ಪುತ್ತೂರು ಸಾಹಿತ್ಯೋತ್ಸವ -2026! ರಾಜ್ಯಕ್ಕೇ ಮಾದರಿಯಾದ ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ತು!!

ಪುತ್ತೂರು: ಶಿಕ್ಷಣ, ಉದ್ಯೋಗ, ಆರೋಗ್ಯಕ್ಕೆ ಆದ್ಯತೆಯನ್ನು ನೀಡಿದಾಗ ನಿಜಾರ್ಥದ ಅಭಿವೃದ್ಧಿ ಸಾಕಾರ ಪಡೆಯಲು ಸಾಧ್ಯ. ಗ್ರಾಮಗಳಲ್ಲಿ ಮಕ್ಕಳ ಪ್ರತಿಭೆಗಳಿಗೆ ವೇದಿಕೆ ಸೃಷ್ಟಿ ಮಾಡಿಕೊಡುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕವು ಮಾದರಿಯಾಗಿ ಗುರುತಿಸಿಕೊಂಡಿದ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.

Advertisement

ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಹಕಾರದಲ್ಲಿ, ಹೊರನಾಡ ಕನ್ನಡಿಗ ಮಿತ್ರಂಪಾಡಿ ಜಯರಾಮ ರೈ ಅಬುಧಾಬಿ ಅವರ ಮಹಾಪೋಷಕತ್ವದಲ್ಲಿ ಹಾಗೂ ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಸಂಯೋಜನೆಯಲ್ಲಿ `ಪುತ್ತೂರು ಸಾಹಿತ್ಯೋತ್ಸವ -2026’ರ ಅಂಗವಾಗಿ ಪುತ್ತೂರಿನ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಆಯೋಜಿಸಲಾದ ಬಾಲ ಸಾಹಿತಿಗಳ ಸಮಾವೇಶ ಹಾಗೂ ಗ್ರಾಮ ಸಾಹಿತ್ಯ ಸಂಭ್ರಮದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಸ್ಪಂದನ ಸ್ಮರಣ ಸಂಚಿಕೆ ಅನಾವರಣಗೊಳಿಸಿ ಮಾತನಾಡಿದರು.
ಇಂದು ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುವಂತಹ ಕಾರ್ಯಕ್ರಮಗಳು ಕಡಿಮೆ ನಡೆಯುತ್ತಿವೆ. ಆದರೆ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಯಾದರೆ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಹೇಳಿದ ಶಾಸಕರು, ಡಾ. ಶಿವರಾಮ ಕಾರಂತರ ಬಾಲವನದಲ್ಲಿ ಜ್ಞಾನಮಂದಿರ ನಿರ್ಮಾಣ ಮಾಡಿ ಸಾಹಿತಿಗಳಿಗೆ ಅವರ ಚಟುವಟಿಕೆಗಳಿಗೆ ಪೂರಕ ವಾತಾವರಣ ನಿರ್ಮಾಣ ಮಾಡಲಾಗುವುದು ಎಂದರು. ತಾನು ಸ್ವಂತ ಖರ್ಚಿನಲ್ಲಿ ಪುತ್ತೂರಿನ ೧೦ ಮಂದಿಗೆ ಐಎಎಸ್ ಕೋಚಿಂಗ್ ಕೊಡಿಸಿದ್ದೇನೆ. ಕನ್ನಡದ ಮಕ್ಕಳು ಜಗತ್ತೇ ಗುರುತಿಸುವ ಸಾಧನೆ ಮಾಡಬೇಕು ಎಂದು ಆಶಯ ವ್ಯಕ್ತಪಡಿಸಿದರು.

