ಬಲ್ನಾಡು ಉಳ್ಳಾಲ್ತಿಯ ನುಡಿಗೂ ಪುತ್ತೂರು ದಸರಾಕ್ಕೂ ಇದೆ ಐತಿಹಾಸಿಕ ನಂಟು! ಹತ್ತೂರಿನ ಅಭಿಲಾಷೆ ಈಡೇರಿಸುವ ಕಾರಣಿಕದ ಪುತ್ತೂರು ಶಾರದೆ! ಇಂದು ನಡೆಯಲಿದೆ ಇತಿಹಾಸದಲ್ಲೇ ಪ್ರಥಮ ಬಾರಿಗೆ ಸುಡುಮದ್ದು, ಡಿಜೆ ರಹಿತ ಪುತ್ತೂರು ದಸರಾ ಶೋಭಾಯಾತ್ರೆ!! 92 ವರ್ಷದ ಇತಿಹಾಸದ ಸಂಕ್ಷಿಪ್ತ ನೋಟ!!

ಪುತ್ತೂರು : ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿರುವ ಶಾರದಾ ಮಂದಿರದಲ್ಲಿ ಇಂದಿನಿಂದ ‘ಪುತ್ತೂರು ದಸರಾ’ ಉತ್ಸವವು ಅದ್ಧೂರಿಯಾಗಿ ಆರಂಭಗೊಂಡಿದೆ. ಕಳೆದ 92 ವರ್ಷಗಳಿಂದ ಶಾರದಾ ಉತ್ಸವ ಎಂದೇ ಆಚರಿಸಿಕೊಂಡು ಬರಲಾಗುತ್ತಿದ್ದ ಈ ಧಾರ್ಮಿಕ ಪರಂಪರೆಯನ್ನು, ಈ ವರ್ಷದಿಂದ ಅಧಿಕೃತವಾಗಿ ‘ಪುತ್ತೂರು ದಸರಾ’ ಎಂಬ ಹೊಸ ಹೆಸರಿನಲ್ಲಿ ನಾಮಕರಣ ಮಾಡಿ ಮತ್ತಷ್ಟು ವೈಭವದಿಂದ ನಡೆಯುತ್ತಿದ್ದು, ಇಂದು ಸಂಜೆ ವಿಜೃಂಭನೆಯಿಂದ ಶೋಭಾಯಾತ್ರೆ ನಡೆಯಲಿದೆ.

Advertisement

ಇನ್ನು ಶೋಭಾಯಾತ್ರೆಯಲ್ಲಿ ಈ ಬಾರಿ ಚೆಂಡೆಮೇಳ, ಕೊಂಬು, ಸಾಕ್ಸೋಫೋನ್, ವಯೋಲಿನ್, ಕೀ ಬೋರ್ಡ್, ರಿದಂ ಪ್ಯಾಡ್ ಮತ್ತು ಕೊಳಲು ಸಹಿತ ಅನೇಕ ಆಕರ್ಷಣೆಗಳು ಜನಮನ ಸೆಳೆಯಲಿದೆ. ಜೊತೆಗೆ ಶೋಭಾಯಾತ್ರೆಯಲ್ಲಿ ನಾಡಿನ ಸಂಸ್ಕೃತಿಯನ್ನು ಸಾರುವ ಪ್ರಸಿದ್ಧ ತಂಡಗಳಾದ ಕರಿಂಕಾಳಿ ತ್ರಿಶೂರ್‌, ಅಘೋರಿ ಅಲೇಪುರಂ, ಪೂತಂ ತೀರ ಪಾಲಕ್ಕಾಡ್‌, ತಿರುಪತಿ ಬೋರ್ಡ್‌ ಮಲಾಪುರಂ, ಕಥಕ್ಕಳಿ ಬೋರ್ಡ್‌ ತ್ರಿಶೂರ್‌, ಕಾಳಿ ಡ್ಯಾನ್ಸ್‌ ತ್ರಿಶೂರ್‌, ಗೊರಿಲ್ಲಾ ಆಂಡ್‌ ಟೀಮ್‌, ದೇವಿ ಬೋರ್ಡ್‌ ಕಾಸರಗೋಡು, ತಾಂಬೋಲಂ ಕಾಸರಗೋಡು, ಕಾಳ ಮಲಪ್ಪುರಂ, ದೇವರೂಪಂ ಎರ್ಣಾಕುಲಂ, ಮುತ್ತುಕೊಡೆ ಕಾಸರಗೋಡು ಹಾಗೂ ಅರೆಯಂಜಮ್‌ ಮಲಪ್ಪುರಂ ಬೋರ್ಡ್‌ ಭಾಗವಹಿಸಲಿವೆ.

