ಪುತ್ತೂರು : ದಸರಾ ಅಂದ್ರೆ ಎಲ್ಲೆಲ್ಲೂ ಸಂಭ್ರಮ ಸಡಗರ. ಮೈಸೂರು, ಮಡಿಕೇರಿ, ಮಂಗಳೂರು ದಸರಾವಂತೂ ನೋಡಲು ಕಣ್ಣಿಗೆ ಹಬ್ಬ. ಆದ್ರೆ ಇಲ್ಲೊಂದ್ಕಡೆ ಶಾರದೋತ್ಸವವನ್ನ ಸೌಹಾರ್ದಯುತವಾಗಿ ಆಚರಿಸಿ ಎಲ್ಲೆಡೆ ಭಾರೀ ಪ್ರಶಂಸೆಗೆ ಕಾರಣರಾಗಿದ್ದಾರೆ. ಹೌದು ಪುತ್ತೂರಿನ ನರಿಮೊಗರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಾತಿ ಮತ ಭೇದವಿಲ್ಲದೆ ಶಾರದೋತ್ಸವ ಕಾರ್ಯಕ್ರಮವನ್ನ ಆಚರಿಸಿ ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದ್ದಾರೆ. ಸುಮಾರು 15 ವರ್ಷಗಳಿಂದ ಈ ಶಾಲೆಯಲ್ಲಿ ಶಾರದೋತ್ಸವ ಕಾರ್ಯಕ್ರಮವನ್ನ ಅಂದಿನಿಂದ ಇಂದಿನವರೆಗೆ ಆಚರಿಸುತ್ತಾ ಬಂದಿದ್ದಾರೆ. ಆದ್ರೆ ಇಲ್ಲೀವರೆಗೂ ಹಿಂದೂ ಮುಸಲ್ಮಾನ ಕ್ರಿಶ್ಚಿಯನ್ ಎಂಬ ಧರ್ಮವನ್ನ ನೋಡದೆ, ಎಲ್ಲರೂ ಒಗ್ಗಟ್ಟಾಗಿ ಶಾರದೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾ ಬಂದಿದ್ದಾರೆ.
ಇಂದು ಶಾರದ ಮಾತೆಗೆ ವಿಶೇಷ ಪೂಜೆಯ ಮೂಲಕ ಕಾರ್ಯಕ್ರಮ ಆರಂಭಗೊಂಡಿತು. ಬಳಿಕ ಭಜನಾ ತಂಡದವರ ಜೊತೆ ಶಾಲೆಯ ಮಕ್ಕಳು ಧ್ವನಿಯಾದರು. ಜೊತೆಗೆ ನೆರದಿದ್ದ ಪೋಷಕರು ಕೂಡ ಭಜನಾ ಕಾರ್ಯಕ್ರಮದಲ್ಲಿ ಭಾಗಿಯಾದರು. ಇನ್ನುಳಿದಂತೆ ಮಧ್ಯಾಹ್ನದ ಭೋಜನದ ವ್ಯವಸ್ಥೆಗೆ ಮುಸ್ಲಿಂ ಧರ್ಮದವರು ಸಹಾಯ ನೀಡಿದ್ದು ಅವರೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸೌಹಾರ್ದತೆಗೆ ಸಾಕ್ಷಿಯಾದರು. ಯಾವುದೇ ಭೇದ ಭಾವವಿಲ್ಲದೇ ಎಲ್ಲಾ ಧರ್ಮದವರು ಶಾರದ ಮಾತೆಯ ಪುಣ್ಯ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಿವಿಧತೆಯಲ್ಲಿ ಏಕತೆ ಎಂಬಂತೆ ತೋರಿಸಿಕೊಟ್ಟರು. ನರಿಮೊಗರು ಶಾಲೆಯಲ್ಲಿ ಹಿಂದಿನಿಂದಲೂ ಇಂತಹ ಅನೇಕ ಕಾರ್ಯಕ್ರಮಗಳು ನಡೆಯುತ್ತಾ ಬಂದಿದ್ದವು. ಇಲ್ಲಿನ ಹಿರಿಯ ವಿದ್ಯಾರ್ಥಿಗಳು ಇಂತಹ ಸೌಹಾರ್ದ ಕಾರ್ಯಕ್ಕೆ ಬೆನ್ನೆಲುಬಾಗಿದ್ದಾರೆ.













