ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಕುತ್ತಿಗೆಗೆ ಹಗ್ಗ ಸಿಲುಕಿ ಉಸಿರುಗಟ್ಟಿ 9 ವರ್ಷದ ಬಾಲಕನೊಬ್ಬ ಮೃತಪಟ್ಟ ಘಟನೆ ಕುಕ್ಕಿಪಾಡಿ ಗ್ರಾಮದ ಮಾವಿನಕಟ್ಟೆ ಸಮೀಪದ ಕೆಂತಲೆ ಎಂಬಲ್ಲಿ ರವಿವಾರ (ಅ.25) ರಾತ್ರಿ ಸಂಭವಿಸಿದೆ. ಕೆಂತಲೆ ನಿವಾಸಿ ಆನಂದ ಪೂಜಾರಿ ಅವರ ಪುತ್ರ ಅಮೃತ್ ಎ. ಪೂಜಾರಿ (9) ಮೃತಪಟ್ಟ ಬಾಲಕ ಎಂದು ತಿಳಿದು ಬಂದಿದೆ.
ಅ. 25ರ ರಾತ್ರಿ ಅಮೃತ್ ಮನೆಯ ಎದುರಿನ ಹಾಲ್ನಲ್ಲಿ ಒಬ್ಬನೇ ಆಟವಾಡುತ್ತಿದ್ದನು. ಈ ವೇಳೆ ಮನೆಯ ಕಿಟಕಿಗೆ ಕಟ್ಟಲಾಗಿದ್ದ ಹಗ್ಗವು ಆಕಸ್ಮಿಕವಾಗಿ ಆತನ ಕುತ್ತಿಗೆಗೆ ಸಿಲುಕಿಕೊಂಡು ಉಸಿರುಗಟ್ಟಿದೆ. ಬಾಲಕ ಮಾತನಾಡದೆ ಹಗ್ಗದಲ್ಲಿ ಸಿಲುಕಿರುವುದನ್ನು ಕಂಡ ಆತನ ಸಹೋದರಿ ಪ್ರಾರ್ಥನಾ, ತಕ್ಷಣವೇ ಪಕ್ಕದಲ್ಲಿದ್ದ ಚಿಕ್ಕಪ್ಪನ ಮನೆಗೆ ಓಡಿಹೋಗಿ ವಿಷಯ ತಿಳಿಸಿದ್ದಾಳೆ. ಕುಟುಂಬಸ್ಥರು ಬಂದು ನೋಡಿದಾಗ ತಾಯಿ ಗೀತಾ ಅವರು ಮಗನನ್ನು ತೊಡೆಯ ಮೇಲೆ ಮಲಗಿಸಿಕೊಂಡು ಅಳುತ್ತಿರುವುದು ಕಂಡು ಬಂದಿದೆ.
ಕೂಡಲೇ ಬಾಲಕನನ್ನು ಮೂಡುಬಿದಿರೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಬಾಲಕ ಈಗಾಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ರವಾನಿಸಲಾಗಿದೆ. ಈ ದುರಂತಕ್ಕೆ ಸಂಬಂಧಿಸಿದಂತೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.