Advertisement
Advertisement

ಅಕ್ಷರಾಭ್ಯಾಸ ನಡೆದು ನಂತರ ಸಂಜೆ 5-30ಕ್ಕೆ ಬೊಳುವಾರು ವೃತ್ತದಲ್ಲಿ ಐತಿಹಾಸಿಕ ಪುತ್ತೂರು ದಸರಾ ಶೋಭಾಯಾತ್ರೆಯ ಅದ್ಧೂರಿ ಚಾಲನೆಗೊಂಡು, ಬೊಳುವಾರು ವೃತ್ತದಿಂದ ಚೆಂಡೆಮೇಳ, ವಾಧ್ಯಘೋಷ, ಕುಣಿತ ಭಜನೆ ಹಾಗೂ ಕೇರಳ, ತಮಿಳುನಾಡು ಮತ್ತು ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಸಿದ್ಧ ಸಾಂಸ್ಕೃತಿಕ ಕಲಾತಂಡಗಳ ವಿಶೇಷ ಆಕರ್ಷಣೆಗಳೊಂದಿಗೆ ಶ್ರೀ ಶಾರದಾ ದೇವಿಯ ಭವ್ಯ ಶೋಭಾಯಾತ್ರೆ ನಡೆಯಲಿದೆ.
ಇನ್ನು ಕಲಾ ತಂಡಗಳು ಬೊಳುವಾರು ವೃತ್ತ, ಇನ್‌ ಲ್ಯಾಂಡ್‌ ಮಯೂರ, ಶ್ರೀಧರ್‌ ಭಟ್‌ ಬಿಲ್ಡಿಂಗ್‌, ಬಸ್‌ ನಿಲ್ದಾಣ, ಹೋಟೆಲ್‌ ಸುಜಾತ, ದರ್ಬೆ ವೃತ್ತದ ಮೂಲಕ ಮತ್ತೆ ಪುತ್ತೂರು ದೇವರಮಾರು ಗದ್ದೆಗೆ ಹಿಂತಿರುಗಿ ಜಲಸ್ತಂಬನಗೊಳ್ಳಲಿದೆ.

