ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿರುವ ದುಬಾರೆ ಆನೆ ಶಿಬಿರವನ್ನು ಇದೇ ಸೆಪ್ಟೆಂಬರ್ 20ರಿಂದ ಸಾರ್ವಜನಿಕರ ವೀಕ್ಷಣೆಗೆ ಪುನರಾರಂಭಿಸಲಾಗುತ್ತಿದೆ. ಕರ್ನಾಟಕ ಸರ್ಕಾರದ ಆನೆ ಶಿಬಿರಗಳಿಗಾಗಿ ರೂಪಿಸಿರುವ ಪ್ರಮಾಣಿತ ಕಾರ್ಯಾಚರಣಾ ವಿಧಾನ (SOP)ವನ್ನು ಅನುಷ್ಠಾನಗೊಳಿಸಿದ ಬಳಿಕ ಶಿಬಿರವನ್ನು ಮತ್ತೆ ಪ್ರವಾಸಿಗರಿಗೆ ತೆರೆಯಲಾಗುತ್ತಿದೆ.
ಆರಂಭಿಕ ಹಂತದಲ್ಲಿ ಬೆಳಗ್ಗೆ 9.30ರಿಂದ 11.30ರವರೆಗೆ ಮಾತ್ರ ಶಿಬಿರದ ಚಟುವಟಿಕೆಗಳು ನಡೆಯಲಿವೆ. ಪರಿಸ್ಥಿತಿಯನ್ನು ಪರಿಶೀಲಿಸಿದ ಬಳಿಕ ಮುಂದಿನ ದಿನಗಳಲ್ಲಿ ಕಾರ್ಯಾಚರಣೆಯ ಸಮಯವನ್ನು ವಿಸ್ತರಿಸುವ ಕುರಿತು ನಿರ್ಧರಿಸಲಾಗುವುದು ಎಂದು ಅರಣ್ಯ ಇಲಾಖೆ ತಿಳಿಸಿದೆ.
ಹೊಸ SOP ಅನ್ವಯ ಪ್ರವಾಸಿಗರು ಮತ್ತು ಆನೆಗಳ ನಡುವೆ ಯಾವುದೇ ರೀತಿಯ ನೇರ ಸಂಪರ್ಕದ ಅವಕಾಶ ಇರುವುದಿಲ್ಲ. ಪ್ರವಾಸಿಗರಿಂದ ಆನೆಗಳಿಗೆ ಸ್ನಾನ ಮಾಡಿಸುವುದು ಹಾಗೂ ಆಹಾರ ನೀಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪ್ರವಾಸಿಗರ ಪ್ರವೇಶವನ್ನು ನಿಗದಿತ ಸಂಖ್ಯೆಯ ಬ್ಯಾಚ್‌ಗಳ ಮೂಲಕ ನಿಯಂತ್ರಿಸಲಾಗುತ್ತಿದ್ದು, ಪ್ರತಿ ಬ್ಯಾಚ್‌ಗೆ ಸುಮಾರು 45 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ. ಒಂದು ಬ್ಯಾಚ್‌ನಲ್ಲಿ ಗರಿಷ್ಠ 150 ಪ್ರವಾಸಿಗರಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತದೆ. ಶಿಬಿರದ ವೀಕ್ಷಣೆ ಹಾಗೂ ಮಾಹಿತಿಯನ್ನು ಶಿಬಿರದ ಮಾರ್ಗದರ್ಶಕರ ನೇತೃತ್ವದಲ್ಲಿ ನೀಡಲಾಗುತ್ತದೆ.
ಆನೆಗಳ ಕಲ್ಯಾಣ, ಪ್ರವಾಸಿಗರ ಸುರಕ್ಷತೆ ಹಾಗೂ ಶಿಬಿರದ ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಅರಣ್ಯ ಇಲಾಖೆ ಸೂಚಿಸುವ ಎಲ್ಲಾ ಸುರಕ್ಷತಾ ನಿಯಮಗಳನ್ನು ಪ್ರವಾಸಿಗರು ಕಡ್ಡಾಯವಾಗಿ ಪಾಲಿಸುವಂತೆ ಮನವಿ ಮಾಡಿದೆ.