Advertisement
Advertisement

ಸಾಹಿತ್ಯ ಪೋಷಕ ಮಿತ್ರಂಪಾಡಿ ಜಯರಾಮ ರೈ ಅಬುಧಾಬಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾವಿರಾರು ವರ್ಷಗಳ ಕಲೆ, ಸಂಸ್ಕೃತಿ, ಆಚರಣೆಗಳನ್ನು ಹೊಂದಿರುವ ಕನ್ನಡ ನಾಡಿನಲ್ಲಿ ಜನ್ಮ ಪಡೆದ ನಾವೆಲ್ಲರೂ ಭಾಗ್ಯವಂತರು. ನಮ್ಮ ನಾಡು, ನುಡಿಗಾಗಿ ಸೇವೆ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ. ನಾನು ಎನ್ನುವುದು ಶೂನ್ಯವೆನಿಸಿ ಬಂಧು ಮಿತ್ರರು, ಸಮಾಜದ ಆಶೀರ್ವಾದ ಲಭಿಸಿದಾಗ ಸಾಧನೆ ಮಾಡಲು ಪ್ರೇರಣೆಯಾಗುತ್ತದೆ ಎಂದರು. ಕ.ಸಾ.ಪ. ಅಧ್ಯಕ್ಷ ಉಮೇಶ್ ನಾಯಕ್ ಆಶಯ ನುಡಿಗಳನ್ನಾಡಿದರು.

ಸಮಾವೇಶದಲ್ಲಿ ವಿದ್ಯಾರ್ಥಿಗಳ ಆಸಕ್ತಿ ಮತ್ತು ಅಭಿವ್ಯಕ್ತಿ ಸಾಮರ್ಥ್ಯಕ್ಕೆ ಅನುಗುಣವಾಗಿ ಐದು ಪ್ರಕಾರಗಳ ಸಾಹಿತ್ಯ ಗೋಷ್ಠಿಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸುಲೋಚನಾ ಪಿ.ಕೆ. (ಸಾಹಿತ್ಯ), ಅವಿನಾಶ್ ಭಂಡಾರ್ಕರ್(ಸಾಹಿತ್ಯ ಪೋಷಕರು), ಅಪರ್ಣ ಕೋಡೆಂಕಿರಿ(ತುಳು ಲಿಪಿ ಸಾಹಿತ್ಯ), ಅಬ್ದುಲ್ ರಜಾಕ್ ಬಪ್ಪಳಿಗೆ(ಸಮಾಜ ಸೇವೆ), ಪ್ರವೀಣ್ ವರ್ಣಕುಟಿರ(ಚಿತ್ರಕಲಾ),ಆಸ್ಕರ್ ಆನಂದ್(ಸAಘಟನೆ), ಡಾ. ಪ್ರದೀಪ್ ಕುಮಾರ್(ಆಯುರ್ವೇದ), ತೇಜಸ್(ಉರಗ ಸಂರಕ್ಷಣೆ), ಶಾಲಿನಿ ಆತ್ಮ ಭೂಷಣ್(ಭರತನಾಟ್ಯ), ಅಬ್ದುಲ್ ರಝಾಕ್ ಸಾಲ್ಮರ(ಕನ್ನಡ ವೀಕ್ಷಕ ವಿವರಣೆ), ತನುಜಾ ಝೆವಿಯರ್(ವಿಶೇಷ ಮಕ್ಕಳ ಸೇವೆ), ಬಿ. ಕೆ. ಗಣೇಶ್ ರೈ(ಕ್ರಿಯಾತ್ಮಕ ಕಲಾ ನಿರ್ದೇಶಕರು), ಸೃಜನ್ ಊರುಬೈಲು(ಪತ್ರಿಕೋದ್ಯಮ), ನಾರಾಯಣ ರೈ ಕುಕ್ಕುವಳ್ಳಿ(ಮಕ್ಕಳ ಸಾಹಿತ್ಯ-ವ್ಯಂಗ್ಯ ಚಿತ್ರ ಕಲಾ), ಚಿಗುರೆಲೆ ಸಾಹಿತ್ಯ ಬಳಗ(ಸಂಘ ಸಂಸ್ಥೆ), ರಮಣಿ ಬಾಲ ಸಮಿತಿ ಶಿವನಗರ(ಸಂಘ ಸಂಸ್ಥೆ) ಸಾಧಕ ಪುರಸ್ಕಾರ ನೀಡಿ ಗೌರವಿಸಲಾಯಿತು.

