ನವದೆಹಲಿ: ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಉಪಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ (98) ಅವರು ಎದೆ ಸೋಂಕಿನಿಂದ ಬಳಲುತ್ತಿದ್ದು, ಶುಕ್ರವಾರ (ಅ.16) ಸಂಜೆ ದಿಲ್ಲಿಯ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಶುಕ್ರವಾರ ಸಂಜೆ ಸುಮಾರು 7.30ರ ವೇಳೆಗೆ ಅವರನ್ನು ಆಸ್ಪತ್ರೆಗೆ ಕರೆತರಲಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ಅಡ್ವಾಣಿ ಅವರನ್ನು ಆಸ್ಪತ್ರೆಯ ಶ್ವಾಸಕೋಶ ಚಿಕಿತ್ಸಾ ವಿಭಾಗಕ್ಕೆ ದಾಖಲಿಸಲಾಗಿದ್ದು, ವೈದ್ಯರ ತಂಡದ ನಿಗಾದಲ್ಲಿ ಇರಿಸಲಾಗಿದೆ. ಅವರ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಲು ಅಗತ್ಯ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಯೋಸಹಜ ಆರೋಗ್ಯ ಸಮಸ್ಯೆಗಳ ಹಿನ್ನೆಲೆಯಲ್ಲಿ ಅಡ್ವಾಣಿ ಅವರು ಈ ವರ್ಷದ ಮೇ ತಿಂಗಳಿನಲ್ಲಿಯೂ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಕೆಲವು ದಿನಗಳ ಚಿಕಿತ್ಸೆ ಬಳಿಕ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು.













