ಹಾವೇರಿ : ಇಲ್ಲಿನ ರಾಣೇಬೆನ್ನೂರು ತಾಲೂಕಿನ ಐತಿಹಾಸಿಕ ದೇವರಗುಡ್ಡದ ಶ್ರೀ ಮಾಲತೇಶ ಸ್ವಾಮಿ ದೇವಸ್ಥಾನದಲ್ಲಿ ನಡೆದ ಪ್ರಸಿದ್ಧ ದಸರಾ ಕಾರ್ಣಿಕೋತ್ಸವದಲ್ಲಿ ಗೊರವಯ್ಯ ನಾಗಪ್ಪಜ್ಜ ಉರ್ಮಿ ಅವರು ನುಡಿದ ಕಾರ್ಣಿಕವಾಣಿ ಭಕ್ತರ ಗಮನ ಸೆಳೆದಿದೆ.
18 ಅಡಿ ಎತ್ತರದ ಬಿಲ್ಲನ್ನೇರಿ ದೈವವಾಣಿ ನುಡಿಯುವ ಸಂಪ್ರದಾಯದಂತೆ, ಒಂಬತ್ತು ದಿನಗಳ ಉಪವಾಸ ವ್ರತ ಕೈಗೊಂಡಿದ್ದ ಪ್ರಧಾನ ಗೊರವಯ್ಯ ನಾಗಪ್ಪಜ್ಜ ಉರ್ಮಿ ಅವರು, “ಕೆಂಪು ಕೋಟೆಯ ಮ್ಯಾಲತಲೇ ಕೆರೆ, ಮುತ್ತು ಚಲ್ಲಿತಲೇ ಪರಾಕ್!” ಎಂದು ಕಾರ್ಣಿಕ ನುಡಿದಿದ್ದಾರೆ. ಬಳಿಕ ಮೇಲಿನಿಂದ ಕೆಳಕ್ಕೆ ಜಿಗಿದ ಅವರನ್ನು ನೆರೆದಿದ್ದ ಭಕ್ತರು ಕೈಗಳಲ್ಲಿ ಹೊತ್ತುಕೊಂಡರು.
ಇನ್ನು ಇದರ ಅರ್ಥವನ್ನು ನೋಡುವುದಾದರೆ ಕೆಂಪು ಕೋಟೆ ಎಂದರೆ ದೇಶದ ಆಡಳಿತ ಮತ್ತು ಅಧಿಕಾರದ ಸಂಕೇತವಾಗಿ ಇದನ್ನು ಕೆಲವರು ಅರ್ಥೈಸುತ್ತಾರೆ. ಇನ್ನು ಕೆರೆ ಎಂದರೆ ಮಳೆ, ಜಲಸಂಪನ್ಮೂಲಗಳ ಹೆಚ್ಚಳ ಮತ್ತು ಕೆರೆ-ಕಟ್ಟೆಗಳು ತುಂಬುವ ಆಶಯದೊಂದಿಗೆ ಈ ನುಡಿಯನ್ನು ವಿಶ್ಲೇಷಿಸಲಾಗುತ್ತಿದೆ. ಮುತ್ತು ಚಲ್ಲಿತಲೇ ಪರಾಕ್ ಎಂದರೆ ಸಮೃದ್ಧಿ, ಕೃಷಿ ಬೆಳವಣಿಗೆ ಹಾಗೂ ರೈತರ ಬದುಕಿನಲ್ಲಿ ಸುಧಾರಣೆಯ ಸಂಕೇತವಾಗಿ ಇದನ್ನು ಭಕ್ತರು ವ್ಯಾಖ್ಯಾನಿಸುತ್ತಾರೆ.
ಕಾರ್ಣಿಕವಾಣಿಯ ಅರ್ಥವನ್ನು ಸಂಪ್ರದಾಯ ಮತ್ತು ನಂಬಿಕೆಗಳ ಆಧಾರದ ಮೇಲೆ ವ್ಯಾಖ್ಯಾನಿಸಲಾಗುತ್ತದೆ. ಮಳೆ, ಕೃಷಿ ಉತ್ಪಾದನೆ ಅಥವಾ ರಾಜಕೀಯ ಸ್ಥಿತಿಗತಿಗಳ ಕುರಿತು ಇದು ವೈಜ್ಞಾನಿಕ ಮುನ್ಸೂಚನೆಯಲ್ಲ.













