ಬಾಲ್ಯದಲ್ಲಿ ಅಂಗಡಿಗೆ ಹೋಗಿ ‘ಪಾರ್ಲೆ-ಜಿ’ ಬಿಸ್ಕತ್ ತಂದ ನೆನಪು ಪ್ರತಿಯೊಬ್ಬರಿಗೂ ಇರುತ್ತದೆ. ಬಿಸಿ ಬಿಸಿ ಟೀ ಜೊತೆಗೆ ಈ ಬಿಸ್ಕೆಟ್ ಅದ್ದಿ ತಿನ್ನುವ ಮಜವೇ ಬೇರೆ. ಕಾಲ ಬದಲಾದಂತೆ ಮಾರುಕಟ್ಟೆಗೆ ನೂರಾರು ಬಗೆಯ, ವಿಧವಿಧದ ಬಿಸ್ಕತ್ಗಳು ಬಂದಿರಬಹುದು, ಕೆಲವರು ಇದನ್ನು ಸಾಮಾನ್ಯ ಬಿಸ್ಕತ್ ಎಂದು ಹಗುರವಾಗಿ ಕಾಣಬಹುದು. ಆದರೆ, ಇಂದಿಗೂ ಸಣ್ಣ ಹಳ್ಳಿಯ ಪೆಟ್ಟಿ ಅಂಗಡಿಯಿಂದ ಹಿಡಿದು ದೊಡ್ಡ ನಗರಗಳ ಹೈಫೈ ಮಾರ್ಟ್ ಗಳವೆರೆಗೂ ತನ್ನದೇ ಆದ ಸ್ಥಾನವನ್ನು ಕಾಯ್ದುಕೊಂಡು ಬಂದಿರುವ ಏಕೈಕ ಬಿಸ್ಕತ್ ಎಂದರೆ ಅದು ಪಾರ್ಲೆ-ಜಿ.
ಈ ʼಪಾರ್ಲೆ-ಜಿʼ ಬಿಸ್ಕತ್ ಈಗ ಗಡಿ ದಾಟಿ ವಿದೇಶಿಯರ ಮನಸ್ಸಿಗೂ ತಲುಪಿದೆ. ಕೆನಡಾ ಮೂಲದ ಮಹಿಳೆಯೊಬ್ಬರು ಮೊದಲ ಬಾರಿಗೆ ಪಾರ್ಲೆ-ಜಿ ಬಿಸ್ಕತ್ ಸವಿದು, ಅದರ ರುಚಿಗೆ ಸಂಪೂರ್ಣವಾಗಿ ಮನಸೋತಿದ್ದಾರೆ. ಪ್ರಸ್ತುತ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಭಾರತೀಯ ನೆಟ್ಟಿಗರ ಬಾಲ್ಯದ ಸುಂದರ ನೆನಪುಗಳನ್ನು ಮರುಕಳಿಸುವಂತೆ ಮಾಡಿದೆ.
‘ವೆಗ್ ಮೊಮೋ’ ಎಂಬ ಜನಪ್ರಿಯ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಕೆನಡಿಯನ್ ಮಹಿಳೆಯ ಮುಂದೆ ಭಾರತದ ಪ್ರಸಿದ್ಧ ಪಾರ್ಲೆ-ಜಿ ಬಿಸ್ಕತ್ ಪ್ಯಾಕೇಜ್ ಇಟ್ಟಿರುವುದನ್ನು ಕಾಣಬಹುದು. ಕುತೂಹಲದಿಂದಲೇ ಬಿಸ್ಕೆಟ್ ತೆಗೆದು ಸವಿಯುವ ಆಕೆ, ಅದರ ರುಚಿ ನೋಡಿ ಆಶ್ಚರ್ಯ ಹಾಗೂ ಸಂತಸದಿಂದ ʼಖಂಡಿತವಾಗಿಯೂ ಇದರ ರುಚಿ ಅತ್ಯುತ್ತಮವಾಗಿದೆʼ ಎನ್ನುವಂತೆ ಮುಖದಲ್ಲಿ ಅದ್ಭುತ ರಿಯಾಕ್ಷನ್ ನೀಡುತ್ತಾರೆ. ಭಾರತೀಯರ ಸಾಂಪ್ರದಾಯಿಕ ಸ್ನ್ಯಾಕ್ ಒಂದಕ್ಕೆ ವಿದೇಶಿ ಮಹಿಳೆ ನೀಡಿದ ಈ ಸರಳ ಹಾಗೂ ಪ್ರಾಮಾಣಿಕ ಪ್ರತಿಕ್ರಿಯೆ ಈಗ ನೆಟ್ಟಿಗರ ಹೃದಯ ಗೆದ್ದಿದೆ.
ಒಬ್ಬ ಬಳಕೆದಾರರು, “ಪಾರ್ಲೆ-ಜಿ ಬಿಸ್ಕತ್ ಅನ್ನು ನೀರು ಅಥವಾ ಚಹಾದಲ್ಲಿ ಅದ್ದಿ ತಿಂದರೆ ಸಿಗುವ ಸುಖವೇ ಬೇರೆ, ಅದೇ ಬೆಸ್ಟ್ ಕಾಂಬಿನೇಷನ್” ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಇನ್ನೊಬ್ಬರು, “ಈ ಬಿಸ್ಕತ್ನ ರುಚಿ ಪ್ರತಿಯೊಬ್ಬ ಭಾರತೀಯನಿಗೂ ಗೊತ್ತು, ಇದರ ಮೌಲ್ಯ ತಿಳಿದವರೇ ಬಲ್ಲರು” ಎಂದು ಬರೆದುಕೊಂಡಿದ್ದಾರೆ. ಇನ್ನು ಕೆಲವರು ತಮಾಷೆಯಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.













