ನವದೆಹಲಿ: ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಕುರಿತು ಮಾಹಿತಿ ನೀಡಿದವರಿಗೆ ಬಹುಮಾನದ ಮೊತ್ತವನ್ನು ಹೆಚ್ಚಿಸಿರುವ ಪಾಕಿಸ್ತಾನದ ಕ್ರಮವನ್ನು ಭಾರತ ಸರ್ಕಾರ “ಇದೊಂದು ನಾಟಕ”ಎಂದು ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರತಿಕ್ರಿಯಿಸಿದೆ.
ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾತನಾಡಿ, “ಪಾಕಿಸ್ತಾನದ ಇಂತಹ ಚಾಣಾಕ್ಷತನ ಹಾಗೂ ಕಣ್ಮರೆಸುವ ತಂತ್ರಗಳು ನಮಗೆ ಹೊಸದೇನಲ್ಲ. ಇಂತಹ ತಂತ್ರಗಳನ್ನು ನಾವು ಭೂತಕಾಲದಲ್ಲೂ ಹಲವು ಬಾರಿ ನೋಡಿದ್ದೇವೆ. ಖಾಲಿ ಘೋಷಣೆಗಳನ್ನು ಮಾಡುವುದನ್ನು ಬಿಟ್ಟು ಪಾಕಿಸ್ತಾನ ಉಗ್ರರ ವಿರುದ್ಧ ನಿಜವಾದ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಇನಾಮು ಹೆಚ್ಚಳ: ಪಾಕಿಸ್ತಾನದ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ ತನ್ನ ‘2026ರ ಅತ್ಯಂತ ರೇಟೆಡ್ ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿ’ಯಲ್ಲಿ ಮಸೂದ್ ಅಜರ್ ಹೆಸರನ್ನು ಸೇರಿಸಿದ್ದು, ಆತನ ಸುಳಿವು ನೀಡಿದವರಿಗೆ ನೀಡಲಾಗುವ ಬಹುಮಾನದ ಮೊತ್ತವನ್ನು 20 ಲಕ್ಷ ಪಾಕಿಸ್ತಾನಿ ರೂಪಾಯಿಗಳಿಂದ 70 ಲಕ್ಷ ಪಾಕಿಸ್ತಾನಿ ರೂಪಾಯಿಗೆ (ಸುಮಾರು ₹24 ಲಕ್ಷ ಭಾರತೀಯ ರೂಪಾಯಿ) ಹೆಚ್ಚಿಸಿದೆ.
ಜೊತೆಗೆ ಮಸೂದ್ ಅಜರ್ ತನ್ನ ದೇಶದಲ್ಲಿಲ್ಲ, ಆತ ಆಫ್ಘಾನಿಸ್ತಾನಕ್ಕೆ ಓಡಿಹೋಗಿದ್ದಾನೆ ಎಂದು ಇಸ್ಲಾಮಾಬಾದ್ ವಾದಿಸುತ್ತಿದ್ದರೆ, ಈ ವಾದವನ್ನು ಭಾರತ ಸಂಪೂರ್ಣವಾಗಿ ತಳ್ಳಿಹಾಕಿದೆ.
ಮೇ 2025 ರಲ್ಲಿ ಪಹಲ್ಲಾಮ್ ಭಯೋತ್ಪಾದಕ ದಾಳಿಯ ನಂತರ ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ ‘ಆಪರೇಷನ್ ಸಿಂದೂರ’ ವಾಯುದಾಳಿಯಲ್ಲಿ ಪಾಕಿಸ್ತಾನದ ಬಹಾವಲ್ಪುರದಲ್ಲಿದ್ದ ಜೈಷ್‌ನ ಮಾರ್ಕಜ್ ಸುಭಾನಲ್ಲಾ ಕೇಂದ್ರ ಧ್ವಂಸಗೊಂಡಿತ್ತು. ಈ ದಾಳಿಯಲ್ಲಿ ತನ್ನ ಕುಟುಂಬದ 10 ಸದಸ್ಯರು ಹಾಗೂ ನಿಕಟ ಸಹವರ್ತಿಗಳು ಹತರಾಗಿದ್ದಾರೆ ಎಂದು ಅಜರ್ ಬಹಿರಂಗಪಡಿಸಿದ್ದ.













