ಮಂಗಳೂರು: ನಗರದ ವಿವಿದೆಡೆ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಬೃಹತ್ ಜಾಲವನ್ನು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ವಿಶೇಷ ತಂಡ ಭೇದಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಪ್ರಾಪ್ತ ಬಾಲಕರು ಸೇರಿದಂತೆ ಒಟ್ಟು 7 ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದಾರೆ.
ಬಂಧಿತರಿಂದ ಕಳವು ಮಾಡಲಾಗಿದ್ದ 6 ಬೈಕ್‌ಗಳು ಹಾಗೂ ಕೃತ್ಯ ಎಸಗಲು ಬಳಸಿದ್ದ 3 ಬೈಕ್‌ಗಳು ಸೇರಿದಂತೆ ಒಟ್ಟು 9 ದ್ವಿಚಕ್ರವಾಹನಗಳನ್ನು ಜಪ್ತಿ ಮಾಡಲಾಗಿದ್ದು, ಇವುಗಳ ಅಂದಾಜು ಮೌಲ್ಯ 4.50 ಲಕ್ಷ ರೂಪಾಯಿ ಎಂದು ತಿಳಿದು ಬಂದಿದೆ.
ಮಹಮ್ಮದ್ ಸಿಯಾಮ್ (19) ಶಿವನಗರ, ಮೂಡು ಶೆಡ್ಡೆ, ವಾಮಂಜೂರು. ಮುಹಮ್ಮದ್ ನಾಸೀಫ್ @ ನಸೀಫ್ (19): ಜೋಕಟ್ಟೆ, ತೋಕೂರು, ಬೈಕಂಪಾಡಿ. ಮೊಹಮ್ಮದ್ ರಾಹೀಲ್ (18): ಶಿವನಗರ, ಮೂಡು ಶೆಡ್ಡೆ, ವಾಮಂಜೂರು. ನಿಖೀಲ್ (18): ಸದಾಶಿವ ನಗರ, ತಿರುವೈಲು, ಕುಟ್ಟಿಪಲ್ಕೆ ಬಂಧಿತ ಆರೋಪಿಗಳು. ಮೂವರು ಕಾನೂನಿನೊಂದಿಗೆ ಸಂಘರ್ಷಕ್ಕೊಳಗಾದ ಬಾಲಕರು. ಮಂಗಳೂರು ದಕ್ಷಿಣ ಮತ್ತು ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ಸರಣಿ ಬೈಕ್ ಕಳ್ಳತನ ಪ್ರಕರಣಗಳು ವರದಿಯಾಗಿದ್ದವು. ದಕ್ಷಿಣ ಠಾಣಾ ವ್ಯಾಪ್ತಿ: ವೆಲೆನ್ಸಿಯಾ ಜಂಕ್ಷನ್‌ನ ಡಾನ್ ಬಾಸ್ಕೋ ಹಾಸ್ಟೇಲ್ ಬಳಿಯಿಂದ ಕೆಟಿಎಂ ಡ್ಯೂಕ್, ಜಪ್ಪು ಮಾರ್ಕೆಟ್ ಬಳಿಯಿಂದ ಯಮಹಾ ಎಫ್‌ಜೆಡ್, ಅತ್ತಾವರ ಕೆಎಮ್‌ಸಿ ಆಸ್ಪತ್ರೆ ಬಳಿಯಿಂದ ಬಜಾಜ್ ಡಿಸ್ಕವರಿ ಹಾಗೂ ಹೊಯಿಗೆ ಬಜಾರ್‌ನ ಭಗವತಿ ಅಪಾರ್ಟ್‌ಮೆಂಟ್ ಕೆಳಗಿನಿಂದ ಕೆಟಿಎಂ ಡ್ಯೂಕ್ ಬೈಕ್‌ಗಳು ಕಳವಾಗಿದ್ದವು. ಉಳ್ಳಾಲ ಠಾಣಾ ವ್ಯಾಪ್ತಿ: ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆ ಬಳಿಯಿಂದ ರಾಯಲ್ ಎನ್‌ಫೀಲ್ಡ್ ಬುಲೆಟ್ ಹಾಗೂ ಕುತ್ತಾರ್ ಪಂಡಿತ್ ಹೌಸ್ ಬಳಿಯಿಂದ ಯಮಹಾ ಎಫ್‌ಜೆಡ್ ಬೈಕ್‌ಗಳುವಾಗಿದ್ದವು.
ಆರೋಪಿಗಳನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿದಾಗ, ಸರಗಳ್ಳತನದಂತಹ ಇತರ ಅಪರಾಧ ಕೃತ್ಯಗಳನ್ನು ಎಸಗಲು ಮತ್ತು ಅದರಿಂದ ಬರುವ ಹಣದಿಂದ ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ ದುಬಾರಿ ಮೋಟಾರ್ ಸೈಕಲ್‌ಗಳನ್ನು ಗುರಿಯಾಗಿಸಿಕೊಂಡು ಕಳವು ಮಾಡುತ್ತಿದ್ದುದಾಗಿ ತಿಳಿದು ಬಂದಿದೆ. ಕಳವು ಮಾಡಿದ ಬೈಕ್‌ಗಳನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರೆಂದು ತನಿಖೆಯಿಂದ ಬಹಿರಂಗವಾಗಿದೆ. ಬಂಧಿತ ನಾಲ್ವರು ಪ್ರಮುಖ ಆರೋಪಿಗಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಾಘವೇಂದ್ರ ಬೈಂದೂರ್ ನೇತೃತ್ವದಲ್ಲಿ ಎಸ್ಐ ಮಾರುತಿ ಹಾಗೂ ಕ್ರೈಂ ಸಿಬ್ಬಂದಿಗಳಾದ ಲಕ್ಷ್ಮಣ ಸಾಲೋಟಗಿ, ಪುಟ್ಟರಾಮ್, ಸಾಗರ ದೇವಕತ್ತಿ, ಆಂಜನೇಯ ಕೆ.ಎಸ್, ರವರು ಭಾಗವಹಿಸಿದ್ದು, ಮಂಗಳೂರು ದಕ್ಷಿಣ ಠಾಣಾ ಅಧಿಕಾರಿ ಹಾಗೂ ಸಿಬ್ಬಂದಿವರ್ಗದವರು ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ತಿಳಿಸಿದರು.













