ಶ್ರೀ ದೇವಿ ಮಹಾತ್ಮೆ ಯಕ್ಷಗಾನದಲ್ಲಿ ವಿಟ್ಲದ ಆರ್ಷಿಯಾ ಖಾನ್‌! ಶ್ರೀದೇವಿಯ ಪಾತ್ರಕ್ಕಾಗಿ ತಿಂಗಳಿನಿಂದ ವ್ರತಾಚರಣೆ!!

ಇದೇ ಮೊದಲ ಬಾರಿಗೆ ಮುಸ್ಲಿಂ ಮಹಿಳೆಯೊಬ್ಬರು ಯಕ್ಷಗಾನದಲ್ಲಿ ಅಷ್ಟಭುಜ ಶ್ರೀದೇವಿಯ ಪಾತ್ರ ನಿರ್ವಹಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದದವರಾದ ಆರ್ಷಿಯಾ ಖಾನ್‌ ಅವರು 12 ವರ್ಷಗಳಿಂದ ಯಕ್ಷಗಾನ ಅಭ್ಯಾಸ ಮಾಡುತ್ತಿದ್ದಾರೆ.

Advertisement

ನವರಾತ್ರಿ ಅಂಗವಾಗಿ ಅ.20ರಂದು ಕದ್ರಿ ಮಂಜುನಾಥ ದೇಗುಲದಲ್ಲಿ ಸಂಪೂರ್ಣ ʼಶ್ರೀದೇವಿ ಮಹಾತ್ಮʼ ಪ್ರಸಂಗದಲ್ಲಿ ಪಾತ್ರ ನಿರ್ವಹಿಸಲಿದ್ದಾರೆ. ಆರ್ಷಿಯಾ, ಶ್ರೀದೇವಿಯ ಪಾತ್ರಕ್ಕಾಗಿ ತಿಂಗಳಿನಿಂದ ಮಾಂಸಾಹಾರ ತ್ಯಜಿಸಿ, ಸಾತ್ವಿಕ ಸಸ್ಯಾಹಾರ ಪಾಲಿಸಿ, ವ್ರತಾಚರಣೆಯಲ್ಲಿ ತೊಡಗಿದ್ದಾರೆ. ಈವರೆಗೆ ವಿವಿಧ ಖಳನಾಯಕನ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಿರುವ ಇವರಿಗೆ, ಅಭಿಮಾನಿಗಳು ʼಯಕ್ಷಪ್ರಿಯೆ ತನು ವಿಟ್ಲʼ ಎಂಬ ಬಿರುದನ್ನು ಕೊಟ್ಟಿದ್ದಾರೆ.

Advertisement
Advertisement

ಯಕ್ಷಗಾನ ಕ್ಷೇತ್ರದಲ್ಲಿ ಮಹಿಳೆಯರ ಪ್ರವೇಶವೇ ಒಂದು ಕಾಲದಲ್ಲಿ ಅಪರೂಪವಾಗಿದ್ದ ಸಂದರ್ಭದಲ್ಲಿ, ಮುಸ್ಲಿಂ ಸಮುದಾಯಕ್ಕೆ ಸೇರಿದ ಮಹಿಳೆಯೊಬ್ಬರು ಯಕ್ಷಗಾನ ಕಲಾವಿದೆಯಾಗಿ ಗುರುತಿಸಿಕೊಂಡು ಇದೀಗ ದೇವಿಯ ಪಾತ್ರವನ್ನು ನಿರ್ವಹಿಸುತ್ತಿರುವುದು ವಿಶೇಷ ಗಮನ ಸೆಳೆದಿದೆ. ಆರ್ಷಿಯಾ ಖಾನ್ ಅವರ ಈ ಕಲಾ ಪಯಣವು ಕರಾವಳಿಯ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಕಲೆಗೆ ಧರ್ಮದ ಗಡಿಗಳಿಲ್ಲ ಎಂಬ ಸಂದೇಶವನ್ನು ಸಾರುವಂತಾಗಿದೆ.

ಆರ್ಷಿಯಾ ಖಾನ್ ಕಳೆದ ಸುಮಾರು 12 ವರ್ಷಗಳಿಂದ ಯಕ್ಷಗಾನ ಕಲೆಯಲ್ಲಿ ತೊಡಗಿಸಿಕೊಂಡಿದ್ದು, ಗುರು ಕದ್ರಿ ರಮೇಶ್ ಭಟ್ ಅವರಲ್ಲಿ ತರಬೇತಿ ಪಡೆದಿದ್ದಾರೆ. ಯಕ್ಷಗಾನದ ವಿವಿಧ ಪಾತ್ರಗಳನ್ನು ನಿರ್ವಹಿಸುವ ಮೂಲಕ ಈಗಾಗಲೇ ಕಲಾಭಿಮಾನಿಗಳ ಗಮನ ಸೆಳೆದಿರುವ ಅವರು, ಈ ಹಿಂದೆ ‘ದೇವಿ ಮಹಾತ್ಮೆ’ ಪ್ರಸಂಗದಲ್ಲಿ ಮಹಿಷಾಸುರ ಸೇರಿದಂತೆ ಹಲವು ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಇದೀಗ ಅಕ್ಟೋಬರ್ 20ರಂದು ನಡೆಯಲಿರುವ ‘ಸಂಪೂರ್ಣ ಶ್ರೀ ದೇವಿ ಮಹಾತ್ಮೆ’ ಪ್ರಸಂಗದಲ್ಲಿ ಆರ್ಷಿಯಾ ಖಾನ್ ಅವರು ಮೊದಲ ಬಾರಿಗೆ ಶ್ರೀದೇವಿ ಪಾತ್ರದಲ್ಲಿ ರಂಗಪ್ರವೇಶ ಮಾಡಲಿದ್ದಾರೆ. ಇದಕ್ಕಾಗಿ ಅವರು ಸಾತ್ವಿಕ ಆಹಾರ ಪದ್ಧತಿ ಸೇರಿದಂತೆ ಅಗತ್ಯವಾದ ವ್ರತಾಚರಣೆಗಳನ್ನು ಪಾಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ದೇವಿಯ ಪಾತ್ರಕ್ಕೆ ಬೇಕಾದ ಸಾತ್ವಿಕತೆ, ವೇಷಭೂಷಣ, ಅಭಿನಯ ಮತ್ತು ಯಕ್ಷಗಾನದ ಸಂಪ್ರದಾಯಗಳನ್ನು ಗಮನದಲ್ಲಿಟ್ಟುಕೊಂಡು ಅವರು ಸಿದ್ಧತೆ ನಡೆಸುತ್ತಿದ್ದಾರೆ. ಹಲವು ವರ್ಷಗಳ ಕಲಾ ಅನುಭವ ಹೊಂದಿರುವ ಆರ್ಷಿಯಾ ಅವರಿಗೆ ಈ ಪಾತ್ರವು ವಿಶೇಷ ಜವಾಬ್ದಾರಿಯದ್ದಾಗಿದೆ.

