ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಮಿಚಿಗನ್ ರಾಜ್ಯದಿಂದ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಅಬ್ದುಲ್ ಎಲ್-ಸಯೀದ್ ಅವರು ರಿಪಬ್ಲಿಕನ್ ಪಕ್ಷದ ಮೈಕ್ ರೋಜರ್ಸ್ ವಿರುದ್ಧ ಭರ್ಜರಿ ಜಯಗಳಿಸುವ ಮೂಲಕ ಅಮೆರಿಕದ ಇತಿಹಾಸದಲ್ಲೇ ಮೊದಲ ಮುಸ್ಲಿಂ ಸೆನೆಟರ್ ಆಗಿ ಆಯ್ಕೆಯಾಗಿದ್ದಾರೆ.
ದೇಶಾದ್ಯಂತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ರಿಪಬ್ಲಿಕನ್ ಪಕ್ಷಕ್ಕೆ ಹಿನ್ನಡೆಯಾಗಿದ್ದು, ಡೆಮಾಕ್ರಟ್‌ಗಳು ಸೆನೆಟ್ ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಬಲ ಪ್ರದರ್ಶನ ನಡೆಸಿದ್ದಾರೆ.
42 ವರ್ಷದ ಮಾಜಿ ಸಾರ್ವಜನಿಕ ಆರೋಗ್ಯ ಅಧಿಕಾರಿಯಾಗಿರುವ ಎಲ್-ಸಯೀದ್ ಅವರು 22 ಲಕ್ಷಕ್ಕೂ ಹೆಚ್ಚು ಮತಗಳನ್ನು ಪಡೆದು ಜಯಗಳಿಸಿದರೆ, ಅವರ ಪ್ರತಿಸ್ಪರ್ಧಿ ಮೈಕ್ ರೋಜರ್ಸ್ 20 ಲಕ್ಷ ಮತಗಳನ್ನು ಗಳಿಸಲಷ್ಟೇ ಶಕ್ತರಾದರು. ಮಿಚಿಗನ್ ರಾಜ್ಯವು ಟ್ರಂಪ್ ಆಡಳಿತದ ಅಕ್ರಮ ವಲಸೆ ತಡೆಯ ಕಾರ್ಯಾಚರಣೆಯಿಂದ ತೀವ್ರವಾಗಿ ಪ್ರಭಾವಿತಗೊಂಡಿತ್ತು. ಜುಲೈ ತಿಂಗಳಿನಲ್ಲಿ ಐಸಿಇ ಅಧಿಕಾರಿಗಳು ರಾಜ್ಯದಲ್ಲಿ 504 ಜನರನ್ನು ಬಂಧಿಸಿದ್ದು, ಇದು ಜುಲೈ 2025ಕ್ಕಿಂತ 43 ಪ್ರತಿಶತದಷ್ಟು ಹೆಚ್ಚಳವಾಗಿತ್ತು.
ಗೆಲುವಿನ ನಂತರ ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಧನ್ಯವಾದ ತಿಳಿಸಿದ ಎಲ್-ಸಯೀದ್, “ಮಿಚಿಗನ್‌ನಿಂದ ಯುಎಸ್ ಸೆನೆಟರ್ ಆಗಿ ಸೇವೆ ಸಲ್ಲಿಸಲು ನನಗೆ ಅತ್ಯಂತ ಗೌರವ ಮತ್ತು ಸೌಭಾಗ್ಯ ಸಿಕ್ಕಿದೆ. ಅವರು ಸಾಧ್ಯವಿಲ್ಲ ಎಂದು ಹೇಳಿದ್ದನ್ನು ನಾವು ಸಾಧಿಸಿ ತೋರಿಸಿದ್ದೇವೆ. ನಾವು ಒಟ್ಟಾಗಿ ಗೆದ್ದಿದ್ದೇವೆ. ಈಗ ನಿಜವಾದ ಕೆಲಸ ಪ್ರಾರಂಭವಾಗಲಿದೆ,” ಎಂದು ಬರೆದು ಕೊಂಡಿದ್ದಾರೆ.















