ಸರಳ ಸಂದೇಶದ ಮೂಲಕ ಭಾರತವನ್ನು ಒಂದುಗೂಡಿಸಿದವರು ಗಾಂಧೀಜಿ : ಸ್ಟೆಲ್ಲಾ ವರ್ಗೀಸ್‌ || ಪುತ್ತೂರಿನಲ್ಲಿ ಗಾಂಧಿ ಜಯಂತಿ ಆಚರಣೆ!!

ಪುತ್ತೂರು: ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಗಾಂಧಿ ಕಟ್ಟೆ ಸಮಿತಿ, ತುಳು ಕೂಟ ಹಾಗೂ ತುಳು ಅಪ್ಪೆಕೂಟ ಇದರ ಸಂಯುಕ್ತ ಆಶ್ರಯದಲ್ಲಿ ಗಾಂಧೀ ಜಯಂತಿ ಆಚರಣೆಯು ಅ.೨ರಂದು ಬಸ್ ನಿಲ್ದಾಣದ ಬಳಿಯ ಗಾಂಧಿಕಟ್ಟೆಯಲ್ಲಿ ನಡೆಯಿತು.
ಕಾರ್ಯಕ್ರಮದ ಪ್ರಾರಂಭದಲ್ಲಿ ಪುತ್ತೂರಿನ ಎಂಟು ರೋಟರಿ ಕ್ಲಬ್‌ಗಳ ನೇತೃತ್ವದಲ್ಲಿ ಸ್ವಚ್ಛ ಭಾರತ, ಸುಂದರ ಭಾರತ, ನಮ್ಮ ಕಸ ನಮ್ಮ ಜವಾಬ್ದಾರಿ ಎಂಬ ಉದ್ದೇಶದಲ್ಲಿ ಜನರಲ್ಲಿ ಸ್ವಚ್ಚತೆಯ ಜಾಗೃತಿ ಮೂಡಿಸುವ ಸ್ವಚ್ಚತಾ ಜಾಥಾ ನಡೆಯಿತು. ದರ್ಬೆ ಹಾಗೂ ಬೊಳುವಾರು ವೃತ್ತದ ಬಳಿಯಿಂದ ಏಕಕಾಲದಲ್ಲಿ ಹೊರಟ ಸ್ವಚ್ಚತಾ ಜಾಥಾವು ಗಾಂಧೀಕಟ್ಟೆಯ ಬಳಿ ಸಮಾಪನಗೊಂಡಿತು. ರೋಟರಿ ಕ್ಲಬ್‌ಗಳ ಜೊತೆಗೆ ಸುದಾನ ವಸತಿಯುತ ಶಾಲೆ ಹಾಗೂ ಫಿಲೋಮಿನಾ ಪ್ರೌಢಶಾಲಾ ವಿದ್ಯಾರ್ಥಿಗಳು ಜಾಥಾದಲ್ಲಿ ಸಹಕರಿಸಿದರು. ಗಾಂಧೀಕಟ್ಟೆಯಲ್ಲಿ ರಾಮಕೃಷ್ಣ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಗಾಂಧೀ ಭಜನೆ ನಡೆಯಿತು.
ಸಂಸ್ಮರಣಾ ದೀಪ ಪ್ರಜ್ವಲನೆ ಮಾಡಿದ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಮಾತನಾಡಿ, ಸತ್ಯ ಮತ್ತು ಅಹಿಂಸೆ ಜೀವನದ ಪ್ರಮುಖ ಮೌಲ್ಯಗಳನ್ನಾಗಿಸಿಕೊಂಡಿದ್ದ ಗಾಂಧೀಜಿಯವರು ಸತ್ಯದ ಮಾರ್ಗದಲ್ಲಿ ನಡೆದ ಅನ್ಯಾಯ ಧೈರ್ಯದಿಂದ ಎದುರಿಸಿ ಸರಳ ಸಂದೇಶ ನೀಡುವ ಮೂಲಕ ಇಡೀ ಭಾರತವನ್ನು ಒಂದುಗೂಡಿಸಿದವರು. ಅಸ್ಪೃಶ್ಯತೆ ನಿವಾರಣೆ, ಸಾಮಾಜಿಕ ನ್ಯಾಯ ಮಾತ್ರವಲ್ಲದೆ ಮಹಿಳಾ ಸಬಲೀಕರಣ, ಗ್ರಾಮೀಣಾಭಿವೃದ್ಧಿ ಸ್ವಚ್ಚತೆಗೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ಗಾಂಧೀಜಿಯವರು ಒಬ್ಬ ವ್ಯಕ್ತಿಯಾಗಿ ದೇಶಕ್ಕೆ ಬಹುದೊಡ್ಡ ಕೊಡುಗೆ ನೀಡಿರುವಾಗ ನಾಗರೀಕರಾದ ನಾವೆಲ್ಲ ಅವರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಪುತ್ತೂರನ್ನು ಸ್ವಚ್ಚ ಶಾಂತಿಯುತ, ಸೌಹಾರ್ದಯುತವಾಗಿ ಪುತ್ತೂರನ್ನಾಗಿ ಬೆಳೆಸಲು ತಮ್ಮ ಅಮೂಲ್ಯ ಕೊಡುಗೆ ನೀಡಬೇಕು ಎಂದು ಹೇಳಿದರು.