ಬಾಲ ಸಾಹಿತಿಗಳ ಸಮಾವೇಶದಲ್ಲಿ ಸರ್ವಾಧ್ಯಕ್ಷತೆಯನ್ನು ವಿವೇಕಾನಂದ ಕ.ಮಾ. ಶಾಲೆಯ ೧೦ ನೇ ತರಗತಿ ವಿದ್ಯಾರ್ಥಿನಿ ಸಾಯೀಶ್ವರಿ ವಹಿಸಿದ್ದರು. ಜಿಡೆಕಲ್ಲು ಸ. ಪ್ರ. ದ. ಕಾಲೇಜಿನ ದ್ವಿತೀಯ ಬಿ.ಎ. ವಿದ್ಯಾರ್ಥಿ ಜೀವನ್ ಎನ್. ಸಮಾರೋಪ ಭಾಷಣ ಮಾಡಿದರು. ವಿಶ್ವಗುರು ಭರತನಾಟ್ಯ ಮತ್ತು ಸಂಗೀತ ಕಲಾ ಶಾಲೆ ಕುರಿಯ ಇಲ್ಲಿನ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮ ಹಾಗೂ ಪಟ್ಟಾಭಿರಾಮ ಸುಳ್ಯ ಇವರಿಂದ ಹಾಸ್ಯ ಪ್ರಹಸನ ನಡೆಯಿತು.

ಕ.ಸಾ.ಪ. ಜಿಲ್ಲಾಧ್ಯಕ್ಷ ಶ್ರೀನಾಥ್ ಎಂ.ಪಿ., ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್, ದ.ಕ. ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮಾರೆಡ್ಡಿ, ಪುತ್ತೂರು ಸಾಹಿತ್ಯೋತ್ಸವದ ಸಂಚಾಲಕ ಹರ್ಷ ಕುಮಾರ್ ರೈ,ಕ.ಸಾ.ಪ. ಅಧ್ಯಕ್ಷ ಉಮೇಶ್ ನಾಯಕ್, ಗ್ರಾಮ ಸಾಹಿತ್ಯ ಸಂಭ್ರಮದ ಸಂಚಾಲಕ ನಾರಾಯಣ ಕುಂಬ್ರ,ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಶಶಿಕಲಾ ಹಾಗೂ ದೇವಕಿ, ಶಿಕ್ಷಣ ಸಂಯೋಜಕ ಹರಿಪ್ರಸಾದ್, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ರಮೇಶ್ಚಂದ್ರ, ವಿವೇಕಾನಂದ ಕ.ಮಾ. ಶಾಲೆಯ ಮುಖ್ಯ ಶಿಕ್ಷಕಿ ಆಶಾ ಬೆಳ್ಳಾರೆ, ಕ.ಸಾ.ಪ. ಜಿಲ್ಲಾ ಕೋಶಾಧ್ಯಕ್ಷ ಐತಪ್ಪ ನಾಯ್ಕ್, ಬೆಂಗಳೂರು ಐಎಎಸ್ ದರ್ಶನದ ಮುಖ್ಯಸ್ಥ ದರ್ಶನ್ ಗರ್ತಿಕೆರೆ, ಕ.ಸಾ.ಪ. ಘಟಕದ ಕಾರ್ಯಕಾರಿಣಿ ಸದಸ್ಯ ಅಬೂಬಕ್ಕರ್ ಆರ್ಲಪದವು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Share this article

Subscribe

By pressing the Subscribe button, you confirm that you have read our Privacy Policy.

Latest News

Advertisement

More News

You cannot copy content of this page