್ರೆಸ್ ಮುಖಂಡರು ಹೋಗಿದ್ದಾಗ ಗೇಟ್‌ನಲ್ಲೇ ತಡೆದು, ಮನವೊಲಿಸಿ ಪೊಲೀಸರು ವಾಪಸ್ ಕಳುಹಿಸಿದ್ದಾರೆ. ಘಟನೆ ಬಳಿಕ ಸುಚಿತ್ರಾ ಅಕಾಡೆಮಿ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿದೆ.
ಘಟನೆ ಬಳಿಕ ಪ್ರತಿಕ್ರಿಯೆ ನೀಡಿರುವ ವಿವಾದಾತ್ಮಕ ನಾಟಕಕಾರ ಅಡ್ಡಂಡ ಕಾರ್ಯಪ್ಪ, ‘ನೂರು ಜನಕ್ಕೆ ಸೀಮಿತ ಆಡಿಟೋರಿಯಂನಲ್ಲಿ ನಾಟಕ ನಡೆಯುತ್ತಿತ್ತು. ಏಕಾಏಕಿ ಒಳಗೆ ನುಗ್ಗಿದವರು ಹಲ್ಲೆ ಮಾಡಿ ಮೈಮೇಲೆ ದ್ರಾವಣ ಹಾಕಿದ್ದಾರೆ. ಪ್ರಶ್ನೆ ಮಾಡಿದ ಕೆಲ ಮಹಿಳೆಯರ ಮೇಲೂ ಅವರು ಹಲ್ಲೆ ಮಾಡಿದ್ದಾರೆ. ಗಾಂಧಿ ಹತ್ಯೆಯ ಸತ್ಯ ಎಂಬ ನಾಟಕ ಪ್ರದರ್ಶನ ನಡೆಯುತ್ತಿತ್ತು. 10 ನೇ ಪ್ರದರ್ಶನ ಆಗಿದ್ದು ಸೀಮಿತ ಜನಕ್ಕೆ ಮಾತ್ರ ಪ್ರದರ್ಶನ ನಿಗದಿಸಲಾಗಿತ್ತು ಎಂದು ಹೇಳಿದ್ದಾರೆ.

ಮುಂದುವರಿದು ಮಾತನಾಡಿರುವ ಅಡ್ಡಂಡ ಕಾರ್ಯಪ್ಪ, ‘ಕರ್ನಾಟಕ ಸರ್ಕಾರ ಅಂತ ಬರೆದ ವಾಹನಗಳಲ್ಲಿ ಬಂದು ಕೃತ್ಯ ಎಸಗಿದ್ದಾರೆ. ಸಾಮಗ್ರಿಗಳನ್ನೆಲ್ಲಾ ಒಡೆದು, ಟಿಕೆಟ್, ಪಟ್ಟಿಗಳನ್ನ ಹಾಳು ಮಾಡಿದ್ದಾರೆ. ನಮ್ಮ ಪಕ್ಷದ ಬಗ್ಗೆ ಮಾತಾಡ್ತೀರಿ, ಗಾಂಧಿ ಬಗ್ಗೆ ಮಾತಾಡ್ತೀರಿ ಅಂತಾರೆ. ನಾನು 50 ಕ್ಕೂ ಅಧಿಕ ಬ್ಯಾನ್ ಆಗದೇ ಇರೋ ಪುಸ್ತಕ ಓದಿ ನಾಟಕ ಬರೆದಿದ್ದೇನೆ. ಗಾಂಧಿ ಹತ್ಯೆ ಬಳಿಕ ಗೋಡ್ಸೆ ಹೇಳಿದ ಮಾತನ್ನ ವಿಚಾರಕ್ಕೆ ಒಳಪಡಿಸಿದ್ದೀನಿ. ನನ್ನ ನಾಟಕದಲ್ಲಿ ತಪ್ಪಿದ್ದರೆ ಕೇಸ್ ಹಾಕಲಿ,ನ್ಯಾಯಾಲಯಕ್ಕೆ ಹೋಗಲಿ. ಕಾನೂನಾತ್ಮಕವಾಗಿ ಏನು ಬೇಕಾದ್ರು ಮಾಡಲಿ, ನಾನು ಎದುರಿಸ್ತೇನೆ. ಬ್ಲಾಕ್ ಟಿಕೆಟ್ ಅನ್ನೋಕೆ, ನನ್ನ ನಾಟಕಕ್ಕೆ ನಾನು ಹೇಗೆ ಬ್ಲಾಕ್ ಟಿಕೆಟ್ ಕೊಡಲಿ. ನಾಳೆಯ (ನವೆಂಬರ್ 1) ಪ್ರದರ್ಶನಗಳಿಗೆ ಪೊಲೀಸರ ರಕ್ಷಣೆ ಕೋರಿ ಲೆಟರ್ ಕೊಟ್ಟಿದ್ದೇನೆ. ನಡೆದ ಘಟನೆ ಬಗ್ಗೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ಕೊಟ್ಟಿದ್ದೇನೆ’ ಎಂದು ಹೇಳಿದರು.

ಇನ್ನು ಈ ಸಂಬಂಧ ಮಾಹಿತಿ ನೀಡಿರುವ ಕಾಂಗ್ರೆಸ್ ಮುಖಂಡ ಮನೋಹರ್, ‘ಗಾಂಧೀಜಿ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ನಾವೆಲ್ಲ ಟಿಕೆಟ್ ಪಡೆದು ಸುಚಿತ್ರಗೆ ಹೋಗಿದ್ವಿ. ಗಾಂಧೀಜಿಗೆ ದಿಕ್ಕಾರ ಕೂಗುತ್ತಿದ್ದಾರೆ. ಗೋಡ್ಸೆಯನ್ನ ದೇಶ ಭಕ್ತ ಅಂತ ಬಿಂಬಿಸಲು ಹೊರಟಿದ್ದಾರೆ. ಇವರ ಮೇಲೆ ಎಫ್ಐಆರ್ ದಾಖಲು ಮಾಡಬೇಕು. ನಮ್ಮವರೇ ಮಸಿ ಬಳಿದಿದ್ದಾರೆ’ ಎಂದು ಹೇಳಿದ್ದಾಗಿ ಜಾಲತಾಣ ಮೂಲಗಳು ತಿಳಿಸಿವೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page