Advertisement

ಗಾಂಧೀ ನೆನಪು ಉಪನ್ಯಾಸ ನೀಡಿದ ರಾಜ್ಯ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ, ನ್ಯಾಯವಾದಿ, ಕುಂಬ್ರ ದುರ್ಗಾಪ್ರಸಾದ್ ರೈ ಮಾತನಾಡಿ, ಮಹಾತ್ಮ ಗಾಂಧೀಜಿಯವರ ಸ್ವಾತಂತ್ರ್ಯ ಚಳುವಳಿಯ ಅವರ ಭಾಷಣದಲ್ಲಿ ಸರಳತೆಯಿತ್ತು. ಭಾರತೀಯರೆಲ್ಲರನ್ನು ಒಂದೇ ಎಂಬ ಭಾವನೆಯಲ್ಲಿ ಒಂದು ಗೂಡಿಸಿ ಬೆಳೆಸಿದವರು. ಗಾಂಧೀ ಯಾವತ್ತೂ ಸತ್ತಿಲ್ಲ. ಸದಾ ಜೀವಂತವಾಗಿದ್ದಾರೆ. ಇಂತಹ ವ್ಯಕ್ತಿತ್ವ ಪುತ್ತೂರಿಗೆ ಬಂದಿದ್ದು ಆ ಆತ್ಮ ತಿರುಗುತ್ತಾ ನಮ್ಮ ಜೊತೆ ಸದಾ ಜಾಗೃತವಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಗಾಂಧೀ ಕುಳಿತ ಐತಿಹಾಸಿಕ ಕಟ್ಟೆಯನ್ನು ಅಭಿವೃದ್ಧಿಗಾಗಿ ಹಲವು ಯೋಜನೆಗಳಿದ್ದು ಇದರ ಬಗ್ಗೆ ರಾಜಕಾರಣಿಗಳು ಯೋಚಿಸಿದರೆ ಗಾಂಧಿಕಟ್ಟೆಯ ಜೊತೆಗೆ ಅವರ ನೆನಪು ಶಾಶ್ವತವಾಗಿ ಉಳಿಯಲಿದೆ. ಗಾಂಧೀ ಜಯಂತಿ ಕಾರ್ಯಕ್ರಮ ದೇಶದ ಐಕ್ಯತೆಗೆ ಪೂರಕವಾಗಿರಲಿ ಗಾಂಧಿ ನೆನಪು ಚಿರಾಯುವಾಗಿರಲಿ ಎಂದು ಹೇಳಿದರು.
ಡಿವೈಎಸ್‌ಪಿ ಪ್ರಮೋದ್ ಕುಮಾರ್ ಮಾತನಾಡಿ, ಸ್ವಚ್ಚತೆಯ ಇಂದಿನ ಸವಾಲಾಗಿದೆ. ನಗರದ ಸ್ವಚ್ಚತೆ ಕಾಪಾಡುವುದು ಸ್ಥಳೀಯ ಆಡಳಿತ, ಪೌರಕಾರ್ಮಿಕರ ಜವಾಬ್ದಾರಿ ಮಾತ್ರವಲ್ಲ. ಅದು ನಮ್ಮೆಲ್ಲರ ಜವಾಬ್ದಾರಿ. ಸ್ವಚ್ಚತೆಗಾಗಿ ಸ್ಥಳೀಯ ಆಡಳಿತದೊಂದಿಗೆ ನಾವೆಲ್ಲ ಕೈಜೋಡಿಸಿಕೊಂಡು ಪರಿಸರದ ಸ್ವಚ್ಚತೆ ಕಾಪಾಡಿದಾಗ ಮಾತ್ರ ಮುಂದಿನ ಪೀಳಿಗೆ ಸುಂದರ ಪರಿಸರ ನೀಡಲು ಸಾಧ್ಯ ಎಂದು ಹೇಳಿದ ಅವರು ಉತ್ತಮ ವ್ಯಕ್ತಿ ಬೆಳೆಯಲು ಮದ್ಯಪಾನ ತ್ಯಜಿಸಬೇಕು ಎಂಬ ಸಂದೇಶ ನೀಡಿದ್ದು ಅವರಿಗೆ ಗೌರವ ನೀಡುವ ಉದ್ದೇಶದಿಂದ ಮದ್ಯ ಮತ್ತು ಮಾಂಸ ಮಾರಾಟದ ಮಳಿಗೆಗಳನ್ನು ಒಂದು ದಿನ ಸ್ಥಗಿತಗೊಳಿಸಲಾಗಿದೆ. ಸತ್ಯದ ಪಥ ಬಿಟ್ಟು, ಹಿಂಸೆಯ ಹಾದಿಯಲ್ಲಿ ಮುನ್ನಡೆಯುತ್ತಿರುವ ಪರಿಣಾಮವಾಗಿ ದೇಶದಲ್ಲಿ ಸಂಘರ್ಷಗಳಿಗೆ ಕಾರಣವಾಗಿದೆ ಎಂದು ಹೇಳಿದರು.

