ಕಟೀಲು ಮೇಳದಲ್ಲಿ ಹಾಸ್ಯಕಲಾವಿದರಾಗಿದ್ದ ಎಂ.ಟಿ. ಸುಂದರ ಕುಲಾಲ್ ಅವರು ಇಂದು ಬೆಳಗ್ಗಿನ ಜಾವ ನಿಧನರಾಗಿದ್ದಾರೆ. ಮೇಳದಲ್ಲಿ ತನ್ನ ವಿಭಿನ್ನ ಶೈಲಿಯ ಹಾಸ್ಯದ ಮೂಲಕ ಜನಮನ್ನಣೆ ಗಳಿಸಿದ್ದ ಅವರು ಇಹಲೋಕ ತ್ಯಜಿಸಿದ್ದಾರೆ.
ತಮ್ಮ ಸೋದರಮಾವನಿಂದ ಬೇತಕುಂಞಿ ಕುಲಾಲ್ ಅವರಿಂದ ಯಕ್ಷಗಾನ ಕಲಿತ ಇವರು ಧರ್ಮಸ್ಥಳ, ಮುಲ್ಕಿ, ಸುರತ್ಕಲ್, ಕುಂಬ್ಳೆ, ಬಪ್ಪನಾಡು ಹಾಗೂ ಕಟೀಲು ಮೇಳಗಳಲ್ಲಿ ಸುಮಾರು ಆರು ದಶಕಗಳ ಕಾಲ ಕಲಾ ಸೇವೆ ಸಲ್ಲಿಸಿದ್ದರು.
ಪ್ರತಿಭೆಯ ಕುಂಚವಾಗಿದ್ದ ಕುಲಾಲ್ ರಾಜವೇಷ, ಪೋಷಕ ವೇಷ, ಸ್ತ್ರೀ ಹಾಗೂ ಹಾಸ್ಯ ಪಾತ್ರಗಳನ್ನು ನಿರ್ವಹಿಸಿ ಯಕ್ಷಲೋಕದಲ್ಲಿ ತನ್ನದೇ ಛಾಪು ಮೂಡಿಸಿದ್ದರು.
ಮೃತರು ಪತ್ನಿ, ಪುತ್ರಿ ಹಾಗೂ ಇಬ್ಬರು ಪುತ್ರರು ಸೇರಿದಂತೆ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಯಕ್ಷಗಾನ ಲೋಕಕ್ಕೆ ಇದು ತುಂಬಲಾರದ ನಷ್ಟವಾಗಿದೆ.













