ಹೊಸದಿಲ್ಲಿ: ನಮ್ಮ ರಾಜ್ಯದಲ್ಲಿ ನಾವು ಹಿಂದಿಯನ್ನು ಕಲಿಸುವುದಿಲ್ಲ ಎಂದು ಹೇಳಲಾಗುವುದಿಲ್ಲ ಎಂದು ತಮಿಳುನಾಡು ಸರಕಾರಕ್ಕೆ ಸುಪ್ರೀಂಕೋರ್ಟ್ ಹೇಳಿದೆ.
ನವೋದಯ ಶಾಲೆಗಳಿಗೆ ಭೂಮಿ ನೀಡುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗರತ್ನ ಅವರನ್ನೊಳಗೊಂಡ ಪೀಠ, ಹಿಂದಿ ವಿರೋಧಕ್ಕಾಗಿ ಶಾಲೆ ನಿರ್ಮಾಣಕ್ಕೆ ಭೂಮಿ ನೀಡುವುದಿಲ್ಲ ಎಂಬುದು ಸರಿಯಲ್ಲ ಎಂದು ಹೇಳಿದೆ.
ನವೋದಯ ಶಾಲೆಗಳಿಗೆ ಪ್ರತಿ ಜಿಲ್ಲೆಯಲ್ಲೂ ಭೂಮಿ ನೀಡುವಂತೆ 2025ರಲ್ಲಿ ಸುಪ್ರೀಂ ನೀಡಿದ್ದ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಪೀಠ, ಹಿಂದಿ ಭಾಷೆಯನ್ನು ವಿರೋಧಿಸುವುದಕ್ಕಾಗಿ ಶಾಲೆಗೆ ಭೂಮಿ ನೀಡದಿರುವುದು ಸರಿಯಲ್ಲ. 3 ತಿಂಗಳೊಳಗೆ ಭೂಮಿ ನೀಡಬೇಕು ಎಂದು ಸೂಚಿಸಿ ತಮಿಳುನಾಡು ಅರ್ಜಿಯನ್ನು ವಜಾಗೊಳಿಸಿದೆ.
ಪೀಠವು ಮೂಮದುವರಿದು ನೀವು (ತಮಿಳುನಾಡು) ನಿಮ್ಮ ಹಿಂದಿ ವಿರೋಧದ ಮನಸ್ಥಿತಿಯನ್ನು ಬದಲಾಯಿಸಬೇಕು. ತಮಿಳುನಾಡಿನ ಮಣ್ಣಿನಲ್ಲಿ ಹಿಂದಿ ಕಲಿಸಲು ಸಾಧ್ಯವಿಲ್ಲ ಎಂದು ಹೇಳಲಾಗದು. ಭಾಷೆಗೆ ಸಂಬಂಧಿಸಿದಂತೆ ನಿಮ್ಮ ನಿಲುವಿನ ಬಗ್ಗೆ ಕೇಂದ್ರದ ಜತೆ ಮಾತನಾಡಿ ಬಗೆಹರಿಸಿಕೊಳ್ಳಿ. ಕೇಂದ್ರದ ಅನುದಾನಿತ ಸಂಸ್ಥೆಗಳು ರಾಜ್ಯದ ಶಿಕ್ಷಣ ವ್ಯವಸ್ಥೆಗೆ ಬೆದರಿಕೆ ಎಂಬಂತೆ ಅದನ್ನು ನೋಡಬಾರದು. ನಿಮ್ಮ ರಾಜ್ಯದಲ್ಲಿರುವ ಉತ್ತಮ ಯೋಜನೆಗಳ ಜತೆಗೇ ಹೆಚ್ಚುವರಿಯಾಗಿದ್ದು ಬಂದರೆ ಅದರಿಂದ ನಿಮ್ಮ ಗುಣಮಟ್ಟ ಕಡಿಮೆಯಾಗುವುದಿಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ಚೆನ್ನೈನಲ್ಲಿನ ಜನರು ದೆಹಲಿಯನ್ನು ದೂರವಿಡಬಾರದು. ಅದೇ ರೀತಿ ದೆಹಲಿಯ ಜನರು ಚೆನ್ನೈ ಅನ್ನು ದೂರವಿಡಬಾರದು ಎಂದು ಪೀಠ ಹೇಳಿದೆ.













