ಪುತ್ತೂರು : ಇಲ್ಲಿನ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಕಚೇರಿಗೆ ಕಡತ ಪರಿಶೀಲನೆಗೆಂದು ಭೇಟಿ ನೀಡಿದ್ದ ದ.ಕ ಜಿಲ್ಲಾ ಲೋಕಾಯುಕ್ತ ತಂಡದ ಕುರಿತು ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲದ ಯುವ ಮೋರ್ಚಾ ಅಧ್ಯಕ್ಷ ಶಿಶಿರ್ ಪೆರ್ವೋಡಿ ನೀಡಿರುವ ಪತ್ರಿಕಾ ಪ್ರಕಟಣೆ ಇಲ್ಲಿದೆ.
ದಿನಾಂಕ 09/09/2026 ರಂದು ಉಪ್ಪಿನಂಗಡಿ ಗ್ರಾಮ ಪಂಚಾಯತ್ ಕಚೇರಿಗೆ ಕಡತ ಪರಿಶೀಲನೆಗೆಂದು ಭೇಟಿ ನೀಡಿದ್ದ ದ.ಕ ಜಿಲ್ಲಾ ಲೋಕಾಯುಕ್ತ ತಂಡಕ್ಕೆ ದಿಗ್ಭ್ರಮೆ ಮೂಡುವ ರೀತಿಯಲ್ಲಿ ಸಾರ್ವಜನಿಕರು ಪಂಚಾಯತ್ ಪಿಡಿಒ ವಿರುದ್ದ ಸಲ್ಲಿಸಿದ ದೂರುಗಳು ನಾಗರಿಕ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ. ಒರ್ವ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸಬೇಕಾದ ಕರ್ತವ್ಯಬದ್ಧತೆಯ ಬದಲಾಗಿ ಗ್ರಾಹಕರನ್ನು ಲಂಚಕ್ಕಾಗಿ ಸತಾಯಿಸುವ ಸಮಸ್ಯೆಗೆ ತುತ್ತಾಗಿಸುವ ರೀತಿಯಲ್ಲಿ ವರ್ತಿಸಿ ಆಡಳಿತಾತ್ಮಕ ಭಯೋತ್ಪಾದನೆಯನ್ನು ಬಿತ್ತುತ್ತಿರುವ ಕೃತ್ಯ ಕಳವಳಕಾರಿಯಾಗಿದೆ. ಲಂಚ ಸ್ವೀಕಾರದ ನಡೆಯನ್ನು ತನಿಖಾ ಸಂಸ್ಥೆಗಳಿಂದ ಮರೆ ಮಾಚುವ ನಿಟ್ಟಿನಲ್ಲಿ ದಲ್ಲಾಳಿಗಳ ಮೂಲಕ ಲಕ್ಷಾಂತರ ರೂಪಾಯಿ ಹಣಕ್ಕೆ ಬೇಡಿಕೆ ಇಡುವುದು ದಲ್ಲಾಳಿಗಳೂ ಕೂಡಾ ಅಧಿಕಾರಿಗಳ ಹೆಸರೇಳಿಕೊಂಡು ಲಕ್ಷಾಂತರ ರೂಪಾಯಿ ಹಣವನ್ನು ಕಬಳಿಸುವುದು, ತಮ್ಮ ಸ್ವಂತ ಭೂಮಿಯಲ್ಲಿ ಮನೆ ನಿರ್ಮಿಸಿದ ಬಡಪಾಯಿ ವ್ಯಕ್ತಿ ಮನೆಯ ಬಾಗಿಲು ಸಂಖ್ಯೆಗಾಗಿ ಲಕ್ಷ ರೂಪಾಯಿ ಹಣವನ್ನು ಲಂಚವಾಗಿ ಪಾವತಿಸಬೇಕಾಗಿರುವುದು ಪಂಚಾಯತ್ ರಾಜ್ ವ್ಯವಸ್ಥೆಯನ್ನೇ ಅಣಕಿಸುವಂತೆ ಮಾಡಿದೆ. ಮಾತ್ರವಲ್ಲದೆ ಗ್ರಾಮಸ್ಥರು ನೀಡುವ ಯಾವುದೇ ಅರ್ಜಿ ಯಾ ಮನವಿಯನ್ನು ಸ್ವೀಕರಿಸಿ, ಸ್ವೀಕೃತಿ ಪತ್ರವನ್ನು ನೀಡಬೇಕಾದ ಪಂಚಾಯತ್ ಕಚೇರಿಯಲ್ಲಿ ಅರ್ಜಿ ಯಾ ಮನವಿಯನ್ನೇ ಸ್ವೀಕರಿಸಬಿಜೆಪಿದಿರುವುದು