ಮಧ್ಯ ಪ್ರದೇಶದ ಗ್ವಾಲಿಯರ್ನಲ್ಲಿ ರವಿವಾರ (ಅ.18) ನಸುಕಿನ ವೇಳೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಶೀತಲಾ ಮಾತಾ ದೇಗುಲಕ್ಕೆ ತೆರಳುತ್ತಿದ್ದ ಭಕ್ತರ ಮೇಲೆ ಭತ್ತ ತುಂಬಿದ್ದ ಲಾರಿಯೊಂದು ಹರಿದ ಪರಿಣಾಮ ಕನಿಷ್ಠ 13 ಮಂದಿ ಸಾವನ್ನಪ್ಪಿದ್ದು, 26 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮಧ್ಯರಾತ್ರಿ 1.30ರ ಸುಮಾರಿಗೆ ಛಿನೋರ್ ರಸ್ತೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಕಡಿದಾದ ಇಳಿಜಾರು ಹೊಂದಿರುವ ಈ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಹೀಗಾಗಿ ಪೊಲೀಸರು ಭತ್ತ ತುಂಬಿದ್ದ ಲಾರಿಯನ್ನು ತಡೆದಿದ್ದರು. ಆದರೆ ಪೊಲೀಸ್ ಬ್ಯಾರಿಕೇಡ್ಗಳನ್ನು ಮುರಿದು ಮುನ್ನುಗ್ಗಿದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಇಳಿಜಾರಿನಲ್ಲಿ ವೇಗವಾಗಿ ಚಲಿಸಿ, ದೇಗುಲದ ಹೊರಗೋಡೆ ಹಾಗೂ ಪ್ರವೇಶ ದ್ವಾರಕ್ಕೆ ಢಿಕ್ಕಿ ಹೊಡೆದಿದೆ. ಈ ವೇಳೆ ರಸ್ತೆಯಲ್ಲಿ ನಡೆದುಕೊಂಡು ದೇಗುಲದತ್ತ ತೆರಳುತ್ತಿದ್ದ ಭಕ್ತರು ಲಾರಿಯಡಿ ಸಿಲುಕಿದ್ದಾರೆ. ಅಪಘಾತದ ಬಳಿಕ ಒಟ್ಟು 39 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ 13 ಮಂದಿ ಮೃತಪಟ್ಟಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗಾಯಾಳುಗಳ ಪೈಕಿ ಐದರಿಂದ ಆರು ಮಂದಿಯ ಸ್ಥಿತಿ ಗಂಭೀರವಾಗಿದ್ದು, ಮೂಳೆ ಮುರಿತದಂತಹ ಗಾಯಗಳಾಗಿವೆ. ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತದೆ. ಘಟನೆಯಲ್ಲಿ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರು ಪೊಲೀಸ್ ಸಿಬಂದಿಯೂ ಗಾಯಗೊಂಡಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.













