ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿಯ ಮುಂಗಾರು ಋತುವಿನಲ್ಲಿ ಎದುರಾದ ತೀವ್ರ ಮಳೆಯ ಕೊರತೆ, ಕುಡಿಯುವ ನೀರಿನ ಅಭಾವ ಹಾಗೂ ಕೃಷಿ ನಷ್ಟದಿಂದ ಎದುರಾಗಿದ್ದ ಅಭೂತಪೂರ್ವ ಸಂಕಷ್ಟಕ್ಕೆ ಕೊನೆಗೂ ಸರಕಾರದಿಂದ ಅಧಿಕೃತ ಸ್ಪಂದನೆ ದೊರೆತಿದೆ. ರಾಜ್ಯ ಸರ್ಕಾರವು ಬೆಳ್ತಂಗಡಿ ತಾಲೂಕು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ತಾಲೂಕುಗಳನ್ನು ʼಬರಪೀಡಿತ ತಾಲೂಕುʼ ಎಂದು ಅಧಿಕೃತವಾಗಿ ಘೋಷಿಸಿ ಆದೇಶ ಹೊರಡಿಸಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯ ಸರ್ಕಾರ ಹೊರಡಿಸಿರುವ ನೂತನ ಆದೇಶದ ಪ್ರಕಾರ, ದಕ್ಷಿಣ ಕನ್ನಡ ಜಿಲ್ಲೆಯ ಕೆಳಗಿನ 3 ತಾಲೂಕುಗಳನ್ನು ಮಧ್ಯಮ ಪ್ರಮಾಣದ ಬರಪೀಡಿತ ಪ್ರದೇಶಗಳೆಂದು ಗುರುತಿಸಲಾಗಿದೆ. ಬೆಳ್ತಂಗಡಿ, ಬಂಟ್ವಾಳ ಹಾಗೂ ಉಳ್ಳಾಲ ತಾಲೂಕನ್ನು ಮಧ್ಯಮ ಬರಪೀಡಿತ ಪ್ರದೇಶ ಎಂದು ಘೋಷಿಸಲಾಗಿದೆ. ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ತಾಲೂಕಿನ ಹಾಗೂ ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಕೃಷಿಕರು, ಕಾರ್ಮಿಕರು ಹಾಗೂ ಸಾರ್ವಜನಿಕರು ಅನುಭವಿಸುತ್ತಿರುವ ನೀರಿನ ಅಭಾವ ಮತ್ತು ಬೆಳೆ ನಷ್ಟದ ಕಟು ವಾಸ್ತವವನ್ನು ಸರ್ಕಾರದ ಗಮನಕ್ಕೆ ತಂದಿದ್ದರು.
ಪಶ್ಚಿಮ ಘಟ್ಟದ ಪದತಲದಲ್ಲಿರೊ ಬೆಳ್ತಂಗಡಿ ಹಾಗೂ ಜಿಲ್ಲೆಯ ಭಾಗಗಳಲ್ಲಿ ಈ ಬಾರಿ ವಾಡಿಕೆಗಿಂತ ಅತ್ಯಂತ ಕಡಿಮೆ ಮಳೆಯಾಗಿದ್ದು, ಅಂತರ್ಜಲ ಮಟ್ಟ ಕುಸಿದಿದೆ. ಅಡಿಕೆ, ತೆಂಗು, ರಬ್ಬರ್ ಮತ್ತು ಭತ್ತದ ಬೆಳೆಗಳು ಕಮರಿ ಹೋಗಿದ್ದು, ಕೃಷಿಕರು ಸಂಕಷ್ಟದಲ್ಲಿದ್ದಾರೆ. ತಕ್ಷಣವೇ ವೈಜ್ಞಾನಿಕ ಸಮೀಕ್ಷೆ ನಡೆಸಿ ಬೆಳ್ತಂಗಡಿಯನ್ನ ಬರಪೀಡಿತ ತಾಲೂಕು ಪಟ್ಟಿಗೆ ಸೇರಿಸಬೇಕು ಮತ್ತು ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಶಾಸಕರು ಅಧಿವೇಶನದ ಕಲಾಪದಲ್ಲಿ ಆಗ್ರಹಿಸಿದ್ದರು ಎಂದು ತಿಳಿದು ಬಂದಿದೆ.
ಆದೇಶವು ತಕ್ಷಣದಿಂದ ಜಾರಿಗೆ ಬಂದಿದ್ದು, ಮುಂದಿನ 6 ತಿಂಗಳ ಕಾಲ ಚಾಲ್ತಿಯಲ್ಲಿರಲಿದೆ. ಬರಪೀಡಿತ ಘೋಷಣೆಯಿಂದಾಗಿ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಅಭಾವ ಎದುರಾಗದಂತೆ ಪರ್ಯಾಯ ವ್ಯವಸ್ಥೆ ಮಾಡಲು ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಕ್ರಮ ವಹಿಸಲು ಹಾದಿ ಸುಗಮವಾಗಿದೆ ಎಂದು ವರದಿಯಾಗಿದೆ.