ಅರ್ಜಿ ಯಾ ಮನವಿ ಸ್ವೀಕಾರಕ್ಕೂ ಪಂಚಾಯತ್ ಪಿಡಿಒ ರವರ ಒಪ್ಪಿಗೆ ದೊರೆತರಷ್ಟೇ ಸ್ವೀಕರಿಸಬೇಕಾಗಿದೆ ಎಂದು ಸ್ವತಃ ಪಂಚಾಯತ್ ಸಿಬ್ಬಂದಿಗಳೇ ಲೋಕಾಯುಕ್ತ ಅಧಿಕಾರಿಗಳ ಮುಂದೆ ಒಪ್ಪಿಕೊಂಡಿರುವುದು ಪಂಚಾಯತ್ ಕಚೇರಿ ಎಂಬುವುದು ಪಿಡಿಒ ಎಂಬ ಅಧಿಕಾರಿಯ ಸ್ವಂತ ಆಸ್ತಿಯೋ ಎನ್ನುವ ಪ್ರಶ್ನೆಯನ್ನು ಹುಟ್ಟು ಹಾಕಿದೆ. ಮಾತ್ರವಲ್ಲದೆ ಈಗಾಗಲೇ 7 ವರ್ಷಕ್ಕೂ ಹೆಚ್ಚು ಕಾಲ ಉಪ್ಪಿನಂಗಡಿ ಗ್ರಾಮ ಪಂಚಾಯತ್ ನಲ್ಲಿಯೇ ಇರುವ ಈ ಪಿಡಿಒ ಸರಕಾರಿ ನಿಯಮಾವಳಿಯಂತೆ ವರ್ಗಾವಣೆಗೊಂಡಿದ್ದರೂ ಪ್ರಭಾರ ನೆಲೆಯಲ್ಲಿ ಮತ್ತೆ ಉಪ್ಪಿನಂಗಡಿ ಪಂಚಾಯತ್ ಕಚೇರಿಯಲ್ಲೇ ಉಳಿಯುವಂತಾಗಲು ರಾಜ್ಯ ಸರಕಾರದ ಭ್ರಷ್ಟಾಚಾರ ಪೋಷಕ ನೀತಿಯೇ ಕಾರಣವಾಗಿದೆ. ತನ್ನ ಕ್ಷೇತ್ರದಲ್ಲಿ ಯಾರಾದರೂ ಲಂಚ ಕೇಳಿದರೆ ನನ್ನಲ್ಲಿ ತಿಳಿಸಿ ಎಂದು ಗರ್ಜಿಸುತ್ತಿದ್ದ ನಮ್ಮ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಯವರಿಗೆ ಈ ಪಿಡಿಒ ರವರ ಕೃತ್ಯ ಕಾಣಿಸಲಿಲ್ಲವೆ? ಅವರ ಪಕ್ಷದ ಕಾರ್ಯಕರ್ತರೂ ಸತತ ಮನವಿ ಸಲ್ಲಿಸಿದರೂ ಪಿಡಿಒ ರವರನ್ನು ಉಪ್ಪಿನಂಗಡಿಯಲ್ಲಿಯೇ ಉಳಿಸಿಕೊಳ್ಳಲು ಕಾರಣವಾದ ನಿಗೂಢತೆ ಏನು ? ಗ್ರಾಮಸ್ಥರಿಂದ ಸುಲಿಗೆ ಮಾಡಿದ್ದ ಲಕ್ಷಾಂತರ ರೂಪಾಯಿ ಹಣದಿಂದ ಶಾಸಕರಿಗೂ ನಿಯಮಿತ ಪಾಲು ಸಲ್ಲುತ್ತಿದೆ ಎಂಬ ಪಿಡಿಒ ರವರದೆನ್ನಲಾದ ಹೇಳಿಕೆಯಲ್ಲಿ ಸತ್ಯಾಂಶವಿದೆಯೇ ? ಸರ್ವತ್ರ ದೂರು ಕೇಳಿಸಿಕೊಂಡರೂ, ಸರಕಾರಿ ನಿಯಮಾವಳಿಯಂತೆ ವರ್ಗಾವಣೆಗೊಂಡಿದ್ದರೂ ಮತ್ತೆ ಮತ್ತೆ ಪ್ರಭಾರ ನೆಲೆಯಲ್ಲಿ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಕಚೇರಿಯಲ್ಲಿಯೇ ಅವರನ್ನು ಉಳಿಸಿಕೊಳ್ಳುವಲ್ಲಿ ಶಾಸಕರ ನಡೆ ಸಂಶಯಾಸ್ಪದವಾಗಿದೆ. ಒಂದೂ ಪೈಸೆ ಕೂಡಾ ಲಂಚ ನೀಡಬೇಡಿ ಎಂದು ಶಾಸಕರು ಕರೆ ನೀಡಿರುವುದು ” ಸಣ್ಣ ಮೊತ್ತದ ಲಂಚ ನೀಡಬೇಡಿ ಲಕ್ಷ ಲಕ್ಷವೆಂಬ ದೊಡ್ಡ ಮೊತ್ತದ ಲಂಚ ನೀಡಿ ಎಂಬ ಸಂದೇಶದಂತಿದೆ.
