ಟಾಲಿವುಡ್‌ನ ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಇತ್ತೀಚೆಗೆ ಪ್ರಸಾರವಾದ ‘ಕಾಫಿ ವಿತ್ ಕರಣ್’ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ನಂತರ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ ಹಾಗೂ ಟ್ರೋಲ್‌ಗೆ ಒಳಗಾಗಿದ್ದಾರೆ. ತಮ್ಮ ವೈಯಕ್ತಿಕ ಜೀವನ ಮತ್ತು ದಾಂಪತ್ಯದ ಕುರಿತು ಹರಿದಾಡುತ್ತಿರುವ ಆಕ್ಷೇಪಾರ್ಹ ಕಾಮೆಂಟ್‌ಗಳು ಹಾಗೂ ಉಚಿತ ಸಲಹೆಗಳಿಗೆ ನಟಿ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಬರೆಯುವ ಮೂಲಕ ಖಡಕ್ ಉತ್ತರ ನೀಡಿದ್ದಾರೆ.
“ನನ್ನ ಗಂಡನನ್ನು ನಾನು 100 ಬಾರಿಯಲ್ಲ, 1000 ಬಾರಿಯಾದರೂ ಮದುವೆಯಾಗಲು (ಆಯ್ಕೆ ಮಾಡಲು) ಸಿದ್ಧ. 100 ಎಂಬುದು ನನಗೇನೂ ಅಲ್ಲ” ಎಂದು ಹೇಳುವ ಮೂಲಕ ಟ್ರೋಲರ್‌ಗಳ ಬಾಯಿ ಮುಚ್ಚಿಸಿದ್ದಾರೆ. “ಮದುವೆ ಎಂದರೆ ಕೇವಲ ಮೊಣಕಾಲೂರಿ ಪ್ರಪೋಸ್ ಮಾಡುವುದು ಅಥವಾ ಉಂಗುರ ತೊಡಿಸುವುದು ಮಾತ್ರವಲ್ಲ, ಅವು ಕೇವಲ ಅಲಂಕಾರಿಕ ಭಾಗಗಳಷ್ಟೇ. ಇಬ್ಬರೂ ಜೊತೆಯಾಗಿ ಸಾಗುವ ಜೀವನ ಮತ್ತು ಭವಿಷ್ಯವನ್ನು ಕಟ್ಟುವುದು ಮುಖ್ಯ” ಎಂದು ರಶ್ಮಿಕಾ ಸ್ಪಷ್ಟ ಪಡಿಸಿದ್ದಾರೆ. “ಕೆಲವು ವರ್ಷಗಳ ಹಿಂದೆ ನಾನು ತೀವ್ರ ಸಂಕಷ್ಟದಲ್ಲಿದ್ದಾಗ, ಅನಾರೋಗ್ಯ ಮತ್ತು ಆತಂಕದಿಂದ ಬಳಲುತ್ತಿದ್ದಾಗ ಈ ಟ್ರೋಲ್ ಮಾಡುವವರು ಯಾರೂ ಇರಲಿಲ್ಲ. ಆದರೆ ವಿಜಯ್ ನನ್ನ ಜೊತೆಗಿದ್ದರು, ಈಗಲೂ ಇದ್ದಾರೆ. ನನ್ನ ಕಷ್ಟದ ಕ್ಷಣಗಳಲ್ಲಿ ಹೆಗಲಾಗಿ ನಿಂತವರು ಅವರು ” ಎಂದು ವಿಜಯ್ ಅವರ ಬೆಂಬಲವನ್ನು ಸ್ಮರಿಸಿದ್ದಾರೆ. ತಮ್ಮ ಕುಟುಂಬದ ಬಗ್ಗೆ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಅವರು, “ಇತರರನ್ನು ತಗ್ಗಿಸಿ ಮಾತನಾಡುವುದು ಅಥವಾ ಕುಟುಂಬದವರನ್ನು ಎಳೆದು ತರುವುದು ಸ್ತ್ರೀವಾದ ಅಲ್ಲ. ಅದು ಸ್ತ್ರೀವಾದದ ಮುಸುಕಿನಲ್ಲಿ ನಡೆಯುತ್ತಿರುವ ಬೆದರಿಕೆ ಹಾಗೂ ಕಿರುಕುಳ” ಎಂದು ಹೇಳಿದ್ದಾರೆ. ತಮ್ಮ ಚಿತ್ರರಂಗದ 10 ವರ್ಷಗಳ ಸುದೀರ್ಘ ಪಯಣದಲ್ಲಿ ನಿರಂತರ ಪ್ರೀತಿ ಮತ್ತು ಬೆಂಬಲ ನೀಡುತ್ತಾ ಬಂದಿರುವ ಕನ್ನಡಿಗ ಅಭಿಮಾನಿಗಳನ್ನು ಈ ಸಂದರ್ಭದಲ್ಲಿ ಸ್ಮರಿಸಿ, ಅವರಿಗೆ ವಿಶೇಷ ಧನ್ಯವಾದ ಅರ್ಪಿಸಿದ್ದಾರೆ.
ರಶ್ಮಿಕಾ ಅವರ ಪೋಸ್ಟ್ ಬೆನ್ನಲ್ಲೇ ನಟ ವಿಜಯ್ ದೇವರಕೊಂಡ ಕೂಡ ತಮ್ಮ ಭಾವನಾತ್ಮಕ ಪ್ರತಿಕ್ರಿಯೆಯನ್ನು ಹಂಚಿಕೊಂಡಿದ್ದಾರೆ. “ನನ್ನ ಅತ್ಯುತ್ತಮ ಗೆಳತಿ, ನನ್ನ ಹೆಂಡತಿ, ನನ್ನ ಮಹಿಳೆ… ನನ್ನ ಜೀವನದಲ್ಲಿ ನಾನು ಸರಿಯಾಗಿ ಮಾಡಿರುವ ಅತ್ಯಂತ ಸುಂದರವಾದ ನಿರ್ಧಾರಗಳಲ್ಲಿ ಈಕೆ ಪ್ರಮುಖಳು” ಎಂದು ಬರೆಯುವ ಮೂಲಕ ತಮ್ಮ ಪತ್ನಿಯ ಬೆಂಬಲಕ್ಕೆ ನಿಂತಿದ್ದಾರೆ.