ದಸರಾ ಅಂಗವಾಗಿ ಕದಳಿ ಕಲಾ ಕೇಂದ್ರದ ವತಿಯಿಂದ ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಾಲಯದ ರಾಜಾಂಗಣದಲ್ಲಿ 14ನೇ ವರ್ಷದ ‘ಕದಳಿ ದಶಾಹ’ ಹೆಸರಿನಲ್ಲಿ 10 ದಿನಗಳ ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ.

ಅಕ್ಟೋಬರ್ 11ರಿಂದ 20ರವರೆಗೆ ನಡೆಯಲಿರುವ ಈ ಕಾರ್ಯಕ್ರಮದ ಕೊನೆಯ ದಿನವಾದ ಅಕ್ಟೋಬರ್ 20ರಂದು ‘ಸಂಪೂರ್ಣ ಶ್ರೀ ದೇವಿ ಮಹಾತ್ಮೆ’ ಪ್ರಸಂಗವನ್ನು ಪ್ರದರ್ಶಿಸಲಾಗುತ್ತದೆ.

ಈ ಯಕ್ಷಗಾನ ಪ್ರದರ್ಶನದಲ್ಲಿ ಕಟೀಲು, ಪಾವಂಜೆ ಮೇಳ ಸೇರಿದಂತೆ ತೆಂಕುತಿಟ್ಟು ಯಕ್ಷಗಾನ ಕ್ಷೇತ್ರದ ಪ್ರಸಿದ್ಧ ಮೇಳಗಳ ಕಲಾವಿದರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಆರ್ಷಿಯಾ ಖಾನ್ ಅವರು ಶ್ರೀದೇವಿ ಪಾತ್ರದಲ್ಲಿ ರಂಗಸ್ಥಳ ಪ್ರವೇಶಿಸಲಿದ್ದಾರೆ. ಯಕ್ಷಗಾನವು ಕರಾವಳಿಯ ಪ್ರಮುಖ ಸಾಂಸ್ಕೃತಿಕ ಪರಂಪರೆಯಾಗಿದ್ದು, ತಲೆಮಾರುಗಳಿಂದ ಜನರನ್ನು ತನ್ನತ್ತ ಸೆಳೆಯುತ್ತಿದೆ. ಈ ಕಲಾ ಕ್ಷೇತ್ರದಲ್ಲಿ ವಿವಿಧ ಹಿನ್ನೆಲೆಯ ಕಲಾವಿದರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಿರುವುದು ಕರಾವಳಿಯ ಸಾಂಸ್ಕೃತಿಕ ವೈವಿಧ್ಯತೆಗೆ ಮತ್ತೊಂದು ಉದಾಹರಣೆಯಾಗಿದೆ.

ಆರ್ಷಿಯಾ ಖಾನ್ ಅವರು ಶ್ರೀದೇವಿ ಪಾತ್ರ ನಿರ್ವಹಿಸಲಿರುವುದು ಕಲಾಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಧಾರ್ಮಿಕ ಹಿನ್ನೆಲೆಯನ್ನು ಮೀರಿ ಕಲೆಯನ್ನು ಆರಾಧಿಸುವ ಮನೋಭಾವಕ್ಕೆ ಇದು ಉದಾಹರಣೆಯಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಯಕ್ಷಗಾನ ಪ್ರೇಮಿಗಳು ಹಾಗೂ ಕಲಾಭಿಮಾನಿಗಳು ಆರ್ಷಿಯಾ ಖಾನ್ ಅವರ ಈ ಹೊಸ ಪಾತ್ರವನ್ನು ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಅಕ್ಟೋಬರ್ 20ರಂದು ಕದ್ರಿ ರಾಜಾಂಗಣದಲ್ಲಿ ನಡೆಯಲಿರುವ ‘ಸಂಪೂರ್ಣ ಶ್ರೀ ದೇವಿ ಮಹಾತ್ಮೆ’ ಪ್ರದರ್ಶನದಲ್ಲಿ ಶ್ರೀದೇವಿಯಾಗಿ ಆರ್ಷಿಯಾ ಖಾನ್ ಅವರ ಅಭಿನಯ ಹೇಗಿರಲಿದೆ ಎಂಬುದು ಇದೀಗ ಎಲ್ಲರ ಗಮನ ಸೆಳೆದಿದೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page