ವೆಲ್ಲೂರು: ಅಪರಿಚಿತ ಮಹಿಳೆಯೊಬ್ಬರಿಗೆ ವಾಟ್ಸಾಪ್ ಮೂಲಕ ಗೌಪ್ಯ ಸೇನಾ ಮಾಹಿತಿಯನ್ನು ಸೋರಿಕೆ ಮಾಡಿದ ಆರೋಪದ ಮೇಲೆ ಭಾರತೀಯ ಸೇನೆಯ ನಿವೃತ್ತ ಕ್ಯಾಪ್ಟನ್ ಒಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು 52 ವರ್ಷದ ಬಾಬು ಪಿ. ಎಂದು ಗುರುತಿಸಲಾಗಿದೆ. ಸೇನಾ ಉಪಕರಣಗಳಿಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಮಹಿಳೆಯೊಂದಿಗೆ ಹಂಚಿಕೊಂಡ ಆರೋಪ ಅವರ ಮೇಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಬು ಅವರು ಭಾರತೀಯ ಸೇನೆಯಲ್ಲಿ 28 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಸೇನಾ ಉಪಕರಣಗಳು ಮತ್ತು ಫಿರಂಗಿ ದಳ (ಆರ್ಟಿಲರಿ ವಿಂಗ್) ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸಿದ್ದ ಅವರು, 2025ರಲ್ಲಿ ಕ್ಯಾಪ್ಟನ್ ಹುದ್ದೆಯಿಂದ ನಿವೃತರಾಗಿದ್ದರು. ಬಳಿಕ ವೆಲ್ಲೂರು ಜಿಲ್ಲೆಯ ಕನಿಯಂಬಾಡಿ ಸಮೀಪದ ಕೀಜ್‌ವಲ್ಲಂ ಗ್ರಾಮದಲ್ಲಿ ವಾಸಿಸುತ್ತಿದ್ದರು. ಸುಮಾರು ಒಂದು ವರ್ಷದ ಹಿಂದೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (DRDO) ಯೋಜನೆಯೊಂದರಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡ ಮಹಿಳೆಯೊಬ್ಬರು ವಾಟ್ಸಾಪ್ ಮೂಲಕ ಬಾಬು ಅವರನ್ನು ಸಂಪರ್ಕಿಸಿದ್ದರು. ಕಾಲಕ್ರಮೇಣ ಇಬ್ಬರ ನಡುವಿನ ಸಂಭಾಷಣೆ ವೈಯಕ್ತಿಕ ಸ್ವರೂಪ ಪಡೆದುಕೊಂಡಿತ್ತು. ಇಬ್ಬರೂ ವೀಡಿಯೊ ಕರೆಗಳ ಮೂಲಕವೂ ಮಾತನಾಡುತ್ತಿದ್ದರು. DRDO ಯೋಜನೆಯ ನೆಪದಲ್ಲಿ ಮಹಿಳೆ ಸೂಕ್ಷ್ಮ ಸೇನಾ ಮಾಹಿತಿಯನ್ನು ಕೇಳಿ ಪಡೆಯುತ್ತಿದ್ದಳು ಎಂದು ಆರೋಪಿಸಲಾಗಿದೆ. ಬಾಬು ಅವರು ತಮ್ಮ ಬಳಿಯಿದ್ದ ಮಾಹಿತಿಯನ್ನು ಆಕೆಯೊಂದಿಗೆ ಹಂಚಿಕೊಂಡಿದ್ದಲ್ಲದೆ, ಆಕೆ ಕೇಳಿದ ಹೆಚ್ಚುವರಿ ಮಾಹಿತಿಯನ್ನು ಸಂಗ್ರಹಿಸಲು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹಾಗೂ ನಿವೃತ್ತರಾದ ಸಹೋದ್ಯೋಗಿಗಳಿಗೆ ಮತ್ತು ಸೇನಾ ಕಚೇರಿಗಳಿಗೆ ಕರೆ ಮಾಡಿದ್ದರು ಎನ್ನಲಾಗಿದೆ.
ಮಹಿಳೆಯ ಗುರುತು ಮತ್ತು ಆಕೆಯ ಇರುವಿಕೆಯನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಕೇಂದ್ರೀಯ ಗುಪ್ತಚರ ಅಧಿಕಾರಿಗಳು ಎರಡು ದಿನಗಳ ಕಾಲ ಜಂಟಿ ವಿಚಾರಣೆ ನಡೆಸಿದ ಬಳಿಕ ಬಾಬು ಅವರನ್ನು ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಿದರು. ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 152 ಹಾಗೂ ಅಧಿಕೃತ ರಹಸ್ಯಗಳ ಕಾಯ್ದೆ, 1923ರ ಸೆಕ್ಷನ್‌ಗಳಾದ 3(1)(c) ಮತ್ತು 5(1)(a) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಶನಿವಾರ ಅವರನ್ನು ವೆಲ್ಲೂರು ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.













