ಹೊಸದಿಲ್ಲಿ: ಬಿಜೆಪಿ ಸಂಘಟನಾತ್ಮಕ ಪುನಾರಚನೆಯ ಭಾಗವಾಗಿ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೂತನ ಪ್ರಭಾರಿ ಹಾಗೂ ಸಹ-ಪ್ರಭಾರಿಗಳನ್ನು ನೇಮಕ ಮಾಡಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್ ನವೀನ್ ಅವರು ಈ ನೇಮಕಾತಿ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ.
ಕರ್ನಾಟಕ ಬಿಜೆಪಿ ಪ್ರಭಾರಿಯಾಗಿ ಹಿರಿಯ ನಾಯಕ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹರೀಶ್ ದ್ವಿವೇದಿ ಅವರಿಗೆ ಜವಾಬ್ದಾರಿ ವಹಿಸಲಾಗಿದೆ. ಜತೆಗೆ ಇವರಿಗೆ ಬಿಹಾರ ರಾಜ್ಯದ ಉಸ್ತುವಾರಿಯನ್ನೂ ನೀಡಲಾಗಿದೆ. ಸಹ-ಪ್ರಭಾರಿಯಾಗಿ ಡಾ. ಕಸಮ್ ವೆಂಕಟೇಶ್ವರಲು ಅವರನ್ನು ನೇಮಿಸಲಾಗಿದೆ. ದಕ್ಷಿಣ ಭಾರತದ ಪ್ರಮುಖ ರಾಜ್ಯವಾದ ಕರ್ನಾಟಕಕ್ಕೆ ಬಿಜೆಪಿ ರಾಷ್ಟ್ರೀಯ ನಾಯಕತ್ವವು ಹೊಸ ಮುಖಗಳಿಗೆ ಜವಾಬ್ದಾರಿ ಹಂಚಿಕೆ ಮಾಡಿದೆ.
ಈ ಹಿಂದೆ ಉಸ್ತುವಾರಿಯಾಗಿ ರಾಧ ಮೋಹನ್ ದಾಸ್ ಅಗರ್ವಾಲ್, ಸಹ ಉಸ್ತುವಾರಿಯಾಗಿ ಸುಧಾಕರ್ ರೆಡ್ಡಿ ಇದ್ದರು. ರಾಜ್ಯದಲ್ಲಿ ಮುಂಬರುವ ರಾಜಕೀಯ ಸವಾಲುಗಳು, ಸಂಘಟನಾ ಬಲವರ್ಧನೆ ಹಾಗೂ ಕಾರ್ಯಕರ್ತರನ್ನು ಒಗ್ಗೂಡಿಸಿ ಪಕ್ಷವನ್ನು ಮುನ್ನಡೆಸುವ ದೃಷ್ಟಿಯಿಂದ ಈ ಹೊಸ ನೇಮಕಾತಿ ಮಹತ್ವ ಪಡೆದುಕೊಂಡಿದೆ.

ಮಾಜಿ ಕೇಂದ್ರ ಸಚಿವೆ ಶ್ರೀಮತಿ ಸ್ಮೃತಿ ಇರಾನಿ ಅವರಿಗೆ ಛತ್ತೀಸ್ಗಢ ಮತ್ತು ಹರಿಯಾಣ ಈ ಎರಡೂ ರಾಜ್ಯಗಳ ಪ್ರಭಾರಿ ಜವಾಬ್ದಾರಿ ನೀಡಲಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಗೆ ಡಾ. ವಿನಯ್ ಸಹಸ್ರಬುದ್ಧೆ ಪ್ರಭಾರಿಯಾಗಿ ನೇಮಕಗೊಂಡಿದ್ದು, ಮಾಜಿ ಸಂಸದ ಜಾಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್ ಸಹ-ಪ್ರಭಾರಿಯಾಗಿದ್ದಾರೆ. ಗುಜರಾತ್ಗೆ ತರುಣ್ ಚುಗ್, ಗೋವಾಕ್ಕೆ ಡಾ. ಭಾರತಿ ಪ್ರವೀಣ್ ಪವಾರ್, ಅಸ್ಸಾಂಗೆ ಮಂಗಲ್ ಪಾಂಡೆ ಹಾಗೂ ಹಿಮಾಚಲ ಪ್ರದೇಶಕ್ಕೆ ಶ್ರೀಕಾಂತ್ ಶರ್ಮಾ ಅವರನ್ನು ಉಸ್ತುವಾರಿಗಳಾಗಿ ನೇಮಿಸಲಾಗಿದೆ.













