ಸರ್ಕಾರದ ನಿರ್ಧಾರ ಟೀಕಿಸುವುದು ಅಪರಾಧವಲ್ಲ: ಹೈಕೋರ್ಟ್ ಮಹತ್ವದ ಆದೇಶ || ಹಿರಿಯ ವಕೀಲ ಎಂ. ಅರುಣ್ ಶ್ಯಾಮ್ ವಾದ ಪುರಸ್ಕರಿಸಿದ ನ್ಯಾಯಪೀಠ!!

ಬೆಂಗಳೂರು: ಕುರುಬ ಸಮುದಾಯಕ್ಕೆ ಪರಿಶಿಷ್ಟ ಪಂಗಡ (ಎಸ್‌ಟಿ) ಮೀಸಲಾತಿ ಕಲ್ಪಿಸುವುದನ್ನು ವಿರೋಧಿಸಿ ಹಾಗೂ ಮುಖ್ಯಮಂತ್ರಿಯವರ ವಿರುದ್ಧ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ಶಾಸಕ ಟಿ.ಎಸ್. ಶ್ರೀವತ್ಸ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಅನ್ನು ಹೈಕೋರ್ಟ್ ರದ್ದುಪಡಿಸಿದೆ. ತಮ್ಮ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಬಿಜೆಪಿ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಮತ್ತು ಶ್ರೀವತ್ಸ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಈ ಆದೇಶ ನೀಡಿದೆ.
ಬೆಂಗಳೂರಿನ 42ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ (ಸಿಜೆಎಂ) ನ್ಯಾಯಾಲಯದ ವ್ಯಾಪ್ತಿಯಲ್ಲಿ ಬಾಕಿ ಇದ್ದ ಪ್ರಕರಣದ ತನಿಖೆಯನ್ನು ಹೈಕೋರ್ಟ್ ರದ್ದುಗೊಳಿಸಿದೆ.

Advertisement

ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಎಂ. ಅರುಣ್ ಶ್ಯಾಮ್ ಅವರು ಪ್ರಾಸಿಕ್ಯೂಷನ್ ಹೊರಿಸಿರುವ ಆರೋಪಗಳನ್ನು ಬಲವಾಗಿ ತಳ್ಳಿಹಾಕಿ ಸುದೀರ್ಘ ವಾದ ಮಂಡಿಸಿದರು.
ಹಿಂದಿನ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 153ಎ ತದ್ರೂಪವಾಗಿರುವ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 353(2) ಅಡಿಯಲ್ಲಿ ಪ್ರಕರಣ ದಾಖಲಿಸಲು ಅಗತ್ಯವಿರುವ ಯಾವುದೇ ಪ್ರಾಥಮಿಕ ಅಂಶಗಳು ಅರ್ಜಿದಾರರ ಹೇಳಿಕೆಯಲ್ಲಿ ಕಂಡುಬಂದಿಲ್ಲ ಎಂದು ಅರುಣ್ ಶ್ಯಾಮ್ ಪ್ರತಿಪಾದಿಸಿದರು. ಸುಪ್ರೀಂ ಕೋರ್ಟ್‌ನ ಮಹತ್ವದ ತೀರ್ಪುಗಳನ್ನು ನ್ಯಾಯಪೀಠದ ಗಮನಕ್ಕೆ ತಂದ ಅವರು, ಸರ್ಕಾರದ ನೀತಿ ಅಥವಾ ನಿರ್ಧಾರಗಳನ್ನು ಟೀಕಿಸುವುದು, ಅಸಮ್ಮತಿ ಸೂಚಿಸುವುದು ಪ್ರಜಾಪ್ರಭುತ್ವದಲ್ಲಿ ಸಂವಿಧಾನಬದ್ಧ ಹಕ್ಕಾಗಿದೆ. ಕೇವಲ ಮೀಸಲಾತಿ ವಿಚಾರದಲ್ಲಿ ವಿರೋಧ ವ್ಯಕ್ತಪಡಿಸಿದ್ದನ್ನೇ ಸಮುದಾಯಗಳ ನಡುವೆ ದ್ವೇಷ ಹುಟ್ಟಿಸುವ ಅಥವಾ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಕೃತ್ಯವೆಂದು ಪರಿಗಣಿಸಲು ಸಾಧ್ಯವಿಲ್ಲ. ಅರ್ಜಿದಾರರು ಯಾವುದೇ ಸಮುದಾಯದ ವಿರುದ್ಧ ಹಿಂಸಾಚಾರಕ್ಕೆ ಪ್ರಚೋದನೆ ನೀಡಿಲ್ಲ ಹಾಗೂ ಅವರ ಹೇಳಿಕೆಗಳಲ್ಲಿ ಯಾವುದೇ ದುರುದ್ದೇಶ (Mens Rea) ಇರಲಿಲ್ಲ. ಹೀಗಾಗಿ ರಾಜಕೀಯ ಪ್ರೇರಿತವಾಗಿ ದಾಖಲಿಸಲಾಗಿರುವ ಈ ಎಫ್‌ಐಆರ್ ಕಾನೂನು ಪ್ರಕ್ರಿಯೆಯ ಸ್ಪಷ್ಟ ದುರುಪಯೋಗವಾಗಿದ್ದು, ಆರಂಭಿಕ ಹಂತದಲ್ಲೇ ಇದನ್ನು ರದ್ದುಪಡಿಸಬೇಕು ಎಂದು ಅವರು ನ್ಯಾಯಪೀಠವನ್ನು ಕೋರಿದರು.

Advertisement
Advertisement

ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕುರಿತು ಕುಲಶಾಸ್ತ್ರೀಯ ಅಧ್ಯಯನ ನಡೆಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ರಾಜ್ಯ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಈ ಹಂತದಲ್ಲಿ ಛಲವಾದಿ ನಾರಾಯಣಸ್ವಾಮಿ ಹಾಗೂ ಶಾಸಕ ಶ್ರೀವತ್ಸ ಅವರು ಮೀಸಲಾತಿ ನೀಡಿಕೆಯನ್ನು ವಿರೋಧಿಸಿ, ಮುಖ್ಯಮಂತ್ರಿಯವರನ್ನು ಟೀಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು. ಅಲ್ಲದೆ, ವಾಲ್ಮೀಕಿ ಮತ್ತು ಎಸ್‌ಟಿ ಸಮುದಾಯಗಳು ಕುರುಬರ ವಿರುದ್ಧ ದಂಗೆ ಏಳುವಂತೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ಹುಬ್ಬಳ್ಳಿಯ ಸಿದ್ದಣ್ಣ ತೇಜಿ ಎಂಬುವರು ವಿಧಾನಸೌಧ ಠಾಣೆಯಲ್ಲಿ ದೂರು ದಾಖಲಿಸಿದ್ದರು.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page