ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಖ್ಯಾತ ಶೆಫ್ ದಾಮು ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ತಮ್ಮ ಅಪಾರ ಅಡುಗೆ ಕೌಶಲ, ಕಠಿಣ ಪರಿಶ್ರಮ ಮತ್ತು ವಿಶಿಷ್ಟ ಸಾಧನೆಗಳ ಮೂಲಕ ದೇಶಾದ್ಯಂತ ಗುರುತಿಸಿಕೊಂಡಿದ್ದ ಶೆಫ್ ದಾಮು ಅವರ ನಿಧನಕ್ಕೆ ಕಿರುತೆರೆ ಲೋಕದ ಗಣ್ಯರು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ.
ಶೆಫ್ ದಾಮು ಅವರ ನಿಧನದ ಸುದ್ದಿ ಅಭಿಮಾನಿಗಳು ಮತ್ತು ಕಿರುತೆರೆ ಪ್ರೇಕ್ಷಕರಲ್ಲಿ ದುಃಖ ಮೂಡಿಸಿದೆ. ವಿಶೇಷವಾಗಿ ಅಡುಗೆ ಕಾರ್ಯಕ್ರಮಗಳ ಮೂಲಕ ಮನೆಮಾತಾಗಿದ್ದ ಅವರು, ತಮ್ಮ ಸರಳ ವ್ಯಕ್ತಿತ್ವ ಮತ್ತು ಅಡುಗೆಯ ಮೇಲಿನ ಅಪಾರ ಆಸಕ್ತಿಯಿಂದ ಪ್ರೇಕ್ಷಕರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿದ್ದರು. ಶೆಫ್ ದಾಮು ಅವರು ಅಡುಗೆ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಚೆನ್ನೈ ವಿಶ್ವವಿದ್ಯಾಲಯದಿಂದ ಹೋಟೆಲ್ ಮ್ಯಾನೇಜ್‌ಮೆಂಟ್‌ನಲ್ಲಿ ಪಿಎಚ್‌ಡಿ ಪಡೆದ ಮೊದಲ ಭಾರತೀಯ ಬಾಣಸಿಗ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದರು ಎಂದು ವರದಿಯಾಗಿದೆ. ಆರಂಭದ ದಿನಗಳಲ್ಲಿ ಎದುರಾದ ಸವಾಲುಗಳನ್ನು ಮೆಟ್ಟಿ ನಿಂತು, ಅಡುಗೆಯನ್ನೇ ತಮ್ಮ ಜೀವನದ ಗುರಿಯನ್ನಾಗಿ ಮಾಡಿಕೊಂಡ ಅವರು, ದೇಶದ ಪ್ರಮುಖ ಬಾಣಸಿಗರಲ್ಲಿ ಒಬ್ಬರಾಗಿ ಗುರುತಿಸಿಕೊಂಡರು. ಅವರ ಸಾಧನೆಗೆ ಪದ್ಮಶ್ರೀ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಸಂದಿದ್ದವು. ತಮ್ಮ ಪ್ರತಿಭೆ ಮತ್ತು ನಿರಂತರ ಪ್ರಯತ್ನದ ಮೂಲಕ ಅಡುಗೆ ಕ್ಷೇತ್ರದಲ್ಲಿ ಯಶಸ್ಸು ಗಳಿಸಬಹುದು ಎಂಬುದನ್ನು ಅವರು ತಮ್ಮ ಬದುಕಿನ ಮೂಲಕ ತೋರಿಸಿಕೊಟ್ಟಿದ್ದರು.
ಶೆಫ್ ದಾಮು ವೃತ್ತಿಜೀವನದ ಪ್ರಮುಖ ಮೈಲಿಗಲ್ಲುಗಳಲ್ಲಿ ಗಿನ್ನೆಸ್ ವಿಶ್ವ ದಾಖಲೆಯೂ ಒಂದು. 2010ರಲ್ಲಿ ಅವರು ಸತತ 24 ಗಂಟೆ, 30 ನಿಮಿಷ ಮತ್ತು 12 ಸೆಕೆಂಡುಗಳ ಕಾಲ ಅಡುಗೆ ಮಾಡುವ ಮೂಲಕ ದಾಖಲೆ ನಿರ್ಮಿಸಿದ್ದರು. ಈ ಅವಧಿಯಲ್ಲಿ ಸುಮಾರು 617 ಬಗೆಯ ಖಾದ್ಯಗಳನ್ನು ತಯಾರಿಸಿದ್ದರು. ಒಟ್ಟು ಸುಮಾರು 190 ಕೆ.ಜಿ. ಆಹಾರವನ್ನು ಸಿದ್ಧಪಡಿಸಿದ ಈ ಸಾಧನೆ ಅವರ ಅಡುಗೆ ಕೌಶಲ ಮತ್ತು ಕೆಲಸದ ಸಾಮರ್ಥ್ಯಕ್ಕೆ ಸಾಕ್ಷಿಯಾಗಿತ್ತು. ಆರೋಗ್ಯ ಸಮಸ್ಯೆಯಿಂದ ಕಾರ್ಯಕ್ರಮದಿಂದ ದೂರ ಇದ್ದರು ಎಂದು ವರದಿಯಲ್ಲಿ ತಿಳಿಸಲಾಗಿದೆ.













