ಮುಂಬೈ: ಹೆಚ್ಚುತ್ತಿರುವ ಜೀವನ ವೆಚ್ಚದಿಂದಾಗಿ ಹೊಸ ದ್ವಿಚಕ್ರ ವಾಹನ ಖರೀದಿಸಲು ಸಾಧ್ಯವಾಗದೆ ಸೈಕಲ್ನಲ್ಲೇ ಮನೆಮನೆಗೆ ವಸ್ತುಗಳನ್ನು ತಲುಪಿಸುತ್ತಿದ್ದ ಮುಂಬೈನ ಬ್ಲಿಂಕಿಟ್ ಡೆಲಿವರಿ ಬಾಯ್ಗೆ ಸೋಷಿಯಲ್ ಮೀಡಿಯಾ ಪ್ರಭಾವಿ ಹಾಗೂ ಸಮಾಜ ಸೇವಕ ಹುಸೇನ್ ಮನ್ಸೂರಿ ಅವರು ಬ್ರ್ಯಾಂಡ್ ನ್ಯೂ ಸ್ಕೂಟರ್ ಉಡುಗೊರೆಯಾಗಿ ನೀಡಿ ಆಶ್ಚರ್ಯಚಕಿತಗೊಳಿಸಿದ್ದಾರೆ. ಈ ಉಡುಗೊರೆಯನ್ನು ಅನಂತ್ ಅಂಬಾನಿ ಅವರ ‘ಅನಂತ್ ಸೇವಾ ಫೌಂಡೇಶನ್’ ಪರವಾಗಿ ನೀಡಲಾಗಿದ್ದು, ಅನಿರೀಕ್ಷಿತ ಉಡುಗೊರೆ ಕಂಡ ಡೆಲಿವರಿ ಬಾಯ್ ಆನಂದಭಾಷ್ಪ ಸುರಿಸಿದ್ದಾನೆ ಎಂದು ವರದಿಯಾಗಿದೆ.
ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳಲಾದ ವಿಡಿಯೋದ ಪ್ರಕಾರ, ಮುಂಬೈ ರಸ್ತೆಯಲ್ಲಿ ಸೈಕಲ್ ಮೇಲೆ ಆರ್ಡರ್ ತಲುಪಿಸಲು ಹೋಗುತ್ತಿದ್ದ ಸುಜೀತ್ ಎಂಬ ಗಿಗ್ ಉದ್ಯೋಗಿಯನ್ನು ಹುಸೇನ್ ಮನ್ಸೂರಿ ತಡೆದು ಮಾತನಾಡಿಸುತ್ತಾರೆ. ಈ ವೇಳೆ “ಇಷ್ಟು ಕಡಿಮೆ ಆದಾಯದಲ್ಲಿ ಬೈಕ್ ಹೇಗೆ ಕೊಳ್ಳುವುದು ಸರ್, ಪ್ರತಿಯೊಂದರ ಬೆಲೆಯೂ ಗಗನಕ್ಕೇರಿದೆ” ಎಂದು ಸುಜೀತ್ ತಮ್ಮ ಆರ್ಥಿಕ ಪರಿಸ್ಥಿತಿಯನ್ನು ವಿವರಿಸುತ್ತಾರೆ. ಇದನ್ನು ಕೇಳಿದ ಮನ್ಸೂರಿ, ಆರ್ಡರ್ ತಲುಪಿಸಿ ವಾಪಸ್ ಬರುವಂತೆ ಹೇಳಿ, ನಿಮಗೊಂದು ಸರ್ಪ್ರೈಸ್ ಕಾಯುತ್ತಿದೆ ಎಂದು ತಿಳಿಸುತ್ತಾರೆ. ಸುಜೀತ್ ಹಿಂತಿರುಗಿದಾಗ, ಅವರ ಕಣ್ಣುಗಳಿಗೆ ಬಟ್ಟೆ ಕಟ್ಟಿ ಕೆಂಪು ಬಟ್ಟೆಯಿಂದ ಮುಚ್ಚಲಾಗಿದ್ದ ಉಡುಗೊರೆಯ ಬಳಿಗೆ ಕರೆದೊಯ್ಯಲಾಗುತ್ತದೆ. ಬಟ್ಟೆ ತೆರವು ಗೊಳಿಸಿ “ಇದು ಅನಂತ್ ಅಂಬಾನಿ ಜಿ ಅವರ ಕಡೆಯಿಂದ ನಿಮಗಾಗಿ ನೀಡುತ್ತಿರುವ ಸಣ್ಣ ಉಡುಗೊರೆ” ಎಂದು ಹೊಸ ಸ್ಕೂಟರ್ ಅನ್ನು ತೋರಿಸಿದಾಗ ಸುಜೀತ್ ಸಂಪೂರ್ಣವಾಗಿ ಭಾವು ಕರಾಗುತ್ತಾರೆ. ಹುಸೇನ್ ಮನ್ಸೂರಿ ಅವರನ್ನು ಅಪ್ಪಿಕೊಂಡು “ಥ್ಯಾಂಕ್ ಯು ಸರ್” ಎಂದು ಧನ್ಯವಾದ ಅರ್ಪಿಸುತ್ತಾರೆ.
ವರದಿಗಳ ಪ್ರಕಾರ, ಈ ಉಡುಗೊರೆಯು ‘ಅನಂತ್ ಸೇವಾ ಫೌಂಡೇಶನ್’ ಕೈ ಗೊಂಡ ವಿಶಿಷ್ಟ ಸಾಮಾಜಿಕ ಕಾರ್ಯಕ್ರಮದ ಭಾಗವಾಗಿದೆ. ರಾಹುಲ್ ಕನಾಲ್ ಮತ್ತು ಹುಸೇನ್ ಮನ್ಸೂರಿ ಅವರ ಸಹಯೋಗದೊಂದಿಗೆ, ನಗರದ ದೈನಂದಿನ ಚಟುವಟಿಕೆಗಳಿಗೆ ಶ್ರಮಿಸುತ್ತಿರುವ ಮುಂಬೈನ ಕಷ್ಟ ಜೀವಿಗಳಿಗೆ ಎಲೆಕ್ಟ್ರಿಕ್ ಬೈಕ್ಗಳನ್ನು ವಿತರಿಸುವ ಉಪಕ್ರಮ ಇದಾಗಿದೆ. ಈ ಹೃದಯಸ್ಪರ್ಶಿ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಈಗಾಗಲೇ 4.6 ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹುಸೇನ್ ಮನ್ಸೂರಿ ಅವರು ಈ ಹಿಂದೆಯೂ ಅಸ್ಸಾಂನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ನಿರಾಶ್ರಿತ ಕುಟುಂಬಗಳಿಗೆ ಹಾಸಿಗೆಗಳನ್ನು ವಿತರಿಸುವಂತಹ ಹಲವು ಸಾಮಾಜಿಕ ಕಾರ್ಯಗಳನ್ನು ನಡೆಸಿದ್ದಾರೆ.













