ಮುಂಬೈ : ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ 2027 ಮೆಗಾ ಹರಾಜಿಗೂ ಮುನ್ನವೇ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ತನ್ನ ಕೋಚಿಂಗ್ ಸಿಬ್ಬಂದಿಯಲ್ಲಿ ಭಾರಿ ಬದಲಾವಣೆ ಮಾಡಿದ್ದು, ವೇಗದ ಬೌಲಿಂಗ್ ಕೋಚ್ ಲಸಿತ್ ಮಾಲಿಂಗ ಸೇರಿದಂತೆ ಮೂವರು ಪ್ರಮುಖ ಕೋಚ್ಗಳನ್ನು ತಂಡದಿಂದ ಬಿಡುಗಡೆಗೊಳಿಸಿದೆ. ಮಾಲಿಂಗ ಅವರೊಂದಿಗೆ ಸಹಾಯಕ ಬೌಲಿಂಗ್ ಕೋಚ್ ಪಾರಸ್ ಮ್ಹಾಂಬ್ರೆ ಮತ್ತು ಫೀಲ್ಡಿಂಗ್ ಕೋಚ್ ಕಾರ್ಲ್ ಹಾಪ್ಕಿನ್ಸನ್ ಸಹ ಮುಂಬೈ ತಂಡದಿಂದ ಹೊರಬಿದ್ದಿದ್ದಾರೆ ಎಂದು ಜಾಲತಾಣ ಮೂಲಗಳು ವರದಿ ಮಾಡಿವೆ.
ಶ್ರೀಲಂಕಾದ ದಿಗ್ಗಜ ವೇಗಿ ಲಸಿತ್ ಮಾಲಿಂಗ ಮತ್ತು ಮುಂಬೈ ಇಂಡಿಯನ್ಸ್ ತಂಡದ ನಡುವೆ ದಶಕಕ್ಕೂ ಹೆಚ್ಚಿನ ಸುದೀರ್ಘ ನಂಟಿತ್ತು. 11 ವರ್ಷಗಳ ಕಾಲ ಮುಂಬೈ ಪರ ಆಟಗಾರನಾಗಿ ಹಲವು ಐತಿಹಾಸಿಕ ಜಯ ತಂದುಕೊಟ್ಟಿದ್ದ ಮಾಲಿಂಗ, 2018 ರಲ್ಲಿ ತಂಡದ ಬೌಲಿಂಗ್ ಮೆಂಟರ್ ಆಗಿ ಹೊಸ ಜವಾಬ್ದಾರಿ ವಹಿಸಿಕೊಂಡಿದ್ದರು. ನಂತರ 2024 ರ ಐಪಿಎಲ್ ಸೀಸನ್ನಲ್ಲಿ ಶೇನ್ ಬಾಂಡ್ ಅವರ ಜಾಗಕ್ಕೆ ಮುಂಬೈ ತಂಡದ ಮುಖ್ಯ ವೇಗದ ಬೌಲಿಂಗ್ ಕೋಚ್ ಆಗಿ ಅಧಿಕೃತವಾಗಿ ನೇಮಕಗೊಂಡಿದ್ದರು.
ಭಾರತ ತಂಡದ ಮಾಜಿ ಬೌಲಿಂಗ್ ಕೋಚ್ ಆಗಿದ್ದ ಪಾರಸ್ ಮ್ಹಾಂಬ್ರೆ, 2025 ರ ಐಪಿಎಲ್ ಸೀಸನ್ಗೂ ಮುನ್ನ ಹೆಚ್ಚುವರಿ ಬೌಲಿಂಗ್ ಕೋಚ್ ಆಗಿ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡಿದ್ದರು. ಇನ್ನು ಕಾರ್ಲ್ ಹಾಪ್ಕಿನ್ಸನ್ 2024 ರಲ್ಲಿ ತಂಡದ ಫೀಲ್ಡಿಂಗ್ ಕೋಚ್ ಆಗಿ ನೇಮಕಗೊಂಡಿದ್ದರು. ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ ಈಗ ತಮ್ಮ ಹುದ್ದೆಯಿಂದ ಕೆಳಗಿಳಿದಿದ್ದಾರೆ.















