ಬೆಂಗಳೂರು : ಪೊಲೀಸರು ಶ್ರೀಕೃಷ್ಣ ಪರಮಾತ್ಮನ ವಂಶಕ್ಕೆ ಸೇರಿದವರು. ನಿಮ್ಮ ರಕ್ಷಣೆಯಿಂದಲೇ ನಾವು ನೆಮ್ಮದಿಯಿಂದ ಇದ್ದೀವಿ ಎಂದು ಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಪೊಲೀಸ್ ಹುತಾತ್ಮರ ಸಂಸ್ಮರಣಾ ದಿನ ಆಚರಣೆ ಹಿನ್ನೆಲೆಯಲ್ಲಿ ಬೆಂಗಳೂರಿನ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮೆಲ್ಲರಿಗಾಗಿ ನೀವು ಬದುಕನ್ನು ಮೀಸಲಿಟ್ಟಿದ್ದೀರಿ. ಎಲ್ಲಾ ಸಿಬ್ಬಂದಿಯ ಕುಟುಂಬದವರಿಗೆ ಸರ್ಕಾರದ ಪರವಾಗಿ ನಮಸ್ಕಾರಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ. ಚೀನಾದ ದಾಳಿಗೆ ಹತ್ತು ಮಂದಿ ಪೊಲೀಸರು ಹುತಾತ್ಮರಾಗಿದ್ದರು. ಅಂದಿನಿಂದ ಹುತಾತ್ಮ ದಿನವನ್ನು ನಡೆಸಿಕೊಂಡು ಬರುತ್ತಿದ್ದೇವೆ, ಎಲ್ಲಾ ಹುತಾತ್ಮರ ಕುಟುಂಬದ ಜೊತೆಗೆ ನಮ್ಮ ಸರ್ಕಾರ ಇದ್ದೇ ಇರುತ್ತದೆ. ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆ ದೇಶದ ಪೊಲೀಸರಿಗೆ ಗೌರವವನ್ನು ತಂದಿದೆ ಎಂದು ಹೇಳಿದ ಡಿಕೆ ಶಿವಕುಮಾರ್, ನಾನು ಆಗಾಗ ಹೇಳ್ತೇನೆ, ನೀವೆಲ್ಲಾ ಶ್ರೀಕೃಷ್ಣ ಪರಮಾತ್ಮನ ವಂಶಕ್ಕೆ ಸೇರಿದವರು. ಸಮಾಜದಲ್ಲಿ ಸುವ್ಯವಸ್ಥೆ ಹದಗೆಟ್ಟಾಗ ನಿಮ್ಮ ರಕ್ಷಣೆ ಎಲ್ಲರನ್ನ ಕಾಪಾಡುತ್ತದೆ ಎಂದು ಹೇಳಿದರು.
ಶೀಘ್ರವೇ ಖಾಲಿ ಇರುವ 7900ಕ್ಕೂ ಅಧಿಕ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ. ಪೊಲೀಸರಿಗೆ ವಸತಿ, ವಾಹನಗಳು, ತಂತ್ರಜ್ಞಾನದ ವ್ಯವಸ್ಥೆಗೆ ಅನುದಾನವನ್ನು ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.