Advertisement
Advertisement

ಗಾಂಧಿಕಟ್ಟೆ ಸಮಿತಿಯ ಸಂಚಾಲಕ ಕೃಷ್ಣಪ್ರಸಾದ್ ಆಳ್ವ ಮಾತನಾಡಿ ಮಹಾತ್ಮ ಗಾಂಧೀಯವರು ಕುಳಿತ ಐತಿಹಾಸಿಕ ಕಟ್ಟೆಯ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಗಾಂಧೀ ಕಟ್ಟೆ ಸಮಿತಿ ಸಭೆಯಲ್ಲಿ ತೀರ್ಮಾನಿಸಿದಂತೆ ಗಾಂದೀ ಪೀಠ ಸ್ಥಾಪನೆ, ಗಾಂಧೀಕಟ್ಟೆಯಿಂದ ಬಸ್ ನಿಲ್ದಾಣಕ್ಕೆ ಮೆಟ್ಟಿಲು ನಿರ್ಮಿಸಿ ಅದಕ್ಕೆ ಪಥ ನಾಮಕರಣ ಮಾಡುವುದು, ಗಾಂಧಿ ಪ್ಲೈ ಓವರ್, ಗಾಂಧೀಕಟ್ಟೆಯಲ್ಲಿ ಪ್ರತಿದಿನ ಗಾಂಧೀ ಜ್ಯೋತಿ ಬೆಳಗುವುದು. ಮುಂದಿನ ಜನಾಂಗ ಗಾಂಧೀಜಿಯವರ ಜೀವನ ಚರಿತ್ರೆ ತಿಳಿಸಲು ಚರಕ, ಪುಸ್ತಕ ಮೊದಲಾದವುಗಳ ಪ್ರದರ್ಶನ ನಡೆಸುವ ಮೊದಲಾದ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಇದರ ಜೊತೆಗೆ ಪುತ್ತೂರಿನ ಅಭಿವೃದ್ಧಿಗೆ ಕೊಡುಗೆ ನೀಡಿದವರಿಗೆ ಪ್ರತೀ ವರ್ಷ ಗಾಂಧೀ ಪ್ರಶಸ್ತಿ ನೀಡುವ ಯೋಜನೆಯಿದ್ದು ಪ್ರಥಮವಾಗಿ ಕರ್ನಾಟಕದಲ್ಲಿ ತಾಲೂಕು ಕೇಂದ್ರಕ್ಕೆ ಮೆಡಿಕಲ್ ಕಾಲೇಜು ಮಂಜೂರುಗೊಳಿಸುವಲ್ಲಿ ಸಫಲರಾದ ಶಾಸಕ ಅಶೋಕ್ ಕುಮಾರ್ ರೈಯವರಿಗೆ ಈ ವರ್ಷದ ಗಾಂಧೀ ಪ್ರಶಸ್ತಿ ನೀಡುವುದಾಗಿ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಹೇಳಿದರು.
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರಾಗಿರುವ ತಹಶೀಲ್ದಾರ್ ಎಸ್.ಬಿ ಕೂಡಲಗಿ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ನಗರ ಸಭಾ ಪೌರಾಯುಕ್ತೆ ವಿದ್ಯಾ ಎಂ ಕಾಳೆ, ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಸುರೇಶ್, ರೋಟರಿ ಕ್ಲಬ್‌ಗಳ ಸಹಾಯಕ ಗವರ್ನರ್ ಎ.ಜೆ ರೈ,ಸರಕಾರಿ ಸಹಾಯಕ ಅಭಿಯೋಜಕ ಜನಾರ್ದನ, ಅಗ್ನಿಶಾಮಕ ಇಲಾಖೆಯ ಶಂಕರ್, ಮೆಸ್ಕಾಂ ಸಲಹಾ ಸಮಿತಿ ಸದಸ್ಯ ಸುಬ್ರಹ್ಮಣ್ಯ, ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಗಾಂಧೀಕಟ್ಟೆ ಸಮಿತಿಯ ಸಯ್ಯದ್ ಕಮಲ್, ಅಬ್ದುಲ್ ರಹಿಮಾನ್ ಯೂನಿಕ್,ಉಪನ್ಯಾಸಕ ಡಾ.ರಾಜೇಶ್ ಬೆಜ್ಜಂಗಳ,ತುಳು ಅಪ್ಪೆಕೂಟದ ಅಧ್ಯಕ್ಷೆ ಹರಿಣಾಕ್ಷಿ ಜೆ ಶೆಟ್ಟಿ ಉಪಸ್ಥಿತರಿದ್ದರು.
ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಹಾಗೂ ನಾಗಕರೀಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page