ಬೆಂಗಳೂರು: ತುಳು ಭಾಷೆಗೆ ಕರ್ನಾಟಕ ರಾಜ್ಯದ 2ನೇ ಹೆಚ್ಚುವರಿ ಭಾಷೆಯ ಸ್ಥಾನಮಾನ ನೀಡುವ ವಿಚಾರದಲ್ಲಿ ರಾಜ್ಯ ಸರಕಾರ ಅತ್ಯಂತ ಗಂಭೀರವಾಗಿ ಚಿಂತನೆ ನಡೆಸುತ್ತಿದ್ದು, ಕಾನೂನಾತ್ಮಕ ಹಾಗೂ ಸಂವಿಧಾನಾತ್ಮಕ ಚೌಕಟ್ಟಿನೊಳಗೆ ಕ್ರಮ ಕೈಗೊಳ್ಳಲು ಪೂರಕ ಪ್ರಯತ್ನ ನಡೆಸುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ತಂಗಡಗಿ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ತುಳು ಭಾಷೆ ಇತಿಹಾಸ, ಸಾಹಿತ್ಯ ಪರಂಪರೆ, ಲಿಪಿ, ಪ್ರಾಚೀನ ಮತ್ತು ಆಧುನಿಕ ಸಾಹಿತ್ಯ, ಸಂಸ್ಕ್ರತಿ ಹಾಗೂ ತುಳು ಶಾಸನಗಳ ಕುರಿತು ಸಮಗ್ರ ಅಧ್ಯಯನ ನಡೆಸಲು ಡಾ. ಮೋಹನ್ ಆಳ್ವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ತಜ್ಞರ ಸಮಿತಿ 2023ರ ಫೆ. 14ರಂದು ಸರಕಾರಕ್ಕೆ ವರದಿ ಸಲ್ಲಿಸಿದೆ.ಮುಂದುವರಿದ ಹಂತವಾಗಿ, 2ನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡಿರುವ ಮಾದರಿ ಅಧ್ಯಯನಕ್ಕೆ ನಮ್ಮ ಸರಕಾರವು 2025ರಲ್ಲಿ ಅಧ್ಯಯನ ತಂಡವನ್ನು ರಚಿಸಿತ್ತು. ತಂಡವು ಜನವರಿ 19 ಮತ್ತು 20ಕ್ಕೆ ಆಂಧ್ರಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ಅಧಿಕೃತ ಭಾಷಾ ವ್ಯವಸ್ಥೆ, ಕಾನೂನು ಚೌಕಟ್ಟು ಹಾಗೂ ಅನುಷ್ಠಾನದ ಮಾದರಿ ಪರಿಶೀಲಿಸಿ, ಮಾರ್ಚ್ 2026ರಲ್ಲಿ ಸರಕಾರಕ್ಕೆ ವರದಿ ಸಲ್ಲಿಸಿದೆ. ತುಳು ನಮ್ಮ ಕರಾವಳಿಯ ಭಾಷೆ ಮಾತ್ರವಲ್ಲ. ಅದು ಕರ್ನಾಟಕದ ಶೃೀಮಂತ ಭಾಷಾ-ಸಾಂಸ್ಕ್ರತಿಕ ಪರಂಪರೆಯ ಅವಿಭಾಜ್ಯ ಅಂಗ ಎಂದಿದ್ದಾರೆ.