ಪುತ್ತೂರು ಶಾರದಾ ಭಜನಾ ಮಂದಿರದ ಹಿನ್ನಲೆ:
ಪುತ್ತೂರು ಶಾರದಾ ಮಂದಿರವು 92 ವರ್ಷದ ಹಿಂದೆ ಪುತ್ತೂರಿನಲ್ಲಿ ಅಮ್ಮ ಎಂಬುವ ಸಾಂಕ್ರಾಮಿಕ ರೋಗ ಹರಡಿತ್ತು. ಅದಕ್ಕೆ ಚಿಕಿತ್ಸೆ ಮಾಡಿದರು ಕಡಿಮೆಯಾಗುತ್ತಿರಲಿಲ್ಲ. ಅದರಿಂದಾಗಿ ಸುಮಾರು ಮಂದಿ ಮರಣ ಹೊಂದುತ್ತಿದ್ದರು. ಆ ಸಂದರ್ಭದಲ್ಲಿ ಭಕ್ತದಿಗಳು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಮಾಡುತ್ತಿದ್ದರು, ಹಾಗೂ ಬಲ್ನಡು ಉಳ್ಳಾಲ್ತಿ ದೈವಸ್ಥಾನಕ್ಕೂ ತೆರಳಿ ಪ್ರಾರ್ಥನೆ ಮಾಡಿದಾಗ ಅಲ್ಲಿ ದೈವವು ಶೃಂಗೇರಿ ಶಾರದಾ ದೇವಿಯ ಫೋಟೋ ಮತ್ತು ಮಹಾಲಿಂಗೇಶ್ವರ ದೇವರ ಪ್ರಸಾದವನ್ನು ತೆಗೆದುಕೊಂಡು ಕಾಯಿಲೆಯಿರುವ ಮನೆಗಳಿಗೆ ಭಜನೆಯ ಮೂಲಕ ಹೋಗಿ ಪ್ರಸಾದವನ್ನು ಕೊಡಿ ಎಂದು ನುಡಿ ಕೊಟ್ಟರು. ಅನಂತರ ಅದೇ ರೀತಿ ಮಾಡಿದಾಗ ಪುತ್ತೂರಿನಲ್ಲಿ ಅಮ್ಮ ಎಂಬುವ ಕಾಯಿಲೆ ಸಂಪೂರ್ಣವಾಗಿ ಕಡಿಮೆಯಾಯಿತು. ನಂತರ ಎಲ್ಲಾ ಭಕ್ತರು ಸೇರಿ ಪುತ್ತೂರಿನಲ್ಲಿ ಭಜನಾ ಮಂದಿರ ನಿರ್ಮಿಸುವುದಾಗಿ ನಿರ್ಧಾರ ಮಾಡಿ ನಿರ್ಮಾಣ ಮಾಡಿದರು. ಅಲ್ಲಿ ಭಕ್ತಾದಿಗಳು ಪ್ರಾರ್ಥನೆಮಾಡಿ ತಮ್ಮ ಇಷ್ಟಾರ್ಥಗಳನ್ನು ಹೇಳಿಕೊಂಡಾಗ ಅವೆಲ್ಲವೂ ಪ್ರಾಪ್ತಿಯಾದ ಇತಿಹಾಸವು ಇದೆ. ಈಗಲೂ ಕೂಡ ನಡೆಯುತ್ತಿದೆ. ಅಲ್ಲಿ ಶಾರದಾ ದೇವಿಗೆ ಹರಕೆ ರೂಪದಲ್ಲಿ ಉತ್ಸವದ ಸಂದರ್ಭದಲ್ಲಿ ಸೀರೆ ನೀಡುತ್ತಾರೆ. ಇದು ಭಜನಾ ಮಂದಿರದ ಇತಿಹಾಸವಾಗಿದೆ.

ಪುತ್ತೂರು ಶಾರದೋತ್ಸವ ತನ್ನದೇ ಆದ ಭವ್ಯ ಇತಿಹಾಸ ಮತ್ತು ಸಾಂಸ್ಕೃತಿಕ ಧಾರ್ಮಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಧಾರ್ಮಿಕ ಆಚರಣೆಯು ಇಡೀ ಪುತ್ತೂರು ಸೀಮೆಯ ಜನರನ್ನು ಜಾತಿ-ಮತ ಬೇದವಿಲ್ಲದೆ ಒಂದುಗೂಡಿಸುವ ಶಕ್ತಿಯಾಗಿದೆ. ಪುತ್ತೂರಿನ ಶ್ರೀ ಶಾರದೋತ್ಸವವು ಕೇವಲ ಒಂದು ವರ್ಗಕ್ಕೆ ಸೀಮಿತವಾಗಿರದೆ, ಇಡೀ ಪುತ್ತೂರು ನಗರದ ಸಾರ್ವಜನಿಕ ಉತ್ಸವವಾಗಿ ಆಚರಿಸಲ್ಪಡುತ್ತದೆ. ವ್ಯಾಪರಿಗಳು, ಕಲಾಪ್ರೇಮಿಗಳು ಮತ್ತು ಸಾರ್ವಜನಿಕರು ಒಟ್ಟಾಗಿ ಸೇರಿ ಈ ವೈಭವವನ್ನು ಕಣ್ಣುತುಂಬಿಕೊಳ್ಳುತ್ತಾರೆ. ಶ್ರೀ ಶಾರದೋತ್ಸವ ಕಳೆದ 3 ವರ್ಷಗಳಿಂದ ಬಹಳ ಅದ್ಧೂರಿಯಾಗಿ ಸೀತಾರಾಮ ರೈ ಕೆದಂಬಾಡಿಗುತ್ತು ಅಧ್ಯಕ್ಷರು ಇವರ ನೇತೃತ್ವದಲ್ಲಿ ನಡೆಯುತ್ತಿದೆ. ಕಳೆದ 3 ವರ್ಷಗಳಿಂದಲೂ ಶ್ರೀ ಶಾರದೋತ್ಸವವನ್ನೂ ಪುತ್ತೂರು ದಸರಾ ಎಂದು ಮಾಡಲು ಚಿಂತನೆಯಲ್ಲಿದ್ದು, ಈ ವರ್ಷ ಅಧಿಕೃತವಾಗಿ ಪುತ್ತೂರು ದಸರಾ ಎಂಬ ನಾಮಾಂಕಿತದೊಂದಿಗೆ ಹತ್ತೂರಲ್ಲೂ ಶಾರದಾ ಮಾತೆಯ ಕಾರಣಿಕ ಪಸರಿಸುತ್ತಿದೆ. ದಸರಾವನ್ನೂ ನೋಡಲು ಇಲ್ಲಿನ ಜನರು ಮಂಗಳೂರು ಅಥವಾ ಮಡಿಕೇರಿಗಳಿಗೆ ಹೋಗುತ್ತಿದ್ದರು. ಹಾಗಾಗಿ ಇಲ್ಲಿಯೂ ಹಾಗೆಯೇ ತುಂಬಾ ವಿಜೃಂಭಣೆಯಿಂದ ಶಾರದಾ ಮೆರವಣಿಗೆಯೂ ನಡೆಸಲು ಯೋಜನೆಮಾಡುತ್ತಿದೆ.

