ಬೆಂಗಳೂರು : ನಾನು ಮುಖ್ಯಮಂತ್ರಿಯಾದಾಗ ಜೆಡಿಎಸ್‌ನಿಂದ ಸ್ವಲ್ಪ ಮಟ್ಟಿಗಾದರೂ ಸಹಕಾರ ಸಿಗುತ್ತದೆ ಎಂಬ ನಿರೀಕ್ಷೆಯನ್ನೇ ಇಟ್ಟುಕೊಂಡಿರಲಿಲ್ಲ. ಅದಕ್ಕೆ ತಕ್ಕಂತೆ ಅವರು ನಡೆದುಕೊಳ್ಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಏನೇ ಮಾತನಾಡಿದರೂ ನಾನು ಸ್ವಾಗತಿಸುತ್ತೇನೆ. ಅವರು ನನ್ನನ್ನು ತಿದ್ದುತ್ತಿದ್ದಾರೆ. ಎಚ್ಚರದಿಂದ ಇರುವಂತೆ ಮಾಡುತ್ತಿದ್ದಾರೆ ಎಂದೂ ಮಾರ್ಮಿಕವಾಗಿ ಹೇಳಿದ್ದಾರೆ.
ದಸರಾ ಹಬ್ಬದ ಅಂಗವಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ವಿಶೇಷ ಸಂದರ್ಶನ ನೀಡಿದ ಅವರು ವಿರೋಧ ಪಕ್ಷಗಳ ನಡವಳಿಕೆ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮಾಡುತ್ತಿರುವ ಆರೋಪಗಳು ಸೇರಿ ಹಲವು ವಿಚಾರಗಳ ಕುರಿತಂತೆ ಮುಕ್ತವಾಗಿ ಮಾತುಗಳನ್ನಾಡಿದರು. ನಾನು ಎಲ್ಲ 224 ಶಾಸಕರಿಗೂ ಮುಖ್ಯಮಂತ್ರಿ. ನಾನು ಮುಖ್ಯಮಂತ್ರಿಯಾದಾಗ ಜೆಡಿಎಸ್ ಪಕ್ಷದಿಂದ ಸಹಕಾರವನ್ನೇ ನಿರೀಕ್ಷಿಸಿರಲಿಲ್ಲ. ಅಲ್ಲಿನ ನಾಯಕರ ಬಗ್ಗೆ ನನಗೆ ಚೆನ್ನಾಗಿ ತಿಳಿದಿತ್ತು. ಇನ್ನು, ರಾಷ್ಟ್ರೀಯ ಪಕ್ಷವಾದ ಬಿಜೆಪಿ ಆರು ತಿಂಗಳಾದರೂ ನನಗೆ ಸಮಯ ನೀಡುತ್ತಾರೆ ಎಂದು ತಿಳಿದಿದ್ದೆ. ಆದರೆ, ಅವರು ಕೂಡ ತಾಳ್ಮೆಯಿಲ್ಲದೆ ಮೊದಲ ದಿನದಿಂದಲೇ ನನ್ನನ್ನು ವಿರೋಧಿಸಲು ಶುರು ಮಾಡಿದರು. ಆದರೆ, ನನ್ನ ವೇಗವನ್ನು ಅವರು ನಿಲ್ಲಿಸಲು ಆಗಲ್ಲ. ನಾನು ಪ್ರತಿ ದಿನವೂ ಕೆಲಸ ಮಾಡುತ್ತಲೇ ಬಂದಿದ್ದೇನೆ ಎಂದರು.
ವಿಧಾನಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನದ ಕುರಿತಂತೆ ಮಾತನಾಡಿದ ಡಿ.ಕೆ.ಶಿವಕುಮಾರ್, ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸದಿದ್ದರೆ ಯಾವುದೇ ಸಮಸ್ಯೆಯಾಗುತ್ತಿರಲಿಲ್ಲ. ಅವರಿಗೆ ಸಂಖ್ಯಾಬಲವಿಲ್ಲದಿದ್ದರೂ ಕುಮಾರಸ್ವಾಮಿ ಸವಾಲು ಹಾಕಿ ಅಭ್ಯರ್ಥಿ ಕಣಕ್ಕಿಳಿಸಿದರು. ಚುನಾವಣೆಗೂ ಮುನ್ನ ಬೇರೆ ಕಾರಣಕ್ಕಾಗಿ ಜೆಡಿಎಸ್‌ನ 10 ಶಾಸಕರು ನನ್ನನ್ನು ಭೇಟಿಯಾಗಿದ್ದರು. ಆಗ ನಾನು ಗಿಳಿಗೆ ಹೇಳಿದ ಹಾಗೆ ಅವರಿಗೆ ಹೇಳಿದೆ. ಸಂಖ್ಯಾಬಲವಿಲ್ಲ, ಅಭ್ಯರ್ಥಿ ಹಾಕಬೇಡಿ ಎಂದಿದ್ದೆ. ಆದರೆ, ಅವರು ನಮ್ಮ ನಾಯಕರು ನಮ್ಮನ್ನೆಲ್ಲ ಪರೀಕ್ಷೆ ಮಾಡಬೇಕಂತೆ. ಅದಕ್ಕಾಗಿ ಅಭ್ಯರ್ಥಿ ಕಣಕ್ಕಿಳಿಸುತ್ತಾರಂತೆ ಎಂದಿದ್ದರು. ಕೊನೆಗೆ 12 ಶಾಸಕರು ಅಡ್ಡಮತದಾನ ಮಾಡಿದರು. ಯಾರು ಮಾಡಿದರು ಎಂಬುದು ನನಗೆ ತಿಳಿದಿಲ್ಲ. ನಾನು ಇಬ್ಬರಲ್ಲಿ ಮತ ಕೇಳಿದ್ದೆ, ಅವರು ನಮ್ಮ ಅಭ್ಯರ್ಥಿಗೆ ಮತ ಹಾಕಿದರು ಎಂದು ಸಿಎಂ ಹೇಳಿದರು.
