ಭಾರತೀಯ ಸೇನೆಗಾಗಿ 2.12 ಲಕ್ಷ ಕೋಟಿ ರೂ. ಮೌಲ್ಯದ ಶಸ್ತ್ರಾಸ್ತ್ರಗಳನ್ನು ಖರೀದಿ ಮಾಡಲು ರಕ್ಷಣ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ರಕ್ಷಣ ಸ್ವಾಧೀನ ಮಂಡಳಿ ಒಪ್ಪಿಗೆ ನೀಡಿದೆ. ಇದರಲ್ಲಿ ಶೇ. 80ರಷ್ಟು ವಸ್ತುಗಳನ್ನು ದೇಸಿ ಕಂಪನಿಗಳಿಂದಲೇ ಖರೀದಿ ಮಾಡಲು ಒಪ್ಪಿಗೆ ದೊರೆತಿದೆ.
ಸೇನೆಗಾಗಿ ಫಿರಂಗಿ ವ್ಯವಸ್ತೆಗಳು, ಹಗುರ ಬಹುಪಯೋಗಿ ಹೆಲಿಕಾಪ್ಟರ್ಗಳು ಮತ್ತು ಕೌಂಟರ್ ಡ್ರೋನ್ ವ್ಯವಸ್ಥೆಗಳು, ನೌಕಾಪಡೆಗಾಗಿ ಅತ್ಯಾಧುನಿಕ ಕ್ಷಿಪಣಿ ನಿರೋಧಕ ವ್ಯವಸ್ಥೆಗಳು ಹಾಗೂ ವಾಯುಪಡೆಗಾಗಿ ವಾಯು ರಕ್ಷಣ ವ್ಯವಸ್ಥೆಗಳು ಮತ್ತು ಹವಾಮಾನ ರಾಡಾರ್ಗಳ ಖರೀದಿಗೆ ಒಪ್ಪಿಗೆ ನೀಡಲಾಗಿದೆ. ಈ ಬಗ್ಗೆ ಹೇಳಿಕೆ ನೀಡಿರುವ ರಕ್ಷಣ ಸಚಿವಾಲಯ, ಬಹುಪಯೋಗಿ ವಿಶೇಷ ಹೆಲಿಕಾಪ್ಟರ್ಗಳ ಖರೀದಿಯಿಂದ ಭಾರ ತೀಯ ವಾಯುಪಡೆಗೆ ಭಾರಿ ಅನುಕೂಲವಾಗಲಿದೆ.
ಆಧುನಿಕ ತಂತ್ರಜ್ಞಾನ ಹೊಂದಿರುವ ಹವಾಮಾನ ರಾಡಾರ್ ವ್ಯವಸ್ಥೆ ಹೆಚ್ಚಿನ ರೆಸಲ್ಯೂಶನ್, ಸ್ಥಳೀಯ ಹವಾಮಾನ ಕಣ್ಣಾವಲನ್ನು ಒದಗಿಸುತ್ತದೆ ಎಂದು ಹೇಳಿದೆ. ಈ ಪ್ರಸ್ತಾವಕ್ಕೆ ಒಪ್ಪಿಗೆ ಸಿಕ್ಕಿರುವುದು ರಕ್ಷಣ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಲಿದೆ ಎನ್ನಲಾಗಿದೆ.













