ಕೌಲಾಲಂಪುರ: ಒಂದೇ ವೇದಿಕೆಯಡಿ ಮಲೇಷ್ಯಾದಲ್ಲಿ ನೆಲೆಸಿರುವ ಕನ್ನಡಿಗರನ್ನು ತರುವ ಉದ್ದೇಶದಿಂದ ಮಲೇಷ್ಯಾ ಕನ್ನಡ ಸಂಘದ (MAKASA) ಅಧಿಕೃತ ವೆಬ್ಸೈಟ್ಗೆ ಚಾಲನೆ ನೀಡಲಾಗಿದೆ. ಕೌಲಾಲಂಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ರವಿ ಹೆಗಡೆ ಹಾಗೂ ನಿರೂಪಕಿ ಭಾವನಾ ವೆಬ್ಸೈಟ್ಗೆ ಚಾಲನೆ ನೀಡಿದರು.
ʼನಮ್ಮ ಭಾಷೆ–ನಮ್ಮ ಸಂಸ್ಕೃತಿ–ನಮ್ಮ ಹೆಮ್ಮೆ’ ಎಂಬ ಧ್ಯೇಯದೊಂದಿಗೆ ವೆಬ್ಸೈಟ್ ಕಾರ್ಯನಿರ್ವಹಿಸಲಿದೆ. ಮಲೇಷ್ಯಾದಲ್ಲಿರುವ ಕನ್ನಡಿಗರು ಉಚಿತವಾಗಿ ನೋಂದಾಯಿಸಿಕೊಂಡು ಇದರ ಸದುಪಯೋಗ ಪಡೆಯುವಂತೆ ಸಂಘ ಮನವಿಮಾಡಿದೆ. ಮಲೇಷ್ಯಾಕ್ಕೆ ಹೊಸದಾಗಿ ಬರುವ ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಕುಟುಂಬಗಳಿಗೆ ವಾಸ್ತವ್ಯ, ಉದ್ಯೋಗ ಹಾಗೂ ಕಾನೂನುಮಾಹಿತಿ, ಪಾಸ್ಪೋರ್ಟ್–ವೀಸಾ, ವಿಮೆ, ವೈದ್ಯಕೀಯ ತುರ್ತು ಪರಿಸ್ಥಿತಿ ಮತ್ತು ರಾಯಭಾರ ಕಚೇರಿ ಸಂಪರ್ಕದ ಮಾಹಿತಿಯನ್ನು ವೆಬ್ಸೈಟ್ನಲ್ಲಿಯೇ ಒದಗಿಸಲಾಗುತ್ತದೆ. ಉದ್ಯೋಗಾವಕಾಶಗಳು, ಕನ್ನಡಿಗರ ಉದ್ಯಮಗಳ ಮಾಹಿತಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಮುದಾಯದ ನೆರವಿನ ಮಾಹಿತಿಗೂ ವೇದಿಕೆಯಲ್ಲಿ ಅವಕಾಶ ಕಲ್ಪಿಸಿದೆ.
ಮಲೇಷ್ಯಾದಲ್ಲಿರುವ ಎಲ್ಲಾ ಕನ್ನಡಿಗರು www.malaysiakannadasangha.com ಗೆ ಭೇಟಿ ನೀಡಿ ಹೆಸರನ್ನು ನೋಂದಾಯಿಸಿಕೊಳ್ಳಬಹುದು.
ಈ ಕಾರ್ಯಕ್ರಮದಲ್ಲಿ ಕಿರಣ್ ಕುಮಾರ್ ರೋಣದ್, ಮಹಿದಳವಾಯಿ, ಸಿದ್ದು ಮಠ, ಪ್ರಸನ್ನ ಕುಮಾರ್, ಮೊಹಮ್ಮದ್ ಗೌಸ್ ಆಕ್ಕಿ, ಜುಬಿಯಾ, ಶ್ರೀಕಾಂತ್ ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.