ಕುಮಾರಸ್ವಾಮಿ ವಿರೋಧದ ಬಗ್ಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ನನ್ನನ್ನು ಮುಖ್ಯಮಂತ್ರಿ ಎಂದು ಅವರು ಒಪ್ಪಿಕೊಂಡಿಲ್ಲ. ಅದನ್ನು ಈಗಾಗಲೇ ಹೇಳಿದ್ದಾರೆ. ನನ್ನ ಹೆಸರು ಹೇಳುವುದೂ ಅವಮಾನ ಎನ್ನುತ್ತಾರೆ. ಆದರೆ, ನಾನು ಜೆಡಿಎಸ್ ಉಳಿಯಬೇಕು, ಮತ್ತಷ್ಟು ಗಟ್ಟಿಯಾಗಬೇಕು ಎನ್ನುತ್ತೇನೆ. ಕುಮಾರಸ್ವಾಮಿ ಅವರು ಏನೇ ಮಾತನಾಡಿದರೂ ಅದನ್ನು ಸ್ವಾಗತಿಸುತ್ತೇನೆ. ನನ್ನನ್ನು ಅವರು ತಿದ್ದುತ್ತಿದ್ದಾರೆ, ಎಚ್ಚರಿಕೆಯಿಂದಿರುವಂತೆ ಮಾಡುತ್ತಿದ್ದಾರೆ. ನಾನು ಎಲ್ಲ ಸವಾಲುಗಳನ್ನೂ ಸ್ವೀಕಾರ ಮಾಡುತ್ತಾ ಕೆಲಸ ಮಾಡುತ್ತಿದ್ದೇನೆ ಎಂದರು.
ಬಿಡದಿ ಟೌನ್‌ಶಿಪ್ ಅನುಷ್ಠಾನವಾಗಲೇಬೇಕು ಎಂಬ ಬಗ್ಗೆ ನನಗೆ ಪ್ರತಿಷ್ಠೆಯಿಲ್ಲ ಎಂದ ಡಿ.ಕೆ.ಶಿವಕುಮಾರ್, ಹಿಂದೆ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗಲೇ ಯೋಜನೆ ರೂಪಿಸಿದ್ದರು. 9 ಸಾವಿರ ಎಕರೆ ಭೂಮಿಯಲ್ಲಿ ಬಿಜೆಪಿ ಸರ್ಕಾರವಿದ್ದಾಗ 1 ಸಾವಿರ ಎಕರೆ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ನಂತರದ ಸರ್ಕಾರಗಳೂ ಆ ಯೋಜನೆ ರದ್ದು ಮಾಡಲಿಲ್ಲ. ಕುಮಾರಸ್ವಾಮಿ ಅವರು ಬಿಡದಿ ಮಾತ್ರವಲ್ಲ 5 ಕಡೆ ಟೌನ್‌ಶಿಪ್ ಮಾಡಬೇಕು ಎಂದು ಯೋಜಿಸಿದ್ದರು. ಈಗ ನಾನು ಬಿಡದಿ ಟೌನ್‌ಶಿಪ್‌ನ ಭೂಸ್ವಾಧೀನದ ಡಿ-ನೋಟಿಫೈ ಮಾಡಿದರೆ ಜೈಲಿಗೆ ಹೋಗಬೇಕಾಗುತ್ತದೆ. ಹಿಂದೆ ಏನಿತ್ತೋ ಅದನ್ನೇ ಮುಂದುವರಿಸುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಸದ್ಯ ರೈತರಿಗೆ ಪ್ರತಿ ಎಕರೆಗೆ 2.50ರಿಂದ 3 ಕೋಟಿ ರು. ಪರಿಹಾರ ನೀಡಲಾಗುತ್ತಿದೆ. ಭೂಮಿ ನೀಡಿದವರಿಗೆಲ್ಲ ಪರಿಹಾರ ಕೊಡಲಾಗುತ್ತಿದೆ. ಅಭಿವೃದ್ಧಿ ಶುಲ್ಕ ಸೇರಿಸಿದರೆ ಸುಮಾರು 4ರಿಂದ 5 ಕೋಟಿ ರು. ಪರಿಹಾರ ದೊರೆಯುತ್ತದೆ. ಕೆಲವರು ಭೂಮಿ ಉಳಿಸಿಕೊಳ್ಳುತ್ತೇವೆ ಎಂದಿದ್ದಾರೆ. ಅದಕ್ಕೂ ಒಪ್ಪಿಕೊಂಡಿದ್ದೇವೆ. ಆದರೆ, ಡಿ-ನೋಟಿಫೈ ಮಾತ್ರ ಮಾಡಲು ಸಾಧ್ಯವಿಲ್ಲ. ಹಿಂದೆ ಬಿ.ಎಸ್. ಯಡಿಯೂರಪ್ಪ ಜೈಲಿಗೆ ಹೋಗಿದ್ದನ್ನು ನಾವು ನೋಡಿದ್ದೇವೆ. ಇನ್ನು, ಕುಮಾರಸ್ವಾಮಿ ಅವರ ಕಾಲದಲ್ಲಿನ ಯೋಜನೆಯನ್ನು ನಾವು ಅನುಷ್ಠಾನಗೊಳಿಸುತ್ತಿದ್ದೇವೆ ಎಂದು ಅವರು ಖುಷಿ ಪಡಬೇಕಿತ್ತು ಎಂದರು.