ಪುತ್ತೂರಿನಲ್ಲಿ ಕಳೆದ ನಾಲ್ಕು ವರ್ಷದಿಂದಲೂ ಡಿಜೆ, ಪಟಾಕಿಗಳಿಲ್ಲದೇ ಶಾರದಾ ಮೆರವಣಿಗೆಯೂ ಕುಣಿತ ಭಜನೆಯ ಮೂಲಕ ನಡೆಸುವ ನಿರ್ಧಾರ ಮಾಡಿ ನಡೆಸುತ್ತಿದ್ದೇವೆ. ಈ ಸಲವೂ ಕೂಡ 700 ರಿಂದ 800 ಮಂದಿ ಕುಣಿತ ಭಜನೆಗಾರರು ಇದ್ದಾರೆ ಹಾಗೂ ಸಾಂಪ್ರಧಾಯಿಕ ನೃತ್ಯಗಾರರು ವಿವಿಧ ಜಿಲ್ಲೆಗಳಿಂದ ಬೇರೆ ಬೇರೆ ಕಲಾವಿದರಿಂದ ಸಾಂಪ್ರಧಾಯಿಕವಾಗಿ ನಡೆಯುತ್ತದೆ. ಮಕ್ಕಳಿಂದ ವೃದ್ಧರವರೆಗೆ ಈ ಮೆರವಣಿಗೆಯನ್ನೂ ನೋಡುವ ಯಾರಿಗೂ ತೊಂದರೆಯಾಗದಂತೆ ನಡೆಸುವ ಉದ್ದೇಶದಿಂದ ನಾಸಿಕ್‌ ಬ್ಯಾಂಡ್‌ಗಳನ್ನು ಉಪಯೋಗಮಾಡದೇ ಮೆರವಣಿಗೆಯನ್ನು ಅದ್ಧೂರಿಯಾಗಿ ನಡೆಸಲಾಗುತ್ತದೆ. ಇನ್ನೂ ಇದರ ವಿಶೇಷತೆಯೆಂದರೇ ಪುತ್ತೂರಿನಲ್ಲಿ ಎಷ್ಟೊ ಮೆರವಣಿಗೆ ಯಾದರೂ ಸಮಯಪಾಲನೆಯಲ್ಲಿ ಹೆಸರುವಾಸಿಯಾಗಿರುವುದು ಪುತ್ತೂರು ಶ್ರೀ ಶಾರದಾ ಮೆರವಣಿಗೆಯೂ ಮಾತ್ರ, ಸರಿಯಾದ ಸಮಯದಲ್ಲಿ ಆರಂಭಗೊಂಡು ನಿಯಮದ ಸಮಯದೊಳಗಡೆ ಮುಕ್ತಾಯವಾಗುತ್ತದೆ ಎಂದು ಶೋಭಾಯಾತ್ರೆಯ ಸಂಚಾಲಕ ನವೀನ್‌ ಕುಲಾಲ್‌ ನಿಮಿಷ ನ್ಯೂಸ್‌ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page