ಪುತ್ತೂರು: ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಸಂಸ್ಥೆಯ ಮುಖ್ಯಸ್ಥರಾಗಿದ್ದ ದಿ. ಸರಾಫ್ ಮುಳಿಯ ಶ್ಯಾಮ್ ಭಟ್ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಹಾಗೂ ಭಾವಪೂರ್ಣ ನಾದ- ನುಡಿ ನಮನ ಕಾರ್ಯಕ್ರಮವು ಸಾರ್ಥಕ ಎಂಬ ಹೆಸರಿನಲ್ಲಿ ಶನಿವಾರ ನಗರದ ಪಾಂಗಳಾಯಿ ಶ್ಯಾಮಲೋಚನಾದಲ್ಲಿ ನಡೆಯಿತು.
ದಿ.ಸರಾಫ್ ಮುಳಿಯ ಶ್ಯಾಮ್ ಭಟ್ ಅವರ ಪುತ್ರ ಕೇಶವ ಪ್ರಸಾದ್ ಮುಳಿಯ, ಸೊಸೆ ಕೃಷ್ಣವೇಣಿ ಮುಳಿಯ, ಪುತ್ರ ಕೃಷ್ಣ ನಾರಾಯಣ ಮುಳಿಯ, ಸೊಸೆ ಅಶ್ವಿನಿಕೃಷ್ಣ ಮುಳಿಯ, ಪುತ್ರಿ ಡಾ.ವಿದ್ಯಾ ಸರಸ್ವತಿ, ಅಳಿಯ ಡಾ. ಶ್ಯಾಮಸುಂದರ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುತ್ತೂರಿನ ನಾನಾ ಕ್ಷೇತ್ರಗಳ ಸುಮಾರು 36 ಗಣ್ಯರು ನುಡಿನಮನ ಸಲ್ಲಿಸಿ ದಿ.ಸರಾಫ್ ಮುಳಿಯ ಶ್ಯಾಮ್ ಭಟ್ ಅವರು ಉದ್ಯಮ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರಗಳಿಗೆ ನೀಡಿದ ಕೊಡುಗೆಯನ್ನು ಸ್ಮರಿಸಿದರು.
80 ವರ್ಷಗಳ ಹಿಂದೆ ಮುಳಿಯ ಕೇಶವ ಭಟ್ ಅವರಿಂದ ಪುತ್ತೂರಿನಲ್ಲಿ ಸ್ಥಾಪನೆಯಾದ ಮುಳಿಯ ಚಿನ್ನಾಭರಣ ಮಾರಾಟ ಮಳಿಗೆಯನ್ನು ಅನೇಕ ದಶಕಗಳ ಕಾಲ ಮುನ್ನಡೆಸಿದ ಶ್ಯಾಮ ಭಟ್ ಉದ್ಯಮದ ಜತೆ ಪುತ್ತೂರಿನ ಸಾಕ್ಷಿ ಪ್ರಜ್ಞೆಯಾಗಿ ನಾನಾ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದ್ದರು ಎಂದು ಗಣ್ಯರು ಸ್ಮರಿಸಿದರು.
ವೃತ್ತಿಯಲ್ಲಿ ಉದ್ಯಮಿಯಾಗಿ, ಪ್ರವೃತ್ತಿಯಲ್ಲಿ ಕೃಷಿಕನಾಗಿದ್ದ ಶ್ಯಾಮ್ ಭಟ್, ಕುಟುಂಬಕ್ಕೆ ಆರ್ಥಿಕ ಶಿಸ್ತಿನ ಪಾಠ ಕಲಿಸಿಕೊಟ್ಟರು. ಮನೆತನದ ಘನತೆಯನ್ನು ಎತ್ತರಕ್ಕೇರಿಸಿದ್ದಲ್ಲದೆ, ಆಲದ ಮರದಂಥ ವ್ಯಕ್ತಿತ್ವದ ಮೂಲಕ ಸಂಸ್ಥೆಯನ್ನು ಬೆಳೆಸಿದ್ದರ ಜತೆಗೆ ತಮ್ಮ ಜತೆಗಿದ್ದವರನ್ನೂ ಬೆಳೆಸಿದರು ಎಂದು ಪುತ್ರರು ನುಡಿನಮನ ಸಲ್ಲಿಸಿದರು. ತಂದೆಯವರು ಕಲಿಸಿದ ಜೀವನ ಮೌಲ್ಯಗಳನ್ನು ಪುತ್ರಿ ಡಾ. ವಿದ್ಯಾ ಸರಸ್ವತಿ ಸ್ಮರಿಸಿಕೊಂಡರು.
ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ರಾಮಕೃಷ್ಣ ಸೇವಾ ಸಮಾಜ, ವಿವೇಕಾನಂದ ವಿದ್ಯಾಸಂಸ್ಥೆಗಳು, ಜುವೆಲ್ಲರ್ಸ್ ಎಸೋಸಿಯೇಶನ್, ಆರೆಸ್ಸೆಸ್, ವಿಶ್ವ ಹಿಂದೂ ಪರಿಷತ್, ಆರ್ಚ್ ಆಫ್ ಲಿವಿಂಗ್, ಶಾರದಾ ಭಜನಾ ಮಂದಿರ, ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಸುದ್ದಿ ಬಳಗ, ಮುಂಡ್ಯತ್ತಾಯ ದೈವಸ್ಥಾನ ಸಮಿತಿ, ಕ್ಯಾಂಪ್ಕೋ, ಹವ್ಯಕ ಫೈನಾನ್ಸ್ ಲಿಮಿಟಿಡ್, ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕ್, ಕರ್ಣಾಟಕ ಬ್ಯಾಂಕ್, ಕೆನರಾ ಬ್ಯಾಂಕ್, ಯೂನಿಯನ್ ಬ್ಯಾಂಕ್, ಸರಸ್ವತಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ, ವಿಶ್ವಕರ್ಮ ಸೇವಾ ಸಮಾಜ, ಶ್ರೀ ರಾಘವೇಂದ್ರ ಮಠ, ದ್ರಾವಿಡ ಬ್ರಾಹ್ಮಣರ ಸಂಘ, ಅಖಿಲ ಹವ್ಯಕ ಮಹಾಸಭಾ, ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್, ಲಯನ್ಸ್ ಕ್ಲಬ್, ರೋಟರಿ ಸಂಸ್ಥೆಗಳು, ಜೆಸಿಐ ಪುತ್ತೂರು, ಮಾಯಿದೆ ದೇವುಸ್ ಶಿಕ್ಷಣ ಸಂಸ್ಥೆಗಳು, ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ಅನೇಕ ಅಭಿಮಾನಿ ಸಂಸ್ಥೆಗಳ ಪ್ರತಿನಿಧಿಗಳು ನುಡಿನಮನ ಸಲ್ಲಿಸಿದರು.