ದ.ಕ ಜಿಲ್ಲೆಯಲ್ಲಿಯೇ ಅತ್ಯಧಿಕ ಆದಾಯವನ್ನು ಹೊಂದಿರುವ ಗ್ರಾಮ ಪಂಚಾಯತ್ ಎಂಬ ಹೆಗ್ಗಳಿಕೆ ಪಡೆದಿರುವ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಆಡಳಿತಾಧಿಕಾರಿಗಳ ಆಡಳಿತಾವಧಿಯನ್ನು ಹೊಂದಿದ ಬಳಿಕ ಪಂಚಾಯತ್ ಆದಾಯವನ್ನು ಗ್ರಾಮದ ಅಭಿವೃದ್ದಿಗೆ ಬಳಸದೆ ಪಂಚಾಯತ್ ಕಚೇರಿಯ ನವೀಕರಣಕ್ಕೆ ಸುಖ ಸೌಲಭ್ಯಕ್ಕೆ ಮಾತ್ರ ವಿನಿಯೋಗಿಸಲಾಗುತ್ತಿದೆ. ಯಾವ ನಿರ್ಣಯದಡಿ ಪಂಚಾಯತ್ ಆದಾಯವನ್ನು ಕಚೇರಿ ಸೌಂದರ್ಯೀಕರಣಕ್ಕಾಗಿ ವಿನಿಯೋಗಿಸಲಾಗಿದೆ. ಜನತೆಯ ತೆರಿಗೆ ಹಣವನ್ನು ತನ್ನ ಸ್ವಾರ್ಥಕ್ಕಾಗಿ ವಿನಿಯೋಗಿಸಲು ಪಿಡಿಒ ರವರಿಗೆ ಕುಮ್ಮಕ್ಕು ನೀಡಿದವರಾರು ? ಶಾಸಕರೇಕೆ ಈ ಪ್ರಕರಣದಲ್ಲಿ ಮೌನವಹಿಸಿದ್ದಾರೆ. ಕ್ಷೇತ್ರದ ಜನತೆಯ ಪ್ರಶ್ನೆಗೆ ಶಾಸಕರು ಉತ್ತರಿಸದೇ ಇದ್ದಲ್ಲಿ ಭ್ರಷ್ಠಾಚಾರವನ್ನೇ ಉಸಿರಾಗಿಸಿದ ಶಾಸಕರ ಹಾಗೂ ರಾಜ್ಯ ಸರಕಾರದ ವಿರುದ್ಧ ಜನಾಂದೋಲನ ರೀತಿಯಲ್ಲಿ ಪ್ರತಿಭಟನಾ ಯೋಜನೆಯನ್ನು ಮುಂದಿನ ದಿನದಲ್ಲಿ ಕಾರ್ಯಗತಗೊಳಿಸಲಾಗುತ್ತಿದೆ ಎಂದು ಈ ಮೂಲಕ ತಿಳಿಯಪಡಿಸಿರುವುದಾಗಿದೆ ಎಂದು ಪ್ರಕಟಣೆಯ್ಲಲಿ ತಿಳಿಸಿದ್ದಾರೆ.
ಮುಂದಿನ ಬೆಳವಣಿಗೆಯ ಕುರಿತು ಇನ್ನಷ್ಟೇ ಕಾದುನೋಡಬೇಕಾಗಿದೆ.